ಕರ್ನಾಟಕ

karnataka

ETV Bharat / state

ಸಿಎಂ ಭೇಟಿ ಮಾಡಿದ ಕುರುಬೂರು, ಮುಖ್ಯಮಂತ್ರಿ ಚಂದ್ರು ನೇತೃತ್ವದ ನಿಯೋಗ: ಸಂಜೆ ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಎಂದ ಸಿದ್ದರಾಮಯ್ಯ

ತಜ್ಞರ ಜೊತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರೈತರ ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Delegation headed by Kuruburu, Mukhyamatri Chandru visited CM
ಕುರುಬೂರು, ಮುಖ್ಯಮಂತ್ರಿ ಚಂದ್ರು ನೇತೃತ್ವದ ನಿಯೋಗ ಸಿಎಂ ಭೇಟಿ

By ETV Bharat Karnataka Team

Published : Sep 29, 2023, 3:27 PM IST

Updated : Sep 29, 2023, 4:27 PM IST

ಮಾಧ್ಯಮಗಳ ಜೊತೆ ಮಾತನಾಡಿದ ಕುರುಬೂರು ಶಾಂತಕುಮಾರ್​

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂಬುದು ನಮ್ಮ ಅನಿಸಿಕೆಯಾಗಿದೆ. ಇಂದು ಸಂಜೆ ತಜ್ಞರ ತಂಡದ ಜತೆಗಿನ ಸಭೆ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ, ದಲಿತ, ಕಾರ್ಮಿಕ ಮತ್ತು ಕನ್ನಡ ಹೋರಾಟಗಾರರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕಾವೇರಿ ವಿವಾದ ಕುರಿತಂತೆ ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದ ಹೋರಾಟಗಾರರ ನಿಯೋಗದೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಅವರು ಈ ಭರವಸೆ ನೀಡಿದ್ದಾರೆ. ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಎರಡು ಸಮಿತಿಗಳು ಪರಿಸ್ಥಿತಿ ಅವಲೋಕನ ಮಾಡಿ ಆದೇಶ ನೀಡುತ್ತವೆ. ಬಿಳಿಗುಂಡ್ಲುವಿನಲ್ಲಿ ನೀರು ಬಿಡಬೇಕು ಎಂಬುದಾಗಿ ಆದೇಶವಾಗಿತ್ತು. ಸಾಮಾನ್ಯ ಪರಿಸ್ಥಿತಿಯಲ್ಲಿ 177.25 ಟಿ ಎಂಸಿ ನೀರನ್ನು ಒಂದು ವರ್ಷದಲ್ಲಿ ಬಿಡಬೇಕು ಎಂಬ ಆದೇಶವಿದೆ. ನಮ್ಮ ರಾಜ್ಯಕ್ಕೆ 284. 85 ಟಿಎಂಸಿ ನೀರಿನ ಅಗತ್ಯವಿದೆ. ಸುಪ್ರೀಂ ಕೋರ್ಟ್ ನಲ್ಲಿ ಸಂಕಷ್ಟ ಸೂತ್ರ ಸಿದ್ಧಪಡಿಸಿಲ್ಲ. 2 ಸಮಿತಿಗಳಾಗಬೇಕು ಎಂದು ನ್ಯಾಯಮಂಡಳಿಯೇ ತೀರ್ಮಾನ ಮಾಡಿದೆ ಎಂದು ವಿವರಿಸಿದರು.

ಈ ವರ್ಷ ಆಗಸ್ಟ್​ನಲ್ಲಿ ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆ ಉಂಟಾಗಿದೆ. ಈ ತಿಂಗಳೂ ಕೂಡ ಮಳೆ ಅಷ್ಟೇನೂ ಆಗಿಲ್ಲ. ತಮಿಳುನಾಡಿಗೆ ಹಿಂಗಾರು ಮಳೆಯಿದೆ. ಈವರೆಗೆ 43 ಟಿಎಂಸಿ ನೀರು ಹೋಗಿದೆ. 123 ಟಿಎಂಸಿ ನೀರು ಬಿಡಬೇಕು ಎಂದು ಆದೇಶವಾಗಿದೆ. ಆದರೆ, ನಾವು ನೀರು ಬಿಟ್ಟಿಲ್ಲ. ಕಾವೇರಿ ಪ್ರಾಧಿಕಾರ ಪ್ರತಿ ಬಾರಿ ಸಭೆ ಕರೆದಾಗಲೂ ನಾವು ಪ್ರತಿಭಟಿಸುತ್ತಲೇ ಬಂದಿದ್ದೇವೆ. ನೀರಿಲ್ಲ ಎಂದೇ ಹೇಳಿದ್ದೇವೆ. ಸುಪ್ರೀಂಕೋರ್ಟ್ ಮುಂದೆಯೂ ಅರ್ಜಿ ಹಾಕಿದ್ದೆವು. ನಮಗೆ ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರಿನ ಅಗತ್ಯವಿದೆ. 30 ಟಿ ಎಂಸಿ ಕುಡಿಯುವ ನೀರಿಗೆ ಬೇಕಾಗುತ್ತದೆ. ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ. ಒಟ್ಟು 106 ಟಿಎಂಸಿ ಅವಶ್ಯಕತೆ ರಾಜ್ಯಕ್ಕೆ ಇದೆ. ಆದರೆ, ನಮ್ಮ ಬಳಿ ಇರುವುದು ಕೇವಲ 50 ಟಿಎಂಸಿ ಮಾತ್ರವೇ. ಕುಡಿವ ನೀರು ನಮ್ಮ ಮೊದಲ ಆದ್ಯತೆ ಆಗಿರುವುದರಿಂದ ತಮಿಳುನಾಡಿಗೆ ನೀರು ಹರಿಸುವುದು ದುಸ್ತರ ಎಂದು ಹೇಳಿದ್ದಾರೆ.

ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಆದೇಶದಂತೆ ನಿತ್ಯ 3 ಸಾವಿರ ಕ್ಯೂಸೆಕ್​ ನೀರು ಹರಿಸಲಾಗುತ್ತಿದೆ. ಹೀಗಾಗಿ ಇಂದು ರೈತ, ದಲಿತ, ಕಾರ್ಮಿಕ ಮತ್ತು ಕನ್ನಡ ಹೋರಾಟಗಾರರು ಕರ್ನಾಟಕ ಬಂದ್​ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ನೀರಾವರಿ ತಜ್ಞರು, ಮಾಜಿ ಅಡ್ವೊಕೇಟ್ ಜನರಲ್​ಗಳೊಂದಿಗೆ ಇಂದು ಸಂಜೆ ಸಭೆ ಕರೆಯಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ನೀರು ಕೊಡಬಾರದೆಂದು ನಮ್ಮ ಅನಿಸಿಕೆ. ನೀರು ಬಿಡದಿದ್ದರೆ, ಜಲಾಶಯಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯಬಹುದು, contempt of court ಆಗುತ್ತದೆ. ಸರ್ಕಾರವನ್ನು ಡಿಸ್ಮಿಸ್ ಮಾಡಬಹುದು ಎಂದು ಪರಿಸ್ಥಿತಿಯನ್ನು ವಿವರಿಸಿದರು.

ಸಭೆಯಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್ ಅವರು, ಕರ್ನಾಟಕದ ಜನರಿಗೆ ಪೆಟ್ಟು ಬೀಳುವ ಆದೇಶ ಬೀಳುತ್ತಿದೆ. ಜನ ಆತಂಕಗೊಂಡಿದ್ದಾರೆ. ರೈತರ ಪರವಾಗಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಸಂಘಟನೆಗಳು ಜನಪರವಾಗಿ ಹೋರಾಟ ಮಾಡಿದಾಗ ಅವರ ಮೇಲೆ ಹಾಕಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಮನವಿ ಮಾಡಿದರು. ಮೇಕೆದಾಟು ಯೋಜನೆಗೆ ಶೀಘ್ರ ಕಾಯಕಲ್ಪ ನೀಡಬೇಕೆಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಪ್ರಾಧಿಕಾರದ ತೀರ್ಪು ಅವೈಜ್ಞಾನಿಕವಾಗಿದೆ. ಲೋಪ ಎಲ್ಲಿ ಆಗಿದೆ ಎಂದು ಸ್ಪಷ್ಟಪಡಿಸಬೇಕು. ನಮ್ಮ ಹಕ್ಕೊತ್ತಾಯವನ್ನು ತಮಿಳುನಾಡಿನಂತೆಯೇ ತೀವ್ರವಾಗಿ ಮಾಡಬೇಕು. ಸಂಕಷ್ಟ ಪರಿಹಾರ ಸೂತ್ರ ಇಲ್ಲದಿದ್ದರೂ ನೀರು ಬಿಡುವಂತೆ ಸೂಚಿಸುವುದು ತಪ್ಪು. ಆದೇಶ ಉಲ್ಲಂಘನೆ ಮಾಡಿದರೆ ಏನಾಗುತ್ತದೆ ಎಂದು ಪಟ್ಟಿ ಮಾಡಬೇಕು. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ತಮಿಳುನಾಡು ಬೆಳೆಗೆ ನೀರು ಕೇಳುತ್ತಿದೆ. ತಕ್ಷಣ ಸದನ ಕರೆದು ಈ ಕುರಿತು ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಿಮ್ಮ ಎಲ್ಲಾ ಬೇಡಿಕೆಗಳ ಬಗ್ಗೆ ಸಂಜೆ ತಜ್ಞರ ತಂಡದ ಜತೆಗೂ ಚರ್ಚಿಸಲಾಗುವುದು. ಬಳಿಕ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಭೆ ಬಳಿಕ ಮಾತನಾಡಿದ ಕುರುಬೂರು ಶಾಂತಕುಮಾರ್, ತಕ್ಷಣ ಕಾವೇರಿ ನೀರು ಬಿಡುಗಡೆ ನಿಲ್ಲಿಸಬೇಕು, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದುಪಡಿಸುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಮಳೆ ಪ್ರಮಾಣ ಕಡಿಮೆಯಾಗಿರುವುದೆಲ್ಲವನ್ನು ಸಿಎಂ ಒಪ್ಪಿಕೊಂಡಿದ್ದಾರೆ. ಸದ್ಯ ಸಂಕಷ್ಟ ಪರಿಸ್ಥಿತಿ ಉದ್ಭವವಾಗಿದೆ. ಇದೆಲ್ಲದರ ವಸ್ತುಸ್ಥಿತಿಯನ್ನು ನ್ಯಾಯಾಲಯ, ಪ್ರಾಧಿಕಾರಕ್ಕೆ ಮನವರಿಕೆ ಮಾಡುತ್ತಿದ್ದೇವೆ ಎಂದಿದ್ದಾರೆ. ಆದರೂ ಮತ್ತಷ್ಟು ಸಂಕಷ್ಟ ಎದುರಾಗಿರುವುದನ್ನು ಸಿಎಂ ಒಪ್ಪಿಕೊಂಡಿದ್ದಾರೆ. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು. ವಿಧಾನಮಂಡಲದ ಅಧಿವೇಶನ ಕರೆದು ಸಂಕಷ್ಟ ಸೂತ್ರವನ್ನು ರಚಿಸಬೇಕು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದುಪಡಿಸಬೇಕು. ಈ ಎಲ್ಲಾ ಬೇಡಿಕೆಯನ್ನು ಸಿಎಂ ಮುಂದೆ ಇಟ್ಟಿದ್ದೇವೆ ಎಂದರು.

ಇದನ್ನೂ ಓದಿ:ಕರ್ನಾಟಕ ಬಂದ್​ಗೆ ತುಮಕೂರಲ್ಲಿ ಉತ್ತಮ ಪ್ರತಿಕ್ರಿಯೆ: ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಆಕ್ರೋಶ

Last Updated : Sep 29, 2023, 4:27 PM IST

ABOUT THE AUTHOR

...view details