ಕರ್ನಾಟಕ

karnataka

ಬ್ರ್ಯಾಂಡ್ ಬೆಂಗಳೂರಲ್ಲಿ ಬ್ರ್ಯಾಂಡೆಡ್ ಭ್ರಷ್ಟಾಚಾರ ಅಡಗಿದೆ: ಮುಖ್ಯಮಂತ್ರಿ ಚಂದ್ರು ಆರೋಪ

By

Published : Jul 28, 2023, 4:48 PM IST

Updated : Jul 28, 2023, 6:58 PM IST

ಬಿಬಿಎಂಪಿ ಹಾಗೂ ಕಸ ವಿಲೇವಾರಿ ಗುತ್ತಿಗೆದಾರರು ಪೌರಕಾರ್ಮಿಕರ ಭವಿಷ್ಯ ಹಾಗೂ ಆರೋಗ್ಯದೊಂದಿಗೆ ಚೆಲ್ಲಾಟವಾಡಿ ಸಂಚಕಾರ ತರುತ್ತಿದ್ದಾರೆ. 500 ಕೋಟಿಗಿಂತ ಹೆಚ್ಚು ಇಎಸ್​​ಐ ಪಿಎಫ್ ಹಣವನ್ನು ಭರಿಸದೇ ಪೌರಕಾರ್ಮಿಕರ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಪಾದನೆ ಮಾಡಿದ್ದಾರೆ.

AAP leaders displayed documents.
ಬಿಬಿಎಂಪಿ ಪೌರಕಾರ್ಮಿಕರ ವೇತನದಲ್ಲಿ ಅನ್ಯಾಯ ವೆಸಗಿರುವ ಕುರಿತಾಗಿ ಎಎಪಿ ಮುಖಂಡರು ದಾಖಲೆಗಳನ್ನು ಪ್ರದರ್ಶಿಸಿದರು.

ಮುಖ್ಯಮಂತ್ರಿ ಚಂದ್ರು ಎಎಪಿ ಮುಖಂಡ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರು: ನಗರದ ಆರೋಗ್ಯ, ಸ್ವಚ್ಛತೆ ಕಾಪಾಡುತ್ತಿರುವ ಪೌರಕಾರ್ಮಿಕರ ವೇತನದಲ್ಲಿ 500 ಕೋಟಿ ರೂ ಗಿಂತ ಹೆಚ್ಚು ಮೊತ್ತದ ಇಎಸ್​​ಐ ಪಿಎಫ್ ಹಣವನ್ನು 5 ವರ್ಷಗಳಿಂದ ಭರಿಸದೇ ಬಾಕಿ ಉಳಿಸಿಕೊಳ್ಳಲಾಗಿದೆ. ಬಿಬಿಎಂಪಿ ಹಾಗೂ ಕಸ ವಿಲೇವಾರಿ ಗುತ್ತಿಗೆದಾರರು ಸೇರಿಕೊಂಡು ಪೌರಕಾರ್ಮಿಕರ ಭವಿಷ್ಯ ಹಾಗೂ ಆರೋಗ್ಯದೊಂದಿಗೆ ಚೆಲ್ಲಾಟವಾಡಿ ಬದುಕಿಗೆ ಸಂಚಕಾರ ತರುತ್ತಿದ್ದಾರೆ. ಆದ್ದರಿಂದ ಬ್ರ್ಯಾಂಡ್ ಬೆಂಗಳೂರಿನಲ್ಲಿ ಬ್ರ್ಯಾಂಡೆಡ್ ಭ್ರಷ್ಟಾಚಾರ ನಡೆದಿದೆ ಎನ್ನಬಹುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರನ್ನು ಮಾಡಲು ಹೊರಟಿರುವ ಉಪಮುಖ್ಯಮಂತ್ರಿಗಳು, ಮೊದಲು ಪೌರಕಾರ್ಮಿಕರ ಮೂಲ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ದಾಖಲೆಗಳ ಸಮೇತ ಬಹಿರಂಗ ಪಡಿಸಿದರು.

ಬಿಬಿಎಂಪಿಯಲ್ಲಿ ಕಸ ನಿರ್ವಹಣೆಗೆ ಮಾತ್ರ ಇರುವ ಪೌರಕಾರ್ಮಿಕರ ಸಂಖ್ಯೆ 32 000 ಆಗಿದ್ದು ಇದೊಂದು
ಆಶ್ಚರ್ಯಕರ ಸಂಗತಿ. 700 ಪೌರಕಾರ್ಮಿಕರು ಮಾತ್ರ ಕಾಯಂ ಹುದ್ದೆ ಪಡೆದಿದ್ದು. 16,000 ಪೌರ ಕಾರ್ಮಿಕರಿಗೆ ಪಾಲಿಕೆ ನೇರ ವೇತನವನ್ನು ನೀಡುತ್ತಿದೆ. ಸುಮಾರು 16 000 ಕಾರ್ಮಿಕರು ಗುತ್ತಿಗೆ ಏಜೆನ್ಸಿಗಳಡಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪೌರಕಾರ್ಮಿಕರಿಗೆ ಸದಾ ಮೂರು ತಿಂಗಳ ಸಂಬಳ ಬಾಕಿ ಉಳಿದಿರುತ್ತದೆ. ಬಿಬಿಎಂಪಿ ತನ್ನ ಕಾರ್ಮಿಕರ ಭವಿಷ್ಯದ ಹಾಗೂ ಆರೋಗ್ಯದಂತಹ ಅತಿ ಮುಖ್ಯ ವಿಚಾರದಲ್ಲಿ ಗುತ್ತಿಗೆದಾರರುಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಈ ರೀತಿಯ ನೂರಾರು ಕೋಟಿ ಅವ್ಯವಹಾರವನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ದಾಖಲೆಗಳ ಸಮೇತ ಮಾಹಿತಿ ನೀಡಿದರು.

ಗುತ್ತಿಗೆದಾರರ ಪಟ್ಟಿ ಬಿಡುಗಡೆ: ದಕ್ಷಿಣ ವಲಯದ ಗುತ್ತಿಗೆದಾರರ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಶ್ರೀ ಭುವನೇಶ್ವರಿ ಎಂಟರ್ಪ್ರೈಸಸ್, ಹಠಾರಿ ಸೆಕ್ಯೂರಿಟಿ ಸರ್ವಿಸಸ್ , ನೋವೇಲಿ ಸೆಕ್ಯೂರಿಟಿ ಸರ್ವಿಸಸ್, ಡೈರೆಕ್ಟ್ ವೆಲ್ ಸೆಕ್ಯೂರಿಟಿ ಸರ್ವಿಸಸ್, ಡಿಟೆಕ್ಟ್ ವೆಲ್ ಸೆಕ್ಯೂರಿಟಿ ಸರ್ವಿಸಸ್ , ಕುಮಾರ್. ಸಿ ಸೇರಿದಂತೆ ಹಲವು ವಲಯಗಳ ಗುತ್ತಿಗೆದಾರರುಗಳು ಇಎಸ್ಐ ಪಿಎಫ್ ಕಟ್ಟಿರುವ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಸಲ್ಲಿಸಿಲ್ಲ. ಬಿಬಿಎಂಪಿಯು ಸಹ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಭ್ಯ ಮಾಹಿತಿ ಪ್ರಕಾರ ಆರ್ ಆರ್ ನಗರ ವಲಯದಲ್ಲಿ 2018 ಮತ್ತು 19ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಪ್ರಕಾರ 14 ವಾರ್ಡ್‌ಗಳ ಪೈಕಿ ಕೇವಲ 9 ವಾರ್ಡ್ ಗಳಲ್ಲಿ ಆಯ್ದ ಕೆಲವೇ ತಿಂಗಳುಗಳ ಇಎಸ್ಐ ಮತ್ತು ಪಿಎಫ್ ಅನ್ನು ಪಾವತಿಸಲಾಗಿದೆ. ಸುಮಾರು 7 ಕೋಟಿ 14 ಲಕ್ಷ 31,668 ರೂ. ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಪಾಲಿಕೆಯಿಂದ ನೇರ ಪಾವತಿ ಇದುವರೆಗೂ ಆಗಿಲ್ಲ:ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಮಾತನಾಡಿ ಘನ ತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ಅಲ್ಲಿನ ಕಾರ್ಮಿಕರಿಗೆ ಪಾಲಿಕೆಯಿಂದ ನೇರ ವೇತನ ಪಾವತಿ ಇದುವರೆಗೂ ಆಗಿಲ್ಲ. ಗುತ್ತಿಗೆದಾರರು ಕಟ್ಟಡ ಕಾರ್ಮಿಕರ ಸೆಸ್ ಅನ್ನು ಸಹ ಕಟ್ಟಿಲ್ಲ. ಇದರಿಂದ ಬಿಬಿಎಂಪಿ ಹಾಗೂ ಗುತ್ತಿಗೆದಾರರ ನಡುವಿನ ಅಕ್ರಮ ಒಳ ಒಪ್ಪಂದದ ಸುಳಿವು ಸಿಗುತ್ತದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಉಪಾಧ್ಯಕ್ಷ ಹಾಗೂ ಬೆಂಗಳೂರು ನಗರ ಉಸ್ತುವಾರಿ ಮೋಹನ್ ದಾಸರಿ ಮಾತನಾಡಿ, ಈ ಎಲ್ಲಾ ಗುತ್ತಿಗೆದಾರರ ಬಿಲ್ ಪಾವತಿಯನ್ನು ತಡೆಹಿಡಿಯಬೇಕು. ಕೂಡಲೇ ಪೌರಕಾರ್ಮಿಕರುಗಳ ಭವಿಷ್ಯ ಹಾಗೂ ಆರೋಗ್ಯ ನಿಧಿಯನ್ನು ಭರಿಸಬೇಕು ಹಾಗೂ ಆರೋಪಿಗಳ ವಿರುದ್ಧ ಇಎಸ್ಐ ಕಾಯ್ದೆಯ ಸೆಕ್ಷನ್ 85 (A) ಪ್ರಕಾರ ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಸರ್ಕಾರ ಶೀಘ್ರವಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪೌರಕಾರ್ಮಿಕರ ಸಂಘಟನೆಗಳ ಜೊತೆಗೂಡಿ ಬೃಹತ್ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂಓದಿ :ಸಿದ್ದರಾಮಯ್ಯ ಅನರ್ಹತೆ ಕೋರಿ ಅರ್ಜಿ: ಸಿಎಂಗೆ ತುರ್ತು ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್

Last Updated : Jul 28, 2023, 6:58 PM IST

ABOUT THE AUTHOR

...view details