ಕರ್ನಾಟಕ

karnataka

ಅಧಿಕಾರ ಹಿಡಿಯಲು ಯೋಜನೆ ರೂಪಿಸುತ್ತಿರುವ ಬಿಜೆಪಿ

By

Published : May 12, 2023, 7:55 PM IST

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ ಬರುವುದರ ಹಿನ್ನೆಲೆ ಬಿ ಎಸ್​ ಯಡಿಯೂರಪ್ಪ ಅವರ ನಿವಾಸದಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ.

ಬಿಜೆಪಿ
ಬಿಜೆಪಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಮತದಾನೋತ್ತರ ಸಮೀಕ್ಷೆಯಲ್ಲಿ ಪಕ್ಷಕ್ಕೆ ಹಿನ್ನಡೆ ಎನ್ನುವ ವರದಿ ಹಿನ್ನೆಲೆಯಲ್ಲಿ ಮೂರು ರೀತಿಯ ಆಯ್ಕೆಯನ್ನು ಮುಂದಿರಿಸಿಕೊಂಡು ಅಧಿಕಾರ ಹಿಡಿಯಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಈಗಾಗಲೇ ಪ್ಲಾನ್​ಗಳ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ನಾಳೆ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿರುವ ಹಿನ್ನೆಲೆ ಯಡಿಯೂರಪ್ಪ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಮೂರು ರೀತಿಯ ಆಯ್ಕೆಯನ್ನ ಮುಕ್ತವಾಗಿರಿಸಿಕೊಂಡು ಅಧಿಕಾರದ ಗದ್ದುಗೆ ಏರಲು ಚಿಂತನೆ ನಡೆಸಿದೆ. ಮೊದಲನೆಯದಾಗಿ ಫಲಿತಾಂಶ ಪ್ರಕಟ ಆಗುವವರೆಗೂ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಲಾಗಿದೆ. ಎರಡನೆಯದಾಗಿ ಜೆಡಿಎಸ್ ಜೊತೆಗೆ ಸೇರಿ ಸಮ್ಮಿಶ್ರ ಸರ್ಕಾರ ರಚನೆಗೆ ಚಿಂತನೆ ಮಾಡಲಾಗಿದ್ದು, ಮೂರನೆಯದಾಗಿ ತೆರ ಮರೆಯಲ್ಲಿ ಆಪರೇಷನ್ ಕಮಲಕ್ಕೂ ಯತ್ನ ನಡೆಸುವ ಚಿಂತನೆ ಮಾಡಲಾಗಿದೆ ಎನ್ನಲಾಗಿದೆ.

ಪಕ್ಷೇತರ ಅಭ್ಯರ್ಥಿಗಳ ಸಂಪರ್ಕ ಮಾಡಲು ಯತ್ನ: ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಬಿಜೆಪಿಯಿಂದ ಗಾಳ ಹಾಕಲು ಸಮಾಲೋಚನೆ ನಡೆಸಲಾಗಿದೆ. ಹಳೆ ಮೈಸೂರಿನಲ್ಲಿ ಆಪರೇಷನ್ ಕಮಲಕ್ಕೆ ಪ್ಲಾನ್ ಮಾಡಿದ್ದು, ಬೆರಳೆಣಿಕೆಯಷ್ಟು ಸ್ಥಾನ ಕೊರತೆ ಬಿದ್ದರೆ ಪಕ್ಷೇತರ ಶಾಸಕರ ಬಳಕೆ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ, ಈಗಾಗಲೇ ಗೆಲ್ಲುವ ಸಾಧ್ಯತೆ ಇರುವ ಪಕ್ಷೇತರ ಅಭ್ಯರ್ಥಿಗಳ ಸಂಪರ್ಕ ಮಾಡಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಚಿವ ಅಶೋಕ್ ನೀಡಿರುವ ಹೇಳಿಕೆ ಪುಷ್ಟಿ ನೀಡುವಂತಿದೆ.

ಬಿಜೆಪಿಗೆ ಎಷ್ಟೇ ಸ್ಥಾನ ಬಂದರೂ ನಾವೇ ಸರ್ಕಾರ ರಚಿಸಲಿದ್ದೇವೆ. ನಮ್ಮ ಕಾರ್ಯತಂತ್ರ ಈಗ ಹೇಳಲ್ಲ. ಆದರೆ ಸರ್ಕಾರ ಮಾಡಲಿದ್ದೇವೆ ಎನ್ನುವ ಮೂಲಕ ಆಪರೇಷನ್ ಕಮಲ, ದಳದ ಜೊತೆ ಮೈತ್ರಿ ಸೇರಿದಂತೆ, ಪಕ್ಷೇತರ ಸಂಪರ್ಕದಂತಹ ಪ್ರಯತ್ನಕ್ಕೆ ಈಗಾಗಲೇ ಬಿಜೆಪಿ ಮುಂದಾಗಿದೆ ಎನ್ನುವ ಸುಳಿವು ನೀಡಿದಂತಿದೆ.

ಬಿಎಸ್​ವೈ ಜತೆ ಮಾತುಕತೆ:ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಸಂಬಂಧ ಪಕ್ಷದ ಹೈಕಮಾಂಡ್ ನಾಯಕರ ಜೊತೆ ಕುಳಿತು ಮಾತುಕತೆ ನಡೆಸಲಿದ್ದೇವೆ. ಅದಕ್ಕೆ ಮುಂಚಿತವಾಗಿ ಇಂದು ಪಕ್ಷದ ಹಿರಿಯ ನಾಯಕ ಬಿ ಎಸ್​ ಯಡಿಯೂರಪ್ಪ ನಿವಾಸಕ್ಕೆ ಅನೌಪಚಾರಿಕ ಸಭೆ ನಡೆಸಿದ್ದೇವೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಬಂದಿವೆ. ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಸೂಚನೆ ನೀಡಿವೆ. ಕೆಲವು ಕಾಂಗ್ರೆಸ್ ಮತ್ತೆ ಕೆಲವು ಬಿಜೆಪಿ ಸರ್ಕಾರದ ಸೂಚನೆಯನ್ನು ನೀಡಿವೆ. ಆದರೆ ಈ ಹಿಂದಿನ ಸಮೀಕ್ಷೆಗಳೆಲ್ಲಾ ಸುಳ್ಳಾಗಿವೆ. 2018ರಲ್ಲಿಯೂ ಬಿಜೆಪಿಗೆ 100 ಸ್ಥಾನ ಯಾವ ಸಮೀಕ್ಷಾ ವರದಿಗಳೂ ನೀಡಿರಲಿಲ್ಲ. ಆದರೆ ನಾವು 104 ಪಡೆದೆವು. ಹಾಗಾಗಿ 2023ರ ಎಕ್ಸಿಟ್ ಪೋಲ್ ಸಮೀಕ್ಷೆಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದರು.

ಬೂತ್, ಕ್ಷೇತ್ರವಾರು ಮಾಹಿತಿಯಂತೆ ನಾವು ಕನಿಷ್ಟ 108 ಸೀಟ್ ಗೆಲ್ಲಲಿದ್ದೇವೆ. 30 ಕಡೆ 50/50 ಇದೆ. ಹಾಗಾಗಿ ನಮಗೆ 120 ಸೀಟ್ ಗೆಲ್ಲುವ ವಿಶ್ವಾಸ ಇದೆ. 13ನೇ ತಾರೀಖಿನ ನಂತರ‌ ಹೊಸ ಸರ್ಕಾರ ರಚನೆ ಮಾಡಲಿದ್ದೇವೆ. ಹಿರಿಯರ ಜೊತೆ ಕುಳಿತು ಮುಂದಿನ‌ ನಡೆ ಬಗ್ಗೆ ಮಾತನಾಡುತ್ತೇವೆ. ವರಿಷ್ಠರ ಜೊತೆ ಮಾತನಾಡುವ ಮೊದಲು ಪೂರ್ವಭಾವಿಯಾಗಿ ಇಂದು ಮಾತುಕತೆ ನಡೆಸಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ :ಹೊಸ ಸರ್ಕಾರ ರಚನೆ ಸಂಬಂಧ ಹೈಕಮಾಂಡ್ ಜೊತೆ ಮಾತುಕತೆ : ಮುರುಗೇಶ್ ನಿರಾಣಿ

ABOUT THE AUTHOR

...view details