ಕರ್ನಾಟಕ

karnataka

ರಾಮಮಂದಿರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ಕಾಂಗ್ರೆಸ್ ತೀರ್ಮಾನ ದುರ್ದೈವದ ಸಂಗತಿ: ಯಡಿಯೂರಪ್ಪ

By ETV Bharat Karnataka Team

Published : Jan 11, 2024, 1:58 PM IST

Updated : Jan 11, 2024, 2:38 PM IST

ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಸಿರುವ ಕಾಂಗ್ರೆಸ್ ನಡೆಯನ್ನು​ ನಾನು ಖಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಹೇಳಿದ್ದಾರೆ.

Former CM B S Yediyurappa
ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ

ಬೆಂಗಳೂರು: "ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆ ಮತ್ತು ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ವಿಶೇಷ ಸಂದರ್ಭದಲ್ಲಿ ನಾವಿದ್ದೇವೆ. ಕಾಂಗ್ರೆಸ್ ಮುಖಂಡರು ಆಹ್ವಾನವಿದ್ದರೂ ತಾವು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂಬ ತೀರ್ಮಾನ ಮಾಡಿದ್ದು ಅತ್ಯಂತ ದುರ್ದೈವದ ಸಂಗತಿ" ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಗರದ ಹೋಟೆಲ್ ರಮಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. "ಕಾಂಗ್ರೆಸ್ ಪಕ್ಷದ ನಿಲುವನ್ನು ನಾನು ಖಂಡಿಸುತ್ತೇನೆ. ರಾಮರಾಜ್ಯ ಹಾಗೂ ರಾಮನ ಕನಸು ನನಸಾಗಬೇಕಿದೆ. ಆದರೆ, ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಇದು ಅಕ್ಷಮ್ಯ ಅಪರಾಧ" ಎಂದರು.

"ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಂಥವರು ಸೇರಿ ಒಂದು ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಮುಂದೆ ಅವರೇ ಪಶ್ಚಾತ್ತಾಪ ಪಡುತ್ತಾರೆ. ಕಾಂಗ್ರೆಸ್ಸಿಗರು ಯಾಕಾಗಿ ರಾಮಮಂದಿರ ಉದ್ಘಾಟನೆಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಲಿ" ಎಂದು ಆಗ್ರಹಿಸಿದರು.

ಎರಡನೇ ದಿನ ಸಭೆ ಆರಂಭ:ಇಂದು ಎರಡನೇ ದಿನ ಬಿಜೆಪಿ ಲೋಕಸಭಾ ಚುನಾವಣೆ ಸಿದ್ಧತಾ ಸಭೆ ಆರಂಭವಾಗಿದೆ. ಯಲಹಂಕದ ರಮಾಡ ರೆಸಾರ್ಟ್​ನಲ್ಲಿ ನಾಲ್ಕು ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ 15 ಜಿಲ್ಲೆಯ ಕ್ಷೇತ್ರಗಳ ಸಭೆ ನಡೆಯುತ್ತಿದೆ. ಮಂಗಳೂರು, ಬೆಂಗಳೂರು, ಧಾರವಾಡ ಹಾಗೂ ಕಿತ್ತೂರು ಕ್ಲಸ್ಟರ್ ಸಭೆ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ.

ಮಂಗಳೂರು ಕ್ಲಸ್ಟರ್​ನಲ್ಲಿ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಕ್ಷೇತ್ರ, ಕಿತ್ತೂರು ಕ್ಲಸ್ಟರ್​ನಲ್ಲಿ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ ಕ್ಷೇತ್ರ, ಧಾರವಾಡ ಕ್ಲಸ್ಟರ್​ನಲ್ಲಿ ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಕ್ಷೇತ್ರ, ಬೆಂಗಳೂರು ಕ್ಲಸ್ಟರ್​ನಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಕ್ಷೇತ್ರಗಳು ಬರಲಿದ್ದು‌ ಕ್ಷೇತ್ರವಾರು ಸಭೆ ನಡೆಸಲಾಗುತ್ತಿದೆ.

ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಡಿ ವಿ ಸದಾನಂದ ಗೌಡ, ‌ಪ್ರತಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಸಚಿವ ಸಿ ಟಿ ರವಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ನಿನ್ನೆ ಮೂರು ಕ್ಲಸ್ಟರ್​ನ 13‌ ಲೋಕಸಭಾ ಕ್ಷೇತ್ರಗಳ ಸಭೆ ನಡೆಸಿ, ಜಿಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದ ಹಿರಿಯ ನಾಯಕರು ಇಂದು ಉಳಿದ 15 ಲೋಕಸಭಾ ಕ್ಷೇತ್ರಗಳ ಸಭೆ ನಡೆಸಿ, ಜಿಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸದಿರುವ ಕಾಂಗ್ರೆಸ್‌ ನಾಯಕರ ನಿರ್ಧಾರಕ್ಕೆ ಸಿದ್ದರಾಮಯ್ಯ ಬೆಂಬಲ

Last Updated : Jan 11, 2024, 2:38 PM IST

ABOUT THE AUTHOR

...view details