ಕರ್ನಾಟಕ

karnataka

ಬಿಎಸ್​ವೈ ಪುತ್ರ ವಿಜಯೇಂದ್ರ ಮೇಲ್ಮನೆ ಪ್ರವೇಶಕ್ಕೆ ಬಿಜೆಪಿ ಹೈಕಮಾಂಡ್​​ನಿಂದ ಅಡ್ಡಿ?

By

Published : May 23, 2022, 9:02 PM IST

ವಿಜಯೇಂದ್ರಗೆ ವಿಧಾನಪರಿಷತ್ ಚುನಾವಣೆಗೆ ಪಕ್ಷದಿಂದ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ ಎಂದು ಹೇಳಲಾಗ್ತಿದೆ. ವಿಧಾನಪರಿಷತ್ ಚುನಾವಣೆ ಬದಲು ಮುಂದಿನ ವರ್ಷ ವಿಧಾನಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ವಿಜಯೇಂದ್ರ ಸ್ಪರ್ಧಿಸಿ ನೇರ ಚುನಾವಣೆ ಮೂಲಕ ವಿಧಾನಸಭೆ ಪ್ರವೇಶಿಸಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎನ್ನಲಾಗ್ತಿದೆ.

ಬಿಎಸ್​ವೈ ಪುತ್ರ ವಿಜಯೇಂದ್ರ
ಬಿಎಸ್​ವೈ ಪುತ್ರ ವಿಜಯೇಂದ್ರ

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಪುತ್ರರಾದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ವಿಧಾನಪರಿಷತ್ ಚುನಾವಣೆಗೆ ಪಕ್ಷದಿಂದ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ ಎಂದು ಹೇಳಲಾಗ್ತಿದೆ. ಜೂನ್ 3 ರಂದು 7 ಸ್ಥಾನಗಳಿಗೆ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವಂತೆ ರಾಜ್ಯ ಬಿಜೆಪಿ ಕೋರ್ ಕಮಿಟಿಯು ಹೈಕಮಾಂಡ್​ಗೆ ಶಿಫಾರಸು ಮಾಡಿತ್ತು.

ಈ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಿಜೆಪಿ ವರಿಷ್ಠರು ಅಂತಿಮವಾಗಿ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದಿರುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ವಿಧಾನಪರಿಷತ್ ಚುನಾವಣೆ ಬದಲು ಮುಂದಿನ ವರ್ಷ ವಿಧಾನಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ವಿಜಯೇಂದ್ರ ಸ್ಪರ್ಧಿಸಿ ನೇರ ಚುನಾವಣೆ ಮೂಲಕ ವಿಧಾನಸಭೆ ಪ್ರವೇಶಿಸಲಿ. ಹಿಂಬಾಗಿಲ ಮೂಲಕ ಶಾಸಕರಾಗುವುದು ಬೇಡ ಎನ್ನುವ ಅಭಿಪ್ರಾಯವನ್ನು ಹೈಕಮಾಂಡ್ ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ.

ರಾಜ್ಯ ಬಿಜೆಪಿ ಕೋರ್ ಕಮಿಟಿ ವಿಜಯೇಂದ್ರಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಲಾಗಿದ್ದರೂ, ಈ ಬಗ್ಗೆ ಹೈಕಮಾಂಡ್ ಹೆಚ್ಚು ಒಲವು ತೋರಿಸಲಿಲ್ಲವೆಂದು ಗೊತ್ತಾಗಿದೆ. ಇನ್ನೊಂದೆಡೆ ರಾಜ್ಯ ಬಿಜೆಪಿಯ ಕೆಲವು ನಾಯಕರುಗಳು ವಿಜಯೇಂದ್ರಗೆ ಮೇಲ್ಮನೆ ಟಿಕೆಟ್ ನೀಡುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕುಟುಂಬ ರಾಜಕಾರಣಕ್ಕೆ ಪ್ರೋತ್ಸಾಹ ನೀಡಬಾರದೆನ್ನುವ ಉದ್ದೇಶದಿಂದಲೂ ವಿರೋಧ ಉಂಟಾಗಿದೆ ಎನ್ನುವ ಅಭಿಪ್ರಾಯಗಳು ಸಹ ಕೇಳಿಬಂದಿವೆ.

ನೈಜಕಾರಣವೇನು?:ವಿಜಯೇಂದ್ರಗೆ ಮೇಲ್ಮನೆಯ ಟಿಕೆಟ್ ನೀಡದಿರಲು ವಾಸ್ತವತೆಯೇ ಬೇರೆ ಇದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ. ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ವಿಜಯೇಂದ್ರ ಅವರನ್ನು ಸಚಿವರನ್ನಾಗಿ ನೇಮಕ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ ಅವರಿಗೆ ಉತ್ತಮ ಖಾತೆಯನ್ನೂ ನೀಡಬೇಕಾಗುತ್ತದೆ.

ಕ್ಯಾಬಿನೆಟ್ ನಲ್ಲಿ ಸಚಿವರಾಗಿ ಪ್ರವೇಶ ನೀಡಿದರೆ ಬಿಜೆಪಿ ಸರ್ಕಾರದಲ್ಲಿ ಮತ್ತೆ ವಿಜಯೇಂದ್ರ ಅವರ ಹಸ್ತಕ್ಷೇಪ ಹೆಚ್ಚಾಗುತ್ತದೆ. ಸರ್ಕಾರದ ಆಡಳಿತವನ್ನು ಅವರು ಸಂಪೂರ್ಣ ನಿಯಂತ್ರಣಕ್ಕೆ ತಗೆದುಕೊಳ್ಳಲು ಯತ್ನಿಸುತ್ತಾರೆ. ಇದು ಚುನಾವಣೆ ವರ್ಷದ ಸಂದರ್ಭದಲ್ಲಿ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವ ಪ್ರಬಲವಾದ ವಾದವು ಟಿಕೆಟ್ ನೀಡದೇ ಇರಲು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಪರಿಷತ್​ ಚುನಾವಣೆ: ಕಾಂಗ್ರೆಸ್​ನಿಂದ ಅಚ್ಚರಿಯ ಆಯ್ಕೆ..!

ಇಂದು ರಾತ್ರಿ ಬಿಜೆಪಿಯು ತಾನು ಗೆಲ್ಲಲು ಸಾಧ್ಯವಿರುವ ಮೇಲ್ಮನೆಯ ನಾಲ್ಕು ಸ್ಥಾನಗಳಿಗೆ ಟಿಕೆಟ್​ನನ್ನು ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ವಿಜಯೇಂದ್ರ ಅವರನ್ನು ಹೊರತುಪಡಿಸಿಯೇ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ಸಂಭವ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲತೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ ಕುಮಾರ್​​ ಕಟೀಲು ಸೇರಿದಂತೆ ಹಲವರ ಜತೆ ಹಲವು ಬಾರಿ ಸಮಾಲೋಚನೆ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರು ಮೊನ್ನೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಈ ವಿಷಯದ ಬಗ್ಗೆ ಚರ್ಚಿಸಿದೆ ಎಂದು ತಿಳಿದುಬಂದಿದೆ.

TAGGED:

ABOUT THE AUTHOR

...view details