ಕರ್ನಾಟಕ

karnataka

ರೈತ ಸಂಘಟನೆಗಳಿಂದ ಬೆಂಗಳೂರು ಚಲೋ: ಮಾರ್ಚ್‌ 26 ರಂದು ಕರ್ನಾಟಕ ಬಂದ್​ಗೆ ಕರೆ

By

Published : Mar 22, 2021, 7:29 PM IST

Updated : Mar 22, 2021, 7:48 PM IST

ಕೃಷಿ ಕಾನೂನುಗಳ ವಿರುದ್ಧ ಬೆಂಗಳೂರು ಚಲೋ ನಡೆಸಿದ ರೈತ ಸಂಘಟನೆಗಳು, ಮಾರ್ಚ್‌ 26 ರಂದು ಕರ್ನಾಟಕ ಬಂದ್​ಗೆ ಕರೆ ನೀಡಿವೆ.

Bengaluru Chalo by Farmer Organizations
ರೈತ ಸಂಘಟನೆಗಳಿಂದ ಬೆಂಗಳೂರು ಚಲೋ

ಬೆಂಗಳೂರು : ರೈತ ನಾಯಕರ ಸಮ್ಮುಖದಲ್ಲಿ ಬೆಂಗಳೂರು ಚಲೋ ನಡೆಸಿದ ಸಹಸ್ರಾರು ರೈತರು, ಕಾರ್ಮಿಕರು ಮತ್ತು ದಲಿತ ಸಂಘಟನೆಗಳ ಸದಸ್ಯರು, ಮಾರ್ಚ್‌ 26 ರಂದು ಕರ್ನಾಟಕ ಬಂದ್​ಗೆ ಕರೆ ನೀಡಿದರು. ಜೊತೆಗೆ ರಾಜ್ಯದ ಉಪಚುನಾವಣೆಗಳು ಮುಗಿದ ಬಳಿಕ ಮೇ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ರೈತ ಮಹಾಪಂಚಾಯತ್ ನಡೆಸುವುದಾಗಿ ಘೋಷಿಸಿದರು.

ಱಲಿ ಬಳಿಕ, ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿ ರದ್ದು ಮಾಡುವುದು ಸೇರಿದಂತೆ 23 ಬೇಡಿಕೆಗಳ ರೈತರ ಹಕ್ಕೊತ್ತಾಯ ಮನವಿಯನ್ನು ರಾಜ್ಯ ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಸಿಎಂ ಆದೇಶದಂತೆ ಮನವಿ ಸ್ವೀಕರಿಸಿದ್ದೇನೆ. ಎಲ್ಲರೊಂದಿಗೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಲು ತಿಳಿಸುತ್ತೇವೆ ಎಂದರು.

ಓದಿ : ನಿಜವಾದ ಭಯೋತ್ಪಾದನೆ ಮಾಡುತ್ತಿರುವುದು ಕೇಂದ್ರ ಸರ್ಕಾರ: ನಟ ಚೇತನ್ ಕಿಡಿ

ಮೋದಿ ಅನಾಗರಿಕ ಪ್ರಧಾನಿ : ಬಡಗಲಪುರ ನಾಗೇಂದ್ರ

ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದಲ್ಲಿ 541 ಸಂಘಟನೆಗಳು ರೈತಪರ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಅನ್ನದ ಋಣ ಇರುವ ಬಹಳಷ್ಟು ಜನ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ನಮ್ಮನ್ನು ಆಳುವವರು ಹೃದಯಹೀನರು, ಕಿವುಡ, ಮೂಗ, ಅನಾಗರಿಕರಾಗಿದ್ದಾರೆ. ನಮ್ಮ ದೇಶದ ಪ್ರಧಾನಿ ಅನಾಗರಿಕ. ನಮ್ಮನ್ನು ಜೈಲಿಗೆ ಹಾಕಿದ್ರೂ ಪರವಾಗಿಲ್ಲ. ಜೈಲಿಗೆ ಹೋಗಲೂ ಸಿದ್ಧರಾಗಿದ್ದೇವೆ ಎಂದು ಗುಡುಗಿದರು.

ರಾಮ ಯಾರಪ್ಪನ ಆಸ್ತಿಯೂ ಅಲ್ಲ : ಯುದ್ಧವೀರ್ ಸಿಂಗ್

ರಾಷ್ಟ್ರೀಯ ರೈತ ಮುಖಂಡ ಯುದ್ಧವೀರ್ ಸಿಂಗ್ ಮಾತನಾಡಿ, ಇದು ಕೇವಲ ರೈತ ಹೋರಾಟ ಅಲ್ಲ. ಎಲ್ಲಾ ಜನ ಸಮುದಾಯದವರ ಹೋರಾಟ. ಮೂರು ಕಾಯ್ದೆ, ಎಂಎಸ್​ಪಿ ವಿಚಾರವಾಗಿ ಆರಂಭವಾದ ಆಂದೋಲನ ಇದು. ಬೆಳೆಗಳು ಒಂದು ರೂಪಾಯಿ ಕಡಿಮೆಗೂ ಮಾರಾಟ ಆಗಬಾರದು. ಕೇಂದ್ರ ಸರ್ಕಾರ ಕೇವಲ ಉತ್ತರ ಭಾರತದ ಪ್ರತಿಭಟನೆ ಎಂದಿದ್ದರು. ಆದರೆ, ಕಳೆದ ಮೂರು ದಿನದಿಂದ ಕರ್ನಾಟಕದಲ್ಲಿಯೂ ನೋಡ್ತಿದೇವೆ, ಸಾವಿರಾರು ಜನ ಸೇರಿದ್ದಾರೆ. ಇದು ಇಡೀ ಭಾರತದ ಆಂದೋಲನ. ಸರ್ಕಾರಕ್ಕೆ ಅಭಿವೃದ್ಧಿ ಅಜೆಂಡಾ ಇಲ್ಲ, ಕೇವಲ ಕೋಮುವಾದದ ಅಜೆಂಡಾ ಇದೆ. ರಾಮ ಯಾರ ಅಪ್ಪನ ಆಸ್ತಿಯೂ ಅಲ್ಲ, ರಾಮ ಎಲ್ಲರಿಗೂ ಇರುವವನು. ಬಿಜೆಪಿ ಸರ್ಕಾರ ಚುನಾವಣೆ ಬಂದಾಗೆಲ್ಲ ಧರ್ಮದ ಜೊತೆ ಹೋಗ್ತಾರೆ. ಸರ್ಕಾರಕ್ಕೆ ರಾಮ ಮಂದಿರ ಕಟ್ಟುವುದು ಮಾತ್ರ ಅಜೆಂಡಾ ಎಂದು ವಾಗ್ದಾಳಿ ನಡೆಸಿದರು.

ಕಂಪನಿಗಳಿಂದ ಹಸಿವಿನ ವ್ಯಾಪಾರ : ರಾಕೇಶ್ ಸಿಂಗ್ ಟಿಕಾಯತ್

ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಸಿಂಗ್ ಟಿಕಾಯತ್ ಮಾತನಾಡಿ, ರೈತರ ಹೋರಾಟ ನಾಲ್ಕು ತಿಂಗಳುಗಳಿಂದ ನಡೆಯುತ್ತಿದೆ. ದೆಹಲಿಯ ಎಲ್ಲಾ ರಸ್ತೆಗಳು ಬಂದ್​ ಆಗಿವೆ. ನಾಲ್ಕು ತಿಂಗಳಿಂದ ಪ್ರತಿಭಟನೆ ನಡೆಯುತ್ತಿದೆ. ದೇಶದಲ್ಲಿ ಈಗ ಹಸಿವಿನ ವ್ಯಾಪಾರ ನಡೆಯುತ್ತಿದೆ. ದೊಡ್ಡ ದೊಡ್ಡ ಕಂಪನಿಯವರು ಹಳ್ಳಿಗಳಿಗೆ ಹೋಗ್ತೇವೆ, ಕೃಷಿ ಮಾಡ್ತೇವೆ ಅಂತಿದ್ದಾರೆ. ಅಂದರೆ ರೈತರ ಕೃಷಿಯನ್ನು ಕಿತ್ತುಕೊಂಡು ಲಾಭಕ್ಕಾಗಿ ಕೃಷಿ ಮಾಡಿ ಹಸಿವಿನ ವ್ಯಾಪಾರಕ್ಕೆ ಕಂಪನಿಗಳು ಮುಂದಾಗಿವೆ. ರೈಲ್ವೆ, ಏರ್​ಪೋರ್ಟ್, ಎಲ್​ಐಸಿ, ಮೊದಲಾದ 26 ದೊಡ್ಡ ದೊಡ್ಡ ಸಂಸ್ಥೆಗಳ ಮಾರಾಟ ಮತ್ತು ಖಾಸಗೀಕರಣ ಮಾಡಲು ಸರ್ಕಾರ ಹೊರಟಿದೆ. ಕಂಪನಿಗಳು ಕೃಷಿಯನ್ನು ವಶಕ್ಕೆ ಪಡೆದರೆ ರೈತರು ಬೆಳೆದ ಆಹಾರ ನೇರ ಗೋದಾಮುಗಳಿಗೆ ತಲುಪುತ್ತವೆ, ಬಳಿಕ ಯಾರಿಗೂ ಸಿಗುವುದಿಲ್ಲ. ಕಾರ್ಪೊರೇಟ್ ಕಂಪನಿಗಳು ತುಂಬಾನೆ ಪ್ರಭಾವ ಹೊಂದಿವೆ. ದೇಶದ ಸಂಸತ್​ನಿಂದ ಪ್ರಧಾನಿವರೆಗೆ ಪ್ರಭಾವ ಹೊಂದಿವೆ. ದೇಶದಲ್ಲಿ ಮೊದಲು ಗೋದಾಮು ಮಾಡಿ, ನಂತರ ಕಾನೂನು ಮಾಡ್ತಾರೆ. ಹೀಗಾಗಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಪ್ರತಿಪಕ್ಷದವರೂ ದುರ್ಬಲರಾಗಿದ್ದು, ಅಧಿವೇಶನದಲ್ಲಿಯೂ ಮಾತಾಡೋದಿಲ್ಲ. ಬೆಂಗಳೂರಿನಲ್ಲೊಂದು ಕಿಸಾನ್ ಮೋರ್ಚಾ ಆರಂಭಿಸಬೇಕು. ರಾಜ್ಯದ ರೈತರು ಟ್ರ್ಯಾಕ್ಟರ್​ ಹಿಡಿದು ಪ್ರತಿಭಟನೆ ಆರಂಭಿಸಿ. ತಡೆಯಲು ಬರುವ ಯಾವುದೇ ಗೋಡೆ, ಬ್ಯಾರಿಕೇಡ್ ಮುರಿದು ಮುಂದೆ ಸಾಗಬೇಕು. ಎಲ್ಲಾ ದಕ್ಷಿಣ ರಾಜ್ಯದ ರೈತರು ಉತ್ತರ ಭಾರತಕ್ಕೆ ಹೋಗಲು ಆಗುವುದಿಲ್ಲ. ಹಾಗಾಗಿ, ಬೆಂಗಳೂರಿಗೆ ಬರಲು ಮೋರ್ಚಾ ರಚನೆಯಾಗಬೇಕು. ಬೇರೆ ಗಾಡಿಯಲ್ಲಿ ಬಂದಿದ್ದರೆ ರೈತರು ದೆಹಲಿಯವರೆಗೆ ಬರಲು ಸಾಧ್ಯವಿರುತ್ತಿರಲಿಲ್ಲ. ಟ್ರ್ಯಾಕ್ಟರ್​ನಲ್ಲಿ ಬಂದಿದ್ದಕ್ಕೆ ಸಾಧ್ಯವಾಯಿತು ಎಂದರು.

ಟ್ರ್ಯಾಕ್ಟರ್ ಕಸಿದು, ನಮ್ಮ ಹೊಲ ಕಸಿಯುವಂತ ಕೆಲಸ ಮಾಡ್ತಿದಾರೆ. ವಿಧಾನಸೌಧದವರೆಗೆ ನಿಮ್ಮ ಫಸಲನ್ನು ತಂದು ಮಾರಾಟ ಮಾಡಿ. ಮಂಡಿಯಿಂದ ಹೊರಗೆ ಎಲ್ಲಿಬೇಕಾದರೂ ಮಾರಾಟ ಮಾಡಬಹುದು ಎಂದು ಸರ್ಕಾರವೇ ಕರೆ ಕೊಟ್ಟಿರುವುದರಿಂದ, ಇಲ್ಲೇ ಬಂದು ಮಾರಾಟ ಮಾಡಿ. ಶಾಸಕ, ಸಂಸದರಿಗೆ ಎರಡೆರಡು ಪಿಂಚಣಿಗಳು ಬರುತ್ತವೆ. ಆದರೆ, ಸಾಮಾನ್ಯ ಕಾರ್ಮಿಕರಿಗೆ, ಜನರಿಗೆ ಯಾವುದೇ ಪಿಂಚಣಿ ಇಲ್ಲ. ಒಟ್ಟಿನಲ್ಲಿ ನ್ಯಾಯ ಸಿಗುವವರೆಗೂ ಆಂದೋಲನ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಯಾದರೆ ರೈತರು ನಷ್ಟದಲ್ಲಿ ನರಳಬೇಕಾಗುತ್ತದೆ. ರಾಜ್ಯದಲ್ಲಿ 13 ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಇವೆ. ಒಟ್ಟು 3,119 ಕೋಟಿ ರೂ. ವ್ಯತ್ಯಾಸದಲ್ಲಿ 13 ಕೃಷಿ ಉತ್ಪನ್ನಗಳ ಮಾರಾಟವಾಗಿದ್ದು, ರೈತರಿಗೆ ಅನ್ಯಾಯ ಆಗಿದೆ ಎಂದರು.

ಸಂಯುಕ್ತ ಹೋರಾಟ ಸಂಘಟನೆಯ ಅಧ್ಯಕ್ಷೀಯ ಮಂಡಳಿ ಸದಸ್ಯೆ ಎಸ್. ವರಲಕ್ಷ್ಮಿ, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್ ಎಸ್​. ಹಿರೇಮಠ್, ಭಾರತೀಯ ಕಿಸಾನ್ ಯೂನಿಯನ್ ಮುಖಂಡರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್, ಯುದ್ಧವೀರ್ ಸಿಂಗ್ ಹಾಗೂ ಕಾರ್ಮಿಕ, ದಲಿತ ಸಂಘಟನೆಗಳ ಮುಖಂಡ ನೂರ್ ಶ್ರೀಧರ್, ಮಾವಳ್ಳಿ ಶಂಕರ್, ಪರಿಸರ ವಿಜ್ಞಾನಿ ಡಾ. ಪ್ರಕಾಶ್ ಕಮ್ಮರಡಗಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಇತರರು ಭಾಗಿಯಾಗಿದ್ದರು.

Last Updated : Mar 22, 2021, 7:48 PM IST

ABOUT THE AUTHOR

...view details