ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆ ಮೈತ್ರಿ ಸಂಬಂಧ ಜೆಡಿಎಸ್ ಪಕ್ಷ ರಾಜ್ಯ ಕಾಂಗ್ರೆಸ್ ನಾಯಕರ ನಡೆಯ ಮೇಲೆ ಮುಂದಿನ ನಿರ್ಣಯ ಕೈಗೊಳ್ಳುವ ಚಿಂತನೆಯಲ್ಲಿದೆ. ನಗರದ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ.
ಜೆಡಿಎಸ್ ಶಾಸಕಾಂಗ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕಲಬುರಗಿಮಹಾನಗರ ಪಾಲಿಕೆ ವಿಚಾರದಲ್ಲಿ ಈವರೆಗೆ ಎರಡು ರಾಷ್ಟ್ರೀಯ ಪಕ್ಷದ ನಾಯಕರು ನಮ್ಮ ಪಕ್ಷದ ನಾಯಕರ ಜತೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದಾರೆಯೇ ಹೊರತು ಬೇರೆ ಯಾವ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿಲ್ಲ. ದೇವೇಗೌಡ ಅವರು ಖರ್ಗೆ ಅವರಿಗೆ ನಿಮ್ಮ ಹೈಕಮಾಂಡ್, ರಾಜ್ಯ ಘಟಕಕ್ಕೆ ಸೂಚನೆ ನೀಡಿ, ಅಲ್ಲಿಂದ ಏನಾದರೂ ಮನವಿ ಬಂದರೆ ಪರಿಶೀಲನೆ ನಡೆಸೋಣ ಎಂದಿದ್ದಾರೆ. ಆದರೆ, ರಾಜ್ಯದ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಜತೆ ಮೈತ್ರಿಗೆ ಮನಸ್ಸು ಇಲ್ಲ. ಬಿಜೆಪಿಯಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವರು ನಿರಂತರವಾಗಿ ಮನವಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ ರಾಜ್ಯ ನಾಯಕರಿಗೆ ಬಿಜೆಪಿಯ ಬಿ ಟೀಂ ಎಂದು ನಿರೂಪಿಸಬೇಕು. ಜನತೆಯ ಮುಂದೆ ಹೋಗಲು ಬೇರೆ ಬಂಡವಾಳ ಇಲ್ಲ. ಪಕ್ಷದ ಶಕ್ತಿಯನ್ನು ಕುಂದಿಸುವ ಕುತಂತ್ರ ನಡೆಯುತ್ತಿದೆ. ಬಿಜೆಪಿ ತೆಕ್ಕೆಗೆ ಕಳುಹಿಸಬೇಕು ಎಂದು ಒಂದು ಗುಂಪು ಇದೆ. ಕಾಂಗ್ರೆಸ್ಸಿಗರು ಜಾತ್ಯಾತೀತ ಶಕ್ತಿಗಳು ಉಳಿಯಬೇಕು ಎಂದು ಒಂದೆಡೆ ಹೇಳುತ್ತಾರೆ. ಮತ್ತೊಂದೆಡೆ ನಮ್ಮ ಪಕ್ಷವನ್ನು ಸರ್ವನಾಶ ಮಾಡಬೇಕು ಎಂಬ ಷಡ್ಯಂತ್ರ ನಡೆಯುತ್ತಿದೆ. ನಾವು ಯಾರಿಗೂ ಅಡಿಯಾಳು ಅಲ್ಲ. ಪಕ್ಷದ ಕಾರ್ಯಕರ್ತರ ದುಡಿಮೆ ಇದ್ದು, ಸ್ವಾಭಿಮಾನ ಇದೆ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಎತ್ತಿನಗಾಡಿ ರ್‍ಯಾಲಿಗೆ ಕಿಡಿ:
ಕಾಂಗ್ರೆಸ್‌ನ ಎತ್ತಿನ ಗಾಡಿ ರ್‍ಯಾಲಿಗೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ದೊಡ್ಡದಾಗಿ ಇಂದು ರ್‍ಯಾಲಿ ಮಾಡಿದ್ರು. ಆದ್ರೆ ಬೆಲೆ ಏರಿಕೆಗೆ ಕಾಂಗ್ರೆಸ್ ಕೂಡಾ ಕಾರಣ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಾಲು ಇದೆ. ಜನ ವಿರೋಧಿ ಸರ್ಕಾರವನ್ನ ಪೋಷಿಸಿದ್ದು ಕಾಂಗ್ರೆಸ್. ಹೀಗಾಗಿ ಬೆಲೆ ಏರಿಕೆ ಕಾಂಗ್ರೆಸ್ ಕೂಡಾ ಕಾರಣ ಎಂದರು.