ಕರ್ನಾಟಕ

karnataka

9 ಜಿಲ್ಲೆಯಲ್ಲಿ ಬಿಜೆಪಿ ಶೂನ್ಯ ಸಂಪಾದನೆ, ಭದ್ರಕೋಟೆ ಛಿದ್ರ: ಮಕಾಡೆ ಮಲಗಿದ ಬಿಜೆಪಿ

By

Published : May 13, 2023, 6:14 PM IST

ಬಿಜೆಪಿ ತನ್ನ ಭದ್ರಕೋಟೆ ಎಂದೇ ಕರೆಸಿಕೊಳ್ಳುತ್ತಿದ್ದ ಜಿಲ್ಲೆಗಳಲ್ಲಿ ಶೂನ್ಯ ಸಾಧನೆ ಮಾಡಿ ಹಿನಾಯ ಸೋಲನ್ನು ಕಂಡಿದೆ. ಒಟ್ಟಾರೆ ಕೇವಲ 65 ಕ್ಷೇತ್ರಗಳನ್ನು ಮಾತ್ರ ಬಿಜೆಪು ವಶಪಡಿಸಿಕೊಂಡಿದೆ.

BJP was completely lost in 9 districts
9 ಜಿಲ್ಲೆಯಲ್ಲಿ ಬಿಜೆಪಿ ಶೂನ್ಯ ಸಂಪಾದನೆ, ಭದ್ರಕೋಟೆ ಛಿದ್ರ: ಮಕಾಡೆ ಮಲಗಿದ ಬಿಜೆಪಿ

ಬೆಂಗಳೂರು: ಈ ಬಾರಿಯ ವಿಧಾಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಸಾಬೀತಾಗಿದೆ. ಮತ್ತೊಮ್ಮೆ ತಮ್ಮದೇ ಸರ್ಕಾರ ಬರುತ್ತೆ ಅನ್ನುವ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ ಮರ್ಮಾಘಾತವಾಗಿದೆ. ಹೌದು, ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಬೇಕು ಎನ್ನುವ ಬಿಜೆಪಿ ನಾಯಕರ ಕನಸು ನುಚ್ಚು ನೂರಾಗಿದೆ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಹಳೆ ಮೈಸೂರು ಭಾಗದ ಜನರು ಕೈಕೊಟ್ಟಿದ್ದು ಒಂದು ಕಡೆಯಾದರೆ ಮಧ್ಯ ಕರ್ನಾಟಕದಲ್ಲೂ ಭಾರತೀಯ ಜನತಾ ಪಕ್ಷಕ್ಕೆ ಹೀನಾಯ ಸೋಲು ಕಂಡಿದೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮಕಾಡೆ ಮಲಗಿದ್ದು, 9 ಜಿಲ್ಲೆಗಳಲ್ಲಿ ಖಾತೆಯನ್ನೇ ತೆರೆದಿಲ್ಲ. 9 ಜಿಲ್ಲೆಗಳ ಶೂನ್ಯ ಸಾಧನೆ ಒಂದು ಕಡೆಯಾದರೆ 8 ಜಿಲ್ಲೆಗಳಲ್ಲಿ ಕೇವಲ ಒಂದೊಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು 7 ಜಿಲ್ಲೆಗಳಲ್ಲಿ ಕೇವಲ ತಲಾ ಎರಡು ಸ್ಥಾನ ಮಾತ್ರ ಗೆದ್ದಿದ್ದು, ಒಟ್ಟಾರೆಯಾಗಿ ಈ ಮೂರು ಭಾಗದಿಂದ 24 ಜಿಲ್ಲೆಗಳಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿ ಹೀನಾಯ ಸೋಲು ಕಂಡಿದೆ‌.

ಇರುವುದರಲ್ಲಿ ಬೆಂಗಳೂರು ನಗರ, ಬೆಳಗಾವಿ, ಬೀದರ್, ಉಡುಪಿ, ಶಿವಮೊಗ್ಗ ಮಾತ್ರ ಬಿಜೆಪಿ ಕೈ ಹಿಡಿದಿವೆ. ಬೆಂಗಳೂರು ನಗರ 15, ಬೆಳಗಾವಿ 7, ದಕ್ಷಿಣ ಕನ್ನಡ 6, ಉಡುಪಿ 5, ಬೀದರ್ 4, ಶಿವಮೊಗ್ಗ 3, ಧಾರವಾಡ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಮಾತ್ರ ಕಮಲ ಅರಳಿದೆ. ಬಿಜೆಪಿಯ ಭದ್ರಕೋಟೆಗಳಾದ ಚಿಕ್ಕಮಗಳೂರು, ಬಳ್ಳಾರಿ, ಕೊಡಗಿನಲ್ಲಿ ಶೂನ್ಯ ಸಂಪಾದನೆಯಾಗಿದ್ದು ಈ ಬಾರಿ ಖಾತೆಯನ್ನೇ ತೆರೆದಿಲ್ಲ. ಇನ್ನು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರದಲ್ಲಿ ಗಳಿಕೆ ಶೂನ್ಯವಾಗಿದೆ.

ಈ ಬಾರಿ ಬಿಜೆಪಿ ಹಳೆ ಮೈಸೂರು ಭಾಗದ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿತ್ತು. ಆದರೆ, ಆ ಭಾಗದ 61 ಕ್ಷೇತ್ರಗಳಲ್ಲಿ ಗೆದ್ದಿದ್ದು ಕೇವಲ 6 ಸ್ಥಾನ ಮಾತ್ರ. ಇನ್ನು ಭದ್ರಕೋಟೆಯಾಗಿದ್ದ ಮಧ್ಯ ಕರ್ನಾಟಕದ 25 ಕ್ಷೇತ್ರಗಳಲ್ಲಿ 5 ಸ್ಥಾನ ಮಾತ್ರ ಗೆದ್ದಿದೆ.

ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿ 10 ಮತ್ತು ಉತ್ತರ ಕರ್ನಾಟಕದ 50 ರಲ್ಲಿ ಕೇವಲ 16 ಸ್ಥಾನ ಮಾತ್ರ ಕಮಲ ಅರಳಿದೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ 15 ಸ್ಥಾನ, ಕರಾವಳಿಯಲ್ಲಿ 19 ರಲ್ಲಿ 13 ಸ್ಥಾನ ಗೆದ್ದಿರುವುದಷ್ಟೇ ಬಿಜೆಪಿ ಸಾಧನೆಯಾಗಿದೆ. ಐದು ವಲಯಗಳ ಪೈಕಿ ಮೂರು ವಲಯದಲ್ಲಿ ಕಳಪೆ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಹೀನಾಯ ಸೋಲು ಕಾಣುವಂತಾಗಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜಿಲ್ಲೆಯಲ್ಲಿ ಕೇವಲ ಒಂದು ಕ್ಷೇತ್ರ ಮಾತ್ರ ಗೆಲುವಾಗಿದೆ. ಹಾವೇರಿಯಲ್ಲಿ ಬೊಮ್ಮಾಯಿ ಬಿಟ್ಟು ಬೇರಾರು ಬಿಜೆಪಿ ಅಭ್ಯರ್ಥಿಗಳು ಜಯ ಕಂಡಿಲ್ಲ. ಅಲ್ಲದೇ ಬೊಮ್ಮಾಯಿ ಆಡಳಿತ ಕಾಲದಲ್ಲಿನ 12 ಜನ ಮಂತ್ರಿಗಳು ಗೆಲುವು ಕಂಡಿಲ್ಲ.

ಇದನ್ನೂ ಓದಿ:ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲುವಿಗೆ ಈ ಅಂಶಗಳು ಕಾರಣವೇ?

ABOUT THE AUTHOR

...view details