ಕರ್ನಾಟಕ

karnataka

ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮೋದನೆ

By

Published : Dec 29, 2022, 2:50 PM IST

Updated : Dec 29, 2022, 10:56 PM IST

ಕರ್ನಾಟಕಕ್ಕೆ ಮಹತ್ವದ ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ(ಡಿಪಿಆರ್‌) ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

central-water-commission-approved-dpr-for-kalsa-and-bhanduri-water-project
ಕಳಸಾ ಬಂಡೂರಿ ಡಿಪಿಆರ್​ಗೆ ಕೇಂದ್ರ ಜಲ ಆಯೋಗ ಅನುಮೋದನೆ: ಪ್ರಹ್ಲಾದ್​ ಜೋಷಿ

ಕಳಸಾ-ಬಂಡೂರಿ ಡಿಪಿಆರ್‌ಗೆ ಕೇಂದ್ರ ಅನುಮೋದನೆ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಮಾತನಾಡಿದರು.

ಬೆಂಗಳೂರು: ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಜಲ ಶಕ್ತಿ ಇಲಾಖೆಯ ಸಚಿವ ಗಜೇಂದ್ರ ಸಿಂಗ್​ ಶೇಖಾವತ್ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಧನ್ಯವಾದ ಸಲ್ಲಿಸಿದ್ದಾರೆ. ಇದರ ಅನುಮೋದನೆಗಾಗಿ ರಚನಾತ್ಮಕ ಯೋಜನಾ ವರದಿಯನ್ನು ನಿರೂಪಿಸಿದ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಜಲ ಸಂಪನ್ಮೂಲ ಸಚಿವ ಗೋವಿಂದ​ ಕಾರಜೋಳ ಅವರಿಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

ಕಳಸಾ-ಬಂಡೂರಿ ಯೋಜನೆ: ಕುಡಿಯುವ ನೀರಿನ ಈ ಯೋಜನೆಯು ಕಿತ್ತೂರು ಕರ್ನಾಟಕ, ಅದರಲ್ಲೂ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ನರಗುಂದ ಭಾಗಕ್ಕೆ ತೀರ ಅವಶ್ಯಕವಾಗಿ ಬೇಕಾಗಿತ್ತು. ಇದಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ನಾವೂ ಕೂಡ ಹೋರಾಟ ಮಾಡುತ್ತಿದ್ದೆವು. ಈ ಹಿಂದೆ ಸರ್ಕಾರ ಇದ್ದಾಗ ಕುಡಿಯುವ ನೀರಿನ ಭಾಗವನ್ನು ಹೊರತು ಪಡಿಸಿ, ಇತರ ಭಾಗವನ್ನು ನ್ಯಾಯಾಧೀಕರಣಕ್ಕೆ ನೀಡಬಹುದಾಗಿತ್ತು. ಆದರೆ, ಇಡೀ ಯೋಜನೆಯನ್ನು ಕಾಂಗ್ರೆಸ್​ ಸರ್ಕಾರ ನ್ಯಾಯಾಧೀಕರಣಕ್ಕೆ ಕೊಟ್ಟಿತ್ತು ಎಂದು ಜೋಷಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮೋದಿ ನೇತೃತ್ವದ ಸರ್ಕಾರದಲ್ಲಿ ಯೋಜನೆಯ ಕುರಿತು ಗೆಜೆಟ್​ ನೋಟಿಫಿಕೇಶನ್​ ಮಾಡಿದ್ದೆವು. ಈಗ ಯೋಜನೆ ಆರಂಭಿಸಲು ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಬೇಕಾಗಿತ್ತು. ಇದಕ್ಕೆ ಪ್ರಧಾನಿ ನೇತೃತ್ವದಲ್ಲಿ ಜಲಶಕ್ತಿ ಇಲಾಖೆಯ ಸಚಿವ ಗಜೇಂದ್ರ ಸಿಂಗ್​ ಶೇಖಾವತ್ ಅನುಮೋದನೆ ನೀಡಿದ್ದಾರೆ. ಯೋಜನೆಗಾಗಿ ಬೊಮ್ಮಾಯಿ ಸರ್ಕಾರ ಕೂಡ ಸಾಕಷ್ಟು ಪರಿಶ್ರಮ ಪಟ್ಟಿದೆ. ಈ ಡಿಪಿಆರ್​ ಅಗುವುದೇ ಇಲ್ಲ ಎಂಬ ವಾತಾವರಣವನ್ನು ಅನೇಕರು ಸೃಷ್ಟಿಸಿದ್ದರು ಎಂದು ಅವರು ಹೇಳಿದರು.

ಬಹಳ ದಿನಗಳ ಕನಸು ನನಸಾಗಲಿದೆ- ಸಿಎಂ: ಈ ಬಗ್ಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ಕಳಸಾ-ಬಂಡೂರಿ ಯೋಜನೆಯು ಉತ್ತರ ಕರ್ನಾಟಕ ಭಾಗದ ಪ್ರತಿಷ್ಠೆಯ ಯೋಜನೆ. ಈ ಯೋಜನೆಗಾಗಿ ಸುಮಾರು ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಿದೆ. ಅಂತಾರಾಜ್ಯ ವ್ಯಾಜ್ಯವಾದ ಕಾರಣ ಸಾಕಷ್ಟು ಹೋರಾಟ ಮಾಡಬೇಕಾಯಿತು. 2018ರಲ್ಲಿ ನ್ಯಾಯಾಧೀಕರಣ ಅನುಮಾತಿ ನೀಡಿತ್ತು ಎಂದು ಹೇಳಿದರು.

ಬಳಿಕ ನಮಗೆ ಕಳಸಾ ಡ್ಯಾಂನಿಂದ 1.72 ಟಿಎಂಸಿ ನೀರು ಮತ್ತು ಬಂಡೂರಿ ಡ್ಯಾಂನಿಂದ 2.18 ಟಿಎಂಸಿ ನೀರು ತಿರುಗಿಸಲು ಅವಕಾಶ ಸಿಕ್ಕಿತ್ತು. ಇದಾದ ನಂತರವೂ ತಕರಾರುಗಳು ಉಂಟಾಗಿದ್ದವು. ಇದರ ನಡುವೆಯೂ ನಾವು ಯೋಜನೆ ಅನುಷ್ಠಾನಕ್ಕೆ ಡಿಪಿಆರ್​ ಸಿದ್ಧಪಡಿಸಿದ್ದವು. ಇವತ್ತು ಈ ಡಿಪಿಆರ್​ಗೆ ಒಪ್ಪಿಗೆ ನೀಡಿದ್ದಾರೆ. ಬಹಳ ದಿನಗಳ ಕನಸು ನನಸಾಗಲಿದೆ. ಅಂತಾರಾಜ್ಯ ವಿಷಯದಲ್ಲೂ ಈ ಡಿಪಿಆರ್​ ಸರಿ ಇದೆ ಎಂದು ಜಲಶಕ್ತಿ ಆಯೋಗ ತಿಳಿಸಿದೆ ಎಂದು ಸಿಎಂ ಮಾಹಿತಿ ನೀಡಿದರು.

ಇದನ್ನೂ ಓದಿ:ದಶಕಗಳ ಹೋರಾಟದ ಸಾಧಕ ಬಾಧಕ ನೋಡದ ಸರ್ಕಾರ: ಮಹದಾಯಿ ಸ್ವರೂಪ ಬದಲಾವಣೆ ಆರೋಪ..

ಪರಿಷತ್​ನಲ್ಲಿ ಸಿಎಂ:ಕಳಸಾ-ಬಂಡೂರಿ ಯೋಜನೆಗೆ ಕೂಡಲೇ ಟೆಂಡರ್ ಕರೆದು ಕಾಮಗಾರಿ ಕೆಲಸ ಆರಂಭಿಸಿ ಮಹದಾಯಿ ನೀರನ್ನು ಮಲಪ್ರಭಾಗೆ ತರಲು ಕ್ರಮ ಕೈಗೊಳ್ಳಲಾಗುತ್ತದೆ. ಸವದತ್ತಿ ಯಲ್ಲಮ್ಮನ ಒಡಲಿನಿಂದ ಬನಶಂಕರಿ ಒಡಲಿನವರೆಗೆ ನೀರು ಹರಿಸಲು ಬೇಕಾದ ಎಲ್ಲ ಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನ ಪರಿಷತ್​ನಲ್ಲಿ ಮಹಾದಾಯಿ ಡಿಪಿಆರ್​​ಗೆ ಕೇಂದ್ರದಿಂದ ಅನುಮತಿ ಸಿಕ್ಕಿರುವ ವಿಷಯ ತಿಳಿಸಿದ ಸಿಎಂ, 3 ದಶಕಗಳ ಕಾಲದ ಈ ಭಾಗದ ಜನರ ಆಶಯ, ಆಶೋತ್ತರಗಳು ಮತ್ತು ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಆರಂಭದಲ್ಲಿ ಇದು 8-10 ಜಿಲ್ಲೆಗೆ ನೀರು ಒದಗಿಸುವ ಯೋಜನೆಯಾಗಿತ್ತು. ಆದರೆ ನದಿ ಹರಿವಿನ ಪ್ರಮಾಣ ಮತ್ತು ಜಲಾಶಯದ ನಡುವೆ ನೀರು ಸಂಗ್ರಹಕ್ಕೆ ಹೆಚ್ಚಿನ ಅವಕಾಶವಿರಲಿಲ್ಲ ಹಾಗಾಗಿ ಜಲಾಶಯದಲ್ಲಿ ನೀರು ತುಂಬುತ್ತಲೇ ಇರಲಿಲ್ಲ. 1988 ರಲ್ಲಿ ಎಸ್.ಆರ್. ಬೊಮ್ಮಾಯಿ ಗೋವಾ ಸಿಎಂ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಕಳಸಾ ಬಂಡೂರಿ ನೀರು ನಮಗೆ, ವಿದ್ಯುತ್ ಅವರಿಗೆ ಎಂದಾಗಿತ್ತು, ಆದರೆ ಮುಂದೆ ಬಂದ ಗೋವಾ ಸರ್ಕಾರ ಯೋಜನೆಯನ್ನು ವಿರೋಧಿಸಿತು. ನಂತರ ಹೆಚ್.ಕೆ ಪಾಟೀಲ್ ನೀರಾವರಿ ಸಚಿವರಾದಾಗ ಯೋಜನೆ ಸ್ವರೂಪ ಬದಲಾಯಿಸಿದರು. ಮಹದಾಯಿ ಯೋಜನೆ ಹೆಸರನ್ನು ಕಳಸಾ ಬಂಡೂರಿ ಎಂದು ಬದಲಾಯಿಸಿತು. ವಾಜಪೇಯಿ ಸರ್ಕಾರ ಇದಕ್ಕೆ ಅನುಮೋದನೆ ನೀಡಿ ನಾಲ್ಕು ತಿಂಗಳಿನಲ್ಲೇ ಗೋವಾ ಆಕ್ಷೇಪಣೆ ಹಿನ್ನೆಲೆಯಲ್ಲಿ ತಡೆ ನೀಡಿತು ಎಂದರು.

ಗೋವಾ ಸಿಎಂ ಬರೆದ ಒಂದು ಪತ್ರದಿಂದ 7 ವರ್ಷ ಯೋಜನೆಗೆ ತಡೆಯಾಯಿತು. ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರದ ವೇಳೆ ಕಳಸಾ ಬಂಡೂರಿಗೆ ಅಡಿಗಲ್ಲು ಹಾಕಲಾಯಿತು. ಅರಣ್ಯೇತರ ಸ್ಥಳದಲ್ಲಿ ಕಾಮಗಾರಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಯಿತು. ಅಷ್ಟರಲ್ಲಿ ಮೈತ್ರಿ ಸರ್ಕಾರ ಪತನವಾಯಿತು. ನಂತರ ನಾನು ಜಲಸಂಪನ್ಮೂಲ ಸಚಿವನಾದೆ, ನಾಲೆಗಳ ಕಾಮಗಾರಿ ನಡೆಸಲಾಯಿತು. ನಂತರ ಸುಪ್ರೀಂ ಕೋರ್ಟ್ ಗೆ ಗೋವಾ ಹೋಯಿತು. ನಂತರ ಕೇಂದ್ರ, ಇದು ಅಂತಾರಾಜ್ಯ ವ್ಯಾಜ್ಯ ಎಂದು ಹೇಳಿತು. ನ್ಯಾಯಾಧೀಕರಣ ರಚಿಸಲಾಯಿತು. ಅದರ ಆದೇಶವೂ ಬಂದಿತು. ಡಿಪಿಆರ್​​ಗೂ ಹತ್ತು ಹಲವು ವಿಘ್ನ ಎದುರಾಯಿತು. ಯೋಜನೆ ಸ್ವರೂಪ ಸ್ವಲ್ಪ ಬದಲಾಯಿಸಿ ಕಳುಹಿಸಿ ಈಗ ಡಿಪಿಆರ್​​ಗೆ ಒಪ್ಪಿಗೆ ಪಡೆದಿದ್ದೇವೆ ಎಂದು ಯೋಜನೆ ಮಂಜೂರಾತಿಗಾಗಿ ನಡೆದ ಪ್ರಕ್ರಿಯೆಗಳ ಕುರಿತು ಸಿಎಂ ವಿವರ ನೀಡಿದರು.

Last Updated :Dec 29, 2022, 10:56 PM IST

ABOUT THE AUTHOR

...view details