ಕರ್ನಾಟಕ

karnataka

ಬೆಳಗಾವಿ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿಹಾಕಲು ಬಿಜೆಪಿ ಜೆಡಿಎಸ್ ಸಜ್ಜು

By ETV Bharat Karnataka Team

Published : Dec 3, 2023, 8:19 PM IST

ಬೆಳಗಾವಿಯಲ್ಲಿ ಅಧಿವೇಶನದ ಸಂತಾಪ ಸೂಚನೆ ಮುಗಿಯುತ್ತಿದ್ದಂತೆ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಹಾಗು ಜೆಡಿಎಸ್ ಸಿದ್ಧವಾಗಿವೆ.

ಬಿಜೆಪಿ ಹಾಗು ಜೆಡಿಎಸ್
ಬಿಜೆಪಿ ಹಾಗು ಜೆಡಿಎಸ್

ಬೆಂಗಳೂರು :ಕುಂದಾನಗರಿ ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಹಣಿಯಲು ಪ್ರತಿಪಕ್ಷಗಳಾದ ಬಿಜೆಪಿ ಹಾಗು ಜೆಡಿಎಸ್ ಜಂಟಿಯಾಗಿ ಅಖಾಡಕ್ಕೆ ದುಮುಕಲು ಸಿದ್ಧವಾಗಿದ್ದು, ಪರಸ್ಪರ ಸಹಕಾರದಿಂದ ಒಟ್ಟಾಗಿ ಕಾಂಗ್ರೆಸ್ ಎದುರಿಸಲು ಸನ್ನದ್ಧವಾಗಿವೆ.

ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಈಗ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವೈಫಲ್ಯ ಕಂಡಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಸದನದಲ್ಲಿ ಉಭಯ ಪ್ರತಿಪಕ್ಷಗಳು ಜಂಟಿಯಾಗಿ ವಾಗ್ದಾಳಿ ನಡೆಸಲಿವೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಯಾಗುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ. ಮಹಿಳೆಯರ ಖಾತೆಗೆ ಪಾವತಿಯಾಗುತ್ತಿಲ್ಲ. ಯುವನಿಧಿ ಇನ್ನೂ ಜಾರಿಯೇ ಆಗಿಲ್ಲ. ಗೃಹ ಜ್ಯೋತಿಯಡಿ 200 ಯೂನಿಟ್ ಎಂದು ಹೇಳಿ ಷರತ್ತು ಹಾಕಿ ಕಡಿತ ಮಾಡಿದ್ದಾರೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಕಲ್ಪಿಸಿದ್ದರೂ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡದ ಕುರಿತು ಸದನದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲು ಉಭಯ ಪಕ್ಷಗಳು ಮುಂದಾಗಿವೆ.

ಇನ್ನು ರಾಜ್ಯದಲ್ಲಿ ವಾಡಿಕೆಯಂತೆ ಮಳೆಯಾಗದೇ ಬರ ನಿರ್ವಹಣೆಯಲ್ಲಿ ವಿಫಲವಾಗಿರುವುದರ ಕುರಿತು ಚಾಟಿ ಪ್ರತಿಪಕ್ಷಗಳು ಸಜ್ಜಾಗಿವೆ. ಕೇಂದ್ರದ ಕಡೆ ಬೆರಳು ಮಾಡಿ ರಾಜ್ಯದಿಂದ ನೀಡಬೇಕಾದ ಪರಿಹಾರವನ್ನು ನೀಡುತ್ತಿಲ್ಲ ಎನ್ನುವ ವಿಷಯವನ್ನು ಮುಂದಿಟ್ಟುಕೊಂಡು ಸದನದಲ್ಲಿ ಬಿಜೆಪಿ ಹಾಗು ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಲಿವೆ.

ಇದರ ಜೊತೆ ಬಹುಮುಖ್ಯವಾಗಿ ಕಮೀಷನ್ ವಿಷಯ ಸದನದಲ್ಲಿ ಈ ಬಾರಿ ಹೆಚ್ಚು ಸದ್ದು ಮಾಡಲಿದೆ. ಬಿಜೆಪಿ ಸರ್ಕಾರದ ವೇಳೆ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದ ಕಾಂಗ್ರೆಸ್ ವಿರುದ್ಧವೇ ಈಗ ಕಮೀಷನ್ ಆರೋಪ ಬಂದಿದೆ. ಗುತ್ತಿಗೆದಾರರ ಸಂಘವೇ ಈ ಬಗ್ಗೆ ಬಹಿರಂಗವಾಗಿ ಆರೋಪ ಮಾಡಿದೆ. ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಈ ಎಲ್ಲಾ ವಿಷಯಗಳನ್ನು ಮುಂದಿಟ್ಟು ಸರ್ಕಾರದ ವಿರುದ್ಧ ಸದನದಲ್ಲಿ ಹರಿಹಾಯಲಿವೆ.

ಅನುದಾನದ ವಿಚಾರದಲ್ಲಿ ಕಾಂಗ್ರೆಸ್‌ ಶಾಸಕರೇ ಅಸಮಾಧಾನಗೊಂಡಿರುವ ಕುರಿತು ಬಿಜೆಪಿ ಹಾಗು ಜೆಡಿಎಸ್ ಸದನದಲ್ಲಿ ಪ್ರಸ್ತಾಪ ಮಾಡಲಿವೆ. ಬಿ.ಆರ್ ಪಾಟೀಲ್ ಪತ್ರ, ಮುನಿರತ್ನ ಕ್ಷೇತ್ರದ ಅನುದಾನ ವಾಪಸ್, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗದೇ ಇರುವ ವಿಷಯಗಳನ್ನು ಪ್ರಸ್ತಾಪ ಮಾಡಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಹಾಗು ಜೆಡಿಎಸ್ ಎರಡೂ ಪಕ್ಷಗಳು ಸಿದ್ಧತೆ ನಡೆಸಿವೆ.

ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈ ಮುಗಿದು ಗೌರವ ಕೊಡುವಂತೆ ಮಾಡಿದ್ದೇವೆ ಎಂದು ವಸತಿ ಸಚಿವ ಜಮೀರ್ ಅಹಮದ್ ನೀಡಿದ್ದ ಹೇಳಿಕೆ ಕುರಿತು ಸದನದಲ್ಲಿ ಪ್ರಸ್ತಾಪಿಸಿ ಕ್ಷಮೆಯಾಚನೆಗೆ ಪಟ್ಟುಹಿಡಿಯುವ ಅಥವಾ ಹಕ್ಕುಚ್ಯುತಿ ಮಂಡಿಸುವ ಕುರಿತು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಮತ್ತೊಮ್ಮೆ ಚಿಂತನೆ ನಡೆಸಿ ನಿರ್ಧಾರಕ್ಕೆ ಬರಲಿದ್ದಾರೆ.

ಅಕ್ರಮ ಆಸ್ತಿಗಳಿಗೆ ಆರೋಪ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ವಾಪಸ್ ಪಡೆದ ನಿರ್ಧಾರದ ವಿರುದ್ಧವೂ ಉಭಯ ಪ್ರತಿಪಕ್ಷಗಳು ಜಂಟಿಯಾಗಿ ಹೋರಾಟ ನಡೆಸಲಿವೆ.

ಇದನ್ನೂ ಓದಿ :ಬೆಳಗಾವಿ ಅಧಿವೇಶನ: ಸಕಾಲಕ್ಕೆ ಕಲಾಪಕ್ಕೆ ಬರುವ ಸದಸ್ಯರನ್ನು ಪ್ರೋತ್ಸಾಹಿಸಲು ಟೀ ಕಪ್ ಸಾಸರ್ ಗಿಫ್ಟ್

ABOUT THE AUTHOR

...view details