ಕರ್ನಾಟಕ

karnataka

ಕೋವಿಡ್ ತುರ್ತು ಪರಿಸ್ಥಿತಿ ತಲುಪಿದ್ರೆ ಮಾತ್ರ ಲಾಕ್‌ಡೌನ್: ಬಿಬಿಎಂಪಿ ಮುಖ್ಯ ಆಯುಕ್ತ

By

Published : Jan 11, 2022, 4:04 PM IST

ಸರ್ಕಾರ ಜನರ ಸಾಮಾನ್ಯ ಜೀವನಶೈಲಿಗೆ ಅಡ್ಡಿಯಾಗದಂತೆ, ಕೋವಿಡ್ ಮಿತಿಮೀರಿ ಹರಡದಂತೆಯೂ ಕೆಲವು ನಿರ್ಬಂಧಗಳನ್ನು ತರುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಗೌರವ್ ಗುಪ್ತ
ಗೌರವ್ ಗುಪ್ತ

ಬೆಂಗಳೂರು: ನಗರದಲ್ಲಿ ತುರ್ತು ಪರಿಸ್ಥಿತಿ ಬಂದರೆ ಮಾತ್ರ ಸಂಪೂರ್ಣ ಲಾಕ್‌ಡೌನ್ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ‌. ಸದ್ಯಕ್ಕೆ ಈಗಿರುವ ನಿರ್ಬಂಧಗಳನ್ನೇ ಮುಂದುವರಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಆಸ್ಪತ್ರೆ ಸೇರುವವರ ಪ್ರಮಾಣ ಕಡಿಮೆ ಇದೆ. ಅಗತ್ಯಕ್ಕೆ ತಕ್ಕಂತೆ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಮುಂದುವರಿಯುತ್ತದೆ. ಸರ್ಕಾರ ಜನರ ಸಾಮಾನ್ಯ ಜೀವನಶೈಲಿಗೆ ಅಡ್ಡಿಯಾಗದಂತೆ, ಕೋವಿಡ್ ಮಿತಿಮೀರಿ ಹರಡದಂತೆಯೂ ಕೆಲವು ನಿರ್ಬಂಧಗಳನ್ನು ತರುತ್ತದೆ ಎಂದರು.


ಬೆಂಗಳೂರಿನಲ್ಲಿ 12% ಕೋವಿಡ್ ಪಾಸಿಟಿವಿಟಿ ಪ್ರಮಾಣ ಇದೆ. ನಗರದಲ್ಲಿ ನಾಲ್ಕು ಸಾವಿರ ಬೆಡ್‌ಗಳಿದ್ದರೂ 1,080 ರಷ್ಟು ಮಾತ್ರ ಹಾಸಿಗೆ ಬಳಕೆಯಾಗಿದೆ. ಫಿಸಿಕಲ್ ಟ್ರಯಾಜ್ ಸೆಂಟರ್‌ಗೆ ಒಬ್ಬರಿಬ್ಬರು ಮಾತ್ರ ಬರುತ್ತಿದ್ದಾರೆ. ಹೀಗಾಗಿ ಪ್ರತಿನಿತ್ಯ ಎಷ್ಟು ಪ್ರಕರಣಗಳು ಕೋವಿಡ್ ದೃಢಪಡುತ್ತಿದೆ, ಎಷ್ಟು ಮಂದಿ ಆಸ್ಪತ್ರೆಗೆ ಸೇರುತ್ತಿದ್ದಾರೆ, ಎಷ್ಟು ಜನರಿಗೆ ಆಮ್ಲಜನಕದ ಅಗತ್ಯ ಬೀಳುತ್ತಿದೆ, ಈ ಬಗ್ಗೆಯೂ ನೋಡಬೇಕಾಗುತ್ತದೆ. ರಾಜ್ಯಮಟ್ಟದ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಕಾಲಕಾಲಕ್ಕೆ ಸಲಹೆ ನೀಡುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ದಿಕ್ಕಿನಲ್ಲೂ ಯೋಚಿಸಿ ಒಂದು ನಿರ್ಧಾರಕ್ಕೆ ಬರುತ್ತದೆ. ಆಯಾ ಸಂದರ್ಭಕ್ಕೆ ತಕ್ಕಂತೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಕೋವಿಡ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದರಿಂದ ಜನರು ಸರಿಯಾಗಿ ಮಾಸ್ಕ್ ಧರಿಸಿದರೆ ಮಾತ್ರ ಇದರ ಹರಡುವಿಕೆ ತಡೆಯಲು ಸಾಧ್ಯ. ಲಸಿಕೆಯ ಎರಡೂ ಡೋಸ್ ಪಡೆದಿದ್ದರೆ ಆಸ್ಪತ್ರೆಗೆ ಸೇರುವ ಸಾಧ್ಯತೆ ಬಹಳ ಕಡಿಮೆ. ಮಾರುಕಟ್ಟೆಗಳಲ್ಲಿ ಹಾಗೂ ಜನದಟ್ಟಣೆ ಆಗುವ ಸ್ಥಳಗಳಲ್ಲಿ ಮಾರ್ಷಲ್ಸ್ ನಿಗಾ ವಹಿಸಲಿದ್ದಾರೆ. ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ 50% ಜನರಿಗೆ ಸೀಮಿತಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

TAGGED:

ABOUT THE AUTHOR

...view details