ಕರ್ನಾಟಕ

karnataka

ಬೆಂಗಳೂರು ಬಂದ್ ವೇಳೆ ಹೋಟೆಲ್‌ಗಳಿಗೆ ನುಗ್ಗಿ ದಾಂಧಲೆ ಮಾಡಿದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

By ETV Bharat Karnataka Team

Published : Sep 28, 2023, 1:19 PM IST

ಬೆಂಗಳೂರು ಬಂದ್ ವೇಳೆ ಹೋಟೆಲ್‌ಗಳಿಗೆ ನುಗ್ಗಿ ದಾಂಧಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Arrest of two accused
ಬಂದ್ ವೇಳೆ ಹೋಟೆಲ್‌ಗಳಿಗೆ ನುಗ್ಗಿ ದಾಂಧಲೆ ಮಾಡಿದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು:ಬೆಂಗಳೂರು ಬಂದ್‌ ವೇಳೆ ಹೋಟೆಲ್​ಗಳಿಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಸಂಬಂಧ ಯೋಗೀಶ್ ಹಾಗೂ ಸೋಮಶೇಖರ್ ಎಂಬ ಇಬ್ಬರು ಆರೋಪಿಗಳನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆಪ್ಟೆಂಬರ್ 26ರಂದು ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ ಸಂದರ್ಭದಲ್ಲಿ ಜಯನಗರದ ಕೆಲ ಹೋಟೆಲ್‌ಗಳಿಗೆ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಏಳೆಂಟು ಜನರು, ಹೋಟೆಲ್ ಮುಚ್ಚಿಲ್ಲವೆಂದು ಪೀಠೋಪಕರಣನ್ನೂ ಎಸೆದು, ಜಖಂಗೊಳಿಸಿ ದಾಂಧಲೆ ಮಾಡಿದ್ದಾರೆ‌. ಈ ಕೃತ್ಯ ಹೋಟೆಲ್ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಮಾನಗಳಿಗೂ ತಟ್ಟಿದ್ದ ಬಂದ್ ಬಿಸಿ:ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್ ಕರೆ ನೀಡಿದ್ದವು. ಬಂದ್ ಎಫೆಕ್ಟ್​ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಪ್ ಆಗಬೇಕಿದ್ದ 13 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಕೆಲವು ಪ್ರಯಾಣಿಕರು ಸಕಾಲಕ್ಕೆ ವಿಮಾನ ನಿಲ್ದಾಣವನ್ನು ತಲುಪಲಾಗದೇ ಇಂಡಿಗೋ ವಿಮಾನ ಸಂಸ್ಥೆಯ 10 ದೇಶಿ ವಿಮಾನಗಳ ಹಾರಾಟ ರದ್ದು ಮಾಡಲಾಗಿತ್ತು. ಜೊತೆಗೆ ಏರ್ ಏಷ್ಯಾ ಇಂಡಿಯಾ, ಆಕಾಶ್ ಏರ್, ಸ್ಟಾರ್ ಏಷ್ಯಾ ವಿಮಾನ ಸಂಸ್ಥೆಗಳ ತಲಾ ಒಂದು ವಿಮಾನ ಹಾರಾಟ ರದ್ದಾಗಿರುವ ಬಗ್ಗೆ ಕೆಐಎಎಲ್ ಮಾಹಿತಿ ಕೊಟ್ಟಿತ್ತು.

ಬಹುತೇಕ ಪ್ರಯಾಣಿಕರು ಬಂದ್​ ಇದ್ದ ದಿನ ಬೆಳಗ್ಗೆ ಬಂದು ಏರ್​ಪೋರ್ಟ್​ನಲ್ಲಿ ಕಾದು ಸುಸ್ತಾಗಿದ್ದರು. ಬಿಎಂಟಿಸಿ ವಜ್ರ ಬಸ್​ಗಳು, ಓಲಾ ಉಬರ್ ಮತ್ತು ಏರ್​ಪೋರ್ಟ್ ಟಾಕ್ಸಿಗಳು ಎಂದಿನಂತೆ ಸಂಚರಿಸುತ್ತಿದ್ದವು. ಇದರಿಂದ ಕೆಲವು ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ತಲುಪಿ ವಿಮಾನಯಾನ ಮಾಡಿದ್ದರು.

ಬೆಂಗಳೂರು ಬಂದ್​ ಬಹುತೇಕ ಶಾಂತಿಯುತ ನಡೆದಿತ್ತು. ನಗರದ ಕೆಲವು ಅಂಗಡಿ ಮುಂಗಟ್ಟುಗಳು ಹಾಗೂ ಖಾಸಗಿ ಕಂಪನಿಗಳು ಸೇರಿದಂತೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ಕೊಟ್ಟಿದ್ದವು. ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರ ತೀರಾ ಕಡಿಮೆ ಇತ್ತು. ಆಟೋ, ಕ್ಯಾಬ್‌ಗಳು, ಸಾರಿಗೆ ವಾಹನಗಳು ಮತ್ತು ನಮ್ಮ ಮೆಟ್ರೋ ಸಂಚಾರ ಎಂದಿನಂತಿತ್ತು.

ಟೌನ್‌ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ನ್ಯಾಷನಲ್ ಕಾಲೇಜು, ಮೈಸೂರು ರಸ್ತೆ ಮೈದಾನ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಬಿಜೆಪಿ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಇದನ್ನೂ ಓದಿ:ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಸ್ಪಾ ಮ್ಯಾನೇಜರ್

ABOUT THE AUTHOR

...view details