ಕರ್ನಾಟಕ

karnataka

ಯಾರ ನಾಮಪತ್ರವೂ ತಿರಸ್ಕಾರವಾಗಿಲ್ಲ : ಡಿಕೆ ಶಿವಕುಮಾರ್​ಗೆ ಸಿಎಂ ಬೊಮ್ಮಾಯಿ ತಿರುಗೇಟು

By

Published : Apr 22, 2023, 12:18 PM IST

Updated : Apr 22, 2023, 1:30 PM IST

ಬಿಜೆಪಿ ಪಕ್ಷದವರು ನನ್ನ ನಾಮಪತ್ರ ತಿರಸ್ಕಾರ ಮಾಡಿಸಲು ಷಡ್ಯಂತ್ರ ರೂಪಿಸಿದ್ದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ‌ ಪ್ರತಿಕ್ರಿಯೆ ನೀಡಿದ್ದಾರೆ.

basavaraj bommai
ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಬೆಂಗಳೂರು: ನನ್ನ ನಾಮಪತ್ರ ತಿರಸ್ಕಾರಕ್ಕೆ ಬಿಜೆಪಿ, ಸಿಎಂ ಕಚೇರಿ ಹಾಗೂ ಬಿಜೆಪಿ ಕಾನೂನು ಘಟಕ ಷಡ್ಯಂತ್ರ ರೂಪಿಸಿದ್ದವು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅವರ ನಾಮಪತ್ರ ಸ್ವೀಕಾರವಾಗಿರುವುದೇ ಈ ಆರೋಪಕ್ಕೆ ಉತ್ತರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿರುಗೇಟು ಕೊಟ್ಟರು.

ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರ ತಿರಸ್ಕಾರ ಮಾಡಿಸಲು ಷಡ್ಯಂತ್ರ ಮಾಡಲಾಗಿತ್ತು ಎಂದು ನಮ್ಮ ಮೇಲೆ ಡಿ ಕೆ ಶಿವಕುಮಾರ್ ಆರೋಪ ಮಾಡುತ್ತಿದ್ದಾರೆ. ಆದರೆ, ಈವರೆಗೂ ಯಾರದ್ದೂ ನಾಮಪತ್ರ ತಿರಸ್ಕೃತವಾಗಿಲ್ಲ. ಅದೇ ಸಾಕ್ಷಿ. ನಿನ್ನೆಯೇ ಎಲ್ಲಾ ಮುಗಿದು ಹೋಗಿದೆ. ಅವರಿಗೆ ಬೇರೆ ವಿಷಯ ಇಲ್ಲ, ಅದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಅಷ್ಟೇ ಎಂದರು.

ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಸೇರಿ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಅವರನ್ನ ಮುಗಿಸ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ, ಸಿದ್ದರಾಮಯ್ಯನವರನ್ನ ಹೇಗೆ ಮುಗಿಸಿದ್ದಾರೆ ಅಂತ ಗೊತ್ತಿಲ್ವಾ?, ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಮುಗಿಸಿದ್ದರು. ಈ ಬಾರಿ ವರುಣಾದಲ್ಲಿ ಮುಗಿಸಲು ಏನು ಹುನ್ನಾರ ಮಾಡಿದ್ದಾರೆ ಅನ್ನೋದು ಜಗ್ಗತ್ತಿಗೆ ಗೊತ್ತಿದೆ. ಹಾಗಾಗಿ, ಈ ರೀತಿಯ ಮಾತುಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

ಲಿಂಗಾಯತ ಡ್ಯಾಮ್ ಒಡೆದು ಹರಿದು ಕಾಂಗ್ರೆಸ್​ಗೆ ಬರುತ್ತಿದೆ ಎನ್ನುವ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲ. ಮೊದಲು ಅದನ್ನ ನೋಡಿಕೊಳ್ಳಲಿ, ಕಾಂಗ್ರೆಸ್ ಸರ್ಕಾರದ ವೇಳೆ ವೀರಶೈವ ಲಿಂಗಾಯತ ಧರ್ಮ ವಿಭಜನೆಗೆ ಯತ್ನಿಸಲಾಗಿತ್ತಾದರೂ ಅಂದು ಲಿಂಗಾಯತ ಸಮುದಾಯ ವಿಭಜನೆ ಆಗಿಲ್ಲ. ಲಿಂಗಾಯತ ಮತದಾರರು ಯಾವಾಗಲು ಪ್ರಬದ್ಧರಾಗಿದ್ದಾರೆ. ಡಿಕೆಶಿ ಹೇಳಿಕೆ ನಂತರ ಲಿಂಗಾಯತರು ಬಹಳ ಜಾಗೃತರಾಗಿ ಮತ್ತಷ್ಟು ಗಟ್ಟಿಯಾಗಿದ್ದಾರೆ. ಗಟ್ಟಿ ಮಾಡುವ ಕೆಲಸ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಸವದತ್ತಿ ಕ್ಷೇತ್ರ ಸೇರಿದಂತೆ ಐದು ಕ್ಷೇತ್ರಗಳಲ್ಲಿ ಬಿಜೆಪಿ ನಾಮಪತ್ರ ಸರಿ ಇಲ್ಲ ಎನ್ನುವ ಆರೋಪ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಚುನಾವಣಾ ಅಧಿಕಾರಗಳ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ. ಯಾವುದೇ ಪಕ್ಷ ಏನು ಮಾಡುವುದಕ್ಕೂ ಆಗಲ್ಲ. ಎಲ್ಲ ಪ್ರೋಸೀಡಿಂಗ್ ಆಗಿದೆ, ವಿಡಿಯೋ ಕವರೇಜ್ ಆಗಿದೆ. ಯಾವ ಪಕ್ಷವೂ ಏನು ಮಾಡೋಕೆ ಆಗೋದಿಲ್ಲ ಎಂದರು.

ಇದನ್ನೂ ಓದಿ :ನನ್ನ ನಾಮಪತ್ರ ತಿರಸ್ಕಾರಕ್ಕೆ ಸಿಎಂ ಕಚೇರಿ, ಬಿಜೆಪಿಯಿಂದ ಷಡ್ಯಂತ್ರ: ಡಿಕೆಶಿ ಆರೋಪ

ಶಿಗ್ಗಾಂವಿಯಲ್ಲಿ ನನ್ನ ನಾಮಪತ್ರ ಸಲ್ಲಿಕೆ ವೇಳೆ ಸುದೀಪ್ ಭಾಗಿಯಾಗಿದ್ದರು. ನನ್ನ ಜೊತೆ ರೋಡ್ ಶೋ ನಡೆಸಿದ್ದರು. ಸುದೀಪ್ ಮತ್ತೆ ಪ್ರಚಾರ ಮಾಡುತ್ತಾರೆ, ಸುದೀಪ್ ಪ್ರಚಾರ ಒಂದೆರಡು ದಿನದಲ್ಲಿ ಫೈನಲ್ ಆಗಲಿದೆ ಎಂದು ಸಿಎಂ ಬೊಮ್ಮಾಯಿ‌ ಸ್ಪಷ್ಟಪಡಿಸಿದರು.

ಬೊಮ್ಮಾಯಿ ಚುನಾವಣಾ ರೋಡ್ ಶೋ: ನಾಳೆಯಿಂದ ಪ್ರಚಾರಕ್ಕೆ ತೆರಳುತ್ತೇನೆ. ಯಲಹಂಕದಿಂದ ರೋಡ್ ಶೋ ಆರಂಭ ಮಾಡುತ್ತೇನೆ. ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು, ಅರಸಿಕೇರೆ ನಂತರ ಬೆಳಗಾವಿ, ಕಲಬುರಗಿ ಹಾಗೂ ಮೈಸೂರು ಭಾಗಗಳಲ್ಲಿ ಚುನಾವಣಾ ಯಾತ್ರೆ ನಡೆಸಲಿದ್ದೇನೆ. ಎಲ್ಲ ಕಡೆ ರೋಡ್ ಶೋಗಳನ್ನ ನಡೆಸಲಿದ್ದೇನೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ನಾಯಕರ ಪ್ರವಾಸ ವಿಚಾರದ ಸಂಬಂಧ ಪಕ್ಷ ಎಲ್ಲವನ್ನ ನಿರ್ಧಾರ ಮಾಡಲಿದೆ. ಗರಿಷ್ಠ ಸಮಯವನ್ನು ವರುಷ್ಠರು ರಾಜ್ಯಕ್ಕೆ ನೀಡಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದರು.

Last Updated : Apr 22, 2023, 1:30 PM IST

ABOUT THE AUTHOR

...view details