ಕರ್ನಾಟಕ

karnataka

ಆಧಾರ ರಹಿತ ಆರೋಪ ಸಿಎಂಗೆ ಶೋಭೆ ತರಲ್ಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

By

Published : Feb 24, 2023, 1:54 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಆಡಿದ ಮಾತುಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

Opposition Leader Siddaramayya
ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ವಿಧಾನಸಭೆಯಲ್ಲಿ ತಮ್ಮ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿರುವ ಆರೋಪಕ್ಕೆ ಶಿವಾನಂದ ವೃತ್ತದ ತಮ್ಮ ಸರ್ಕಾರಿ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಅವರು ಪ್ರತಿಕ್ರಿಯೆ ನೀಡಿದರು.

ನನ್ನ ಮೇಲೆ ಸಿಎಂ ಎರಡು ವಿಷಯ ಪ್ರಸ್ತಾಪ ಮಾಡಿದ್ದಾರೆ. ನಿನ್ನೆ ಮತ್ತು ಮೊನ್ನೆ ನಾನು ಸದನದಲ್ಲಿ ಇರಲಿಲ್ಲ. ಸಿಎಂ ಅವರು ಬಜೆಟ್ ಮೇಲೆ ಉತ್ತರ ಕೊಟ್ಟಿದ್ದಾರೆ. ವೀರಾವೇಶದಿಂದ ಮಾತಾಡಿದ್ದಾರೆ. ಅವರಿಗೆ ಸ್ವಲ್ಪವಾದರೂ ಕಾನೂನಿನ ಅರಿವು ಇದೆ ಎಂದು ಭಾವಿಸಿದ್ದೇವೆ. ಎಸಿಬಿ ರಚನೆ ಮಾಡಿ ಲೋಕಾಯುಕ್ತ ಮುಚ್ಚಿ ಹಾಕಿದ್ದಾರೆ ಅಂತ ಹೇಳಿದ್ದಾರೆ. ಅವರೇ ಕೋರ್ಟ್ ಮುಂದೆ ಸರ್ಕಾರದ ಮುಂದೆ ಪ್ರತಿಪಾದನೆ ಮಾಡಿದ್ದಾರೆ. 16 ರಾಜ್ಯಗಳಲ್ಲಿ ಎಸಿಬಿ ಮತ್ತು ಲೋಕಾಯುಕ್ತ ಇದೆ. ಅಡ್ವೊಕೇಟ್ ಜನರಲ್ ಪ್ರತಿಪಾದನ ಮಾಡಿದ್ದಾರೆ ಎಂದರು.

ಎಸಿಬಿ ಪ್ರತ್ಯೇಕ ವಿಭಾಗ. ಲೋಕಾಯುಕ್ತಕ್ಕೂ, ಎಸಿಬಿಗೂ ತುಂಬಾನೇ ವ್ಯತ್ಯಾಸ ಇದೆ. ಇದನ್ನು ಸರ್ಕಾರದ ಅಡ್ವೋಕೆಟ್ ಜನರಲ್ ಹೇಳಿದ್ದಾರೆ. ಎಸಿಬಿ ಸರಿ ಮಾಡಿದ್ದು ಸರಿ ಇದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರದಲ್ಲಿ ಲೋಕಾಯುಕ್ತ ಮುಚ್ಚಿರಲಿಲ್ಲ. ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಗೋವಾದಲ್ಲಿ ಎಸಿಬಿ ಇದೆ. ಅಲ್ಲಿ ಬಿಜೆಪಿ ಸರ್ಕಾರವೇ ಇದೆ. ಅದನ್ನು ಯಾಕೆ ಮುಚ್ಚಿಲ್ಲ. ಚೌಕಿದಾರ್ ಅನ್ನೋರು ಏಕೆ ಇನ್ನು ಲೋಕಪಾಲ್ ಮಾಡಿಲ್ಲ? ಆದರೂ ನಿನ್ನೆ ಸಿಎಂ ಸದನದಲ್ಲಿ ಹಸಿ ಸುಳ್ಳು ಹೇಳಿದ್ದಾರೆ. ಸರ್ಕಾರ ಬಂದ ಕೂಡಲೇ 24 ಗಂಟೆಯಲ್ಲಿ ಎಸಿಬಿ ರದ್ದು ಮಾಡುತ್ತೇವೆ ಎಂದು ಹೇಳಿದ್ದರು. ಇವರು ಎಸಿಬಿ ರದ್ದು ಮಾಡಿಲ್ಲ. ಕೋರ್ಟ್‌ ಹೇಳಿದ ಮೇಲೆ ಎಸಿಬಿ ರದ್ದು ಆಗಿದೆ. ಸತ್ಯಹರಿಶ್ಚಂದ್ರ ಮೊಮ್ಮಕ್ಕಳ ರೀತಿ ಮಾತನಾಡ್ತಾರೆ ಎಂದು ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಅರ್ಕಾವತಿ ಲೇಔಟ್ ಬಗ್ಗೆ ನಿನ್ನೆ ಸಿಎಂ ಮಾತನಾಡಿದ್ದಾರೆ. ನಾನು ಅಧಿಕಾರಕ್ಕೆ ಬರುವ ಮುನ್ನ ಅರ್ಕಾವತಿ ಲೇಔಟ್ ಡಿನೋಟಿಫೈ ಆಗಿತ್ತು. ಇದರ ವಿರುದ್ಧ ಸುಪ್ರೀಂಕೋರ್ಟ್​ಗೆ ಕೇಸ್ ಹೋಯ್ತು. ನಾವು ಅಧಿಕಾರಕ್ಕೆ ಬರುವ ಮುನ್ನ ಇದು ನಡೆದಿತ್ತು. ನಾನು ಸಿಎಂ ಆದ ಮೇಲೆ ಮತ್ತೆ ಹೈಕೋರ್ಟ್ ಹೋಗಿದ್ದರು. ನಾನು ಮಾಡಿದ್ದು ರೀಡೂ ಅಲ್ಲ. ಸುಪ್ರೀಂ ಕೋರ್ಟ್ ಮಾನದಂಡ ಮೇಲೆ ನಾನು ಅನುಮೋದನೆ ಮಾಡಿದೆ. ಇದರ ವಿರುದ್ಧ ಆಗಿನ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಭ್ರಷ್ಟಚಾರ ಆರೋಪ ಮಾಡಿದ್ದರು. ಆಗಲೇ ನಾನು ಕೆಂಪಣ್ಣ ಆಯೋಗ ರಚನೆ ಮಾಡಿದೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕುಮಾರಸ್ವಾಮಿ ಕಾಲದಲ್ಲಿ ಡಿನೋಟಿಫೈ ಮಾಡಿದ್ದಾರೆ ಎಂದು ವಿವರಿಸಿದರು.

59 ಕೇಸ್​ನಲ್ಲಿ ಬಿ ರಿಪೋರ್ಟ್ ಹಾಕಿದ್ರು ಎಂದು ಹೇಳಿದ್ದಾರೆ. ಕೋರ್ಟ್​ನಲ್ಲಿ ಅಪೀಲ್ ಹೋಗಬಾರದು ಎಂದು ಇದೆಯಾ? ಎಫ್ಐಆರ್ ಆಗಿಲ್ಲ, ನೀವು ಹೋಗಿ ಅಪೀಲ್ ಹಾಕಿ. ಸದನದಲ್ಲಿ ಚರ್ಚೆ ಸಹ ಮಾಡಿಲ್ಲ. ಸದನದಲ್ಲಿ ಮಂಡಿಸದೆ, ವರದಿಯ ಅಂಶಗಳು ಹೇಳುವುದು ಸರಿಯಲ್ಲ. ನೀವು ಪ್ರಾಮಾಣಿಕರಾಗಿದ್ದರೆ ತನಿಖೆ ಮಾಡಿಸಿ ಸಿದ್ದರಾಮಯ್ಯ, ನಾನು ಒಂದೇ ಒಂದು ಡಿನೋಟಿಫೈ ಮಾಡಿಲ್ಲ. ಇದನ್ನು ವರದಿಯಲ್ಲಿ ಕೆಂಪಣ್ಣ ಹೇಳಿದ್ದಾರೆ. ಸದನದಲ್ಲಿ ಮಂಡಿಸದೆ, ಅಂಶಗಳನ್ನು ಹೇಳುವುದು ಇದು ಅಸೆಂಬ್ಲಿಗೆ ಮಾಡಿದ ಅವಮಾನ, ಕಪ್ಪು ಚುಕ್ಕೆ. ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ರೀಡೂ ನಾವು ಬಳಸಿದ ಪದ ಅಲ್ಲ, ಹೈಕೋರ್ಟ್ ನೀಡಿದ ಪದ ಎಂದರು.

ಇದನ್ನೂ ಓದಿ:ಜೆಡಿಎಸ್​​ಗೆ ನೀಡುವ ಒಂದೊಂದು ಮತವೂ ಕಾಂಗ್ರೆಸ್​ಗೆ ಹೋಗುತ್ತದೆ: ಅಮಿತ್​ ಶಾ

ABOUT THE AUTHOR

...view details