ಕರ್ನಾಟಕ

karnataka

'ಬಿಎಸ್​ವೈ ಮುಕ್ತ ಬಿಜೆಪಿ' ಒಂದು ಪೂರ್ವ ನಿಯೋಜಿತ ಅಭಿಯಾನ: ಕಾಂಗ್ರೆಸ್

By

Published : Feb 22, 2023, 1:55 PM IST

ಕಮಲ ಪಾಳಯದಲ್ಲೇ ಬಿಎಸ್​ವೈ ಮುಕ್ತ ಬಿಜೆಪಿ ಅಭಿಯಾನ - ಯೋಜನೆ ರೂಪಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸ್ವೀಕಾರ - ಒಲ್ಲದ ಮನಸ್ಸಿನಲ್ಲಿ ಅಧಿಕಾರ ಬಿಟ್ಟ ರಾಜಾಹುಲಿ - ಕಾಂಗ್ರೆಸ್​ ಟ್ವೀಟ್​​​

BJP Without BSY
ಬಿಎಸ್ ವೈ ಮುಕ್ತ ಬಿಜೆಪಿ ಒಂದು ಪೂರ್ವ ನಿಯೋಜಿತ ಅಭಿಯಾನ

ಬೆಂಗಳೂರು:ರಾಜ್ಯ ಪ್ರಬಲ ನಾಯಕ ಬಿ ಎಸ್​ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಮೂಲೆ ಗುಂಪು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್​ ಟ್ವೀಟ್​​ ಮಾಡಿದೆ.ಬಿಎಸ್​ವೈ ಮುಕ್ತ ಬಿಜೆಪಿ ಒಂದು ಪೂರ್ವ ನಿಯೋಜಿತ ಅಭಿಯಾನ ಎಂದು ಕಾಂಗ್ರೆಸ್ ಅಭಿಪ್ರಾಯ ಪಟ್ಟಿದೆ. ವಯಸ್ಸಿನ ಕಾರಣ ಕೊಟ್ಟು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದಾರೆ, ಇದು ಯಡಿಯೂರಪ್ಪ ಅವರ ನಿರ್ಧಾರ ಅಲ್ಲ ಎಂದು ಟ್ವೀಟ್​​​​ನಲ್ಲಿ ಹೇಳಿದೆ.

ಕಾಂಗ್ರೆಸ್​ ಟ್ವಿಟ್​

ಟ್ವೀಟ್ ಮಾಡಿ ಈ ವಿಚಾರ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ, ಬಿಎಸ್​ವೈ ವಯಸ್ಸಿನ ಕಾರಣದಿಂದ ರಾಜೀನಾಮೆ ಕೊಟ್ಟಿದ್ದರೆ "ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ" ಎಂದು ಕೊನೆಯ ದಿನದವರೆಗೂ ಹೇಳಿದ್ದೇಕೆ? ಏಕಾಏಕಿ ರಾಜೀನಾಮೆ ಕೊಟ್ಟಿದ್ದೇಕೆ? ಕಣ್ಣೀರು ಹಾಕಿದ್ದೇಕೆ? ಬಿಎಸ್​ವೈ ಅನಿವಾರ್ಯವಲ್ಲ ಎಂದು ಕಟೀಲ್ ಹೇಳಿದ್ದೇಕೆ? ಮೂಲೆಗುಂಪು ಮಾಡಿದ್ದೇಕೆ? ಬಿಎಸ್​​ವೈ ಮುಕ್ತ ಬಿಜೆಪಿ ಪೂರ್ವಯೋಜಿತ ಅಭಿಯಾನವಲ್ಲವೇ? ಎಂದು ಪ್ರಶ್ನೆ ಮಾಡಿದೆ.

ಕಾನೂನು ಸಚಿವರ ಮಾತಿನ ಮೇಲೆ ಕಾಂಗ್ರೆಸ್​ ಅಭಿಪ್ರಾಯ:ನಿನ್ನ ವಿಧಾನ ಪರಿಷತ್​ನಲ್ಲಿ ರಾಜ್ಯಪಾಲರ ವಂದನ ನಿರ್ಣಯದ ಮೇಲಿನ ಚರ್ಚೆ ಸಂದರ್ಭ ಕಾನೂನು ಸಚಿವ ಮಾಧುಸ್ವಾಮಿ ಬಿಎಸ್​ವೈ ಪರ ಆಡಿದ್ದ ಮಾತಿಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ. ನಿನ್ನೆ ಸದನದಲ್ಲಿ ಮಾತನಾಡಿದ ಸಂದರ್ಭ ಮಾಧುಸ್ವಾಮಿ, ಯಡಿಯೂರಪ್ಪ ಅವರನ್ನು ಯಾರೂ ತೆಗೆದುಹಾಕಿಲ್ಲ. ಅವರ ರಾಜೀನಾಮೆ ಪತ್ರದಲ್ಲಿ ಅವರೇ ನೀಡಿದ ಮಾಹಿತಿ ಸ್ಪಷ್ಟವಾಗಿದೆ. ವಯಸ್ಸು ಸಹಕರಿಸಲ್ಲ, ಕೆಲಸ ಮಾಡಲು ಆಗಲ್ಲ, ಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದರು.

ಯಡಿಯೂರಪ್ಪ ಭಾವುಕರಾಗಿ ಕಣ್ಣೀರು ಹಾಕಿರಬಹುದು, ಬಿಡಿಸಿದ್ದಾರೆ ಎಂದು ಹೇಳಿಲ್ಲ. ನಾವು ಅವರ ನೇತೃತ್ವದಲ್ಲಿ ಮುಂದುವರಿಯುತ್ತೇವೆ. ಸ್ವತಃ ರಾಜೀನಾಮೆ ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರೇ ಒಂದು ವಾರದ ಬಳಿಕ ಪ್ರಯತ್ನ ನಡೆಸಿದ್ದರು. ಆದರೆ, ತಾವು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಬದಲಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಅವರೇ ತಿಳಿಸಿದ್ದರೂ ಎಂದು ಸದನಕ್ಕೆ ವಿವರಿಸಿದ್ದರು.

ಆಗ ಪ್ರತಿಪಕ್ಷಗಳು ಮಾತನಾಡಿ, ಹಾಗಾದರೆ ಈ ಸಾರಿ ಅವರ ನೇತೃತ್ವದಲ್ಲೇ ಹೋಗಿ ಅವರನ್ನೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಘೋಷಿಸಿ ಎಂದು ಜೆಡಿಎಸ್ ಸದಸ್ಯ ಶರವಣ ಹೇಳಿದಾಗ ಸಿಟ್ಟಾದ ಮಾಧುಸ್ವಾಮಿ ನೀವು ಅಧಿಕಾರಕ್ಕೆ ಬಂದರೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡುತ್ತೀರಾ ಎಂದು ಮರು ಸವಾಲು ಎಸೆದರು. ಕಾಣೆಯಾಗಿದ್ದವರು ಹೇಗೆ ಮುಖ್ಯಮಂತ್ರಿ ಆಗಲು ಸಾಧ್ಯ ಎಂದು ಹೇಳಿದಾಗ ಅದೇ ರೀತಿ ನಮ್ಮ ಯಡಿಯೂರಪ್ಪ ಸಹ ಕೇಂದ್ರ ಸೇವೆಯಲ್ಲಿದ್ದಾರೆ. ಹೀಗಾಗಿ ಅವರು ಮತ್ತೆ ಮುಖ್ಯಮಂತ್ರಿ ಆಗಲು ಒಪ್ಪುವುದಿಲ್ಲ ಎಂದು ಸಮಜಾಯಿಸಿ ನೀಡಿದ್ದರು.

ಒಟ್ಟಾರೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ಮತ್ತು ಅದರ ಹಿಂದಿನ ಕಾರಣ ಕುರಿತು ವಿಧಾನ ಪರಿಷತ್​ನಲ್ಲಿ ಬಿಸಿಬಿಸಿ ಚರ್ಚೆ ನಡೆದ ನಂತರ ಕಾಂಗ್ರೆಸ್ ಸಹ ಟ್ವೀಟ್ ಮಾಡಿ ಈ ಪ್ರಶ್ನೆಯನ್ನು ಮಾಡಿದೆ. ಸದನದಲ್ಲಿ ಮಾಧುಸ್ವಾಮಿ ಉತ್ತರ ನೀಡಿದ್ದು ಇದೀಗ ಕಾಂಗ್ರೆಸ್ ಟ್ವೀಟಿಗೆ ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ರಾಜ್ಯದಿಂದ ಗೋವಾಕ್ಕೆ ಗೋಮಾಂಸ ಸಾಗಣೆ ಮಾಡುತ್ತಿದ್ದರೆ ಕ್ರಮ: ಪ್ರಭು ಚವ್ಹಾಣ್

ABOUT THE AUTHOR

...view details