ಕರ್ನಾಟಕ

karnataka

ಪಂಚಮಸಾಲಿ ಹೋರಾಟ ನಿರ್ಲಕ್ಷಿಸಿದರೆ ಅಕ್ಟೋಬರ್​ನಿಂದ ಮತ್ತೆ ಧರಣಿ: ಬಸವ ಜಯಮೃತ್ಯುಂಜಯ ಶ್ರೀ

By

Published : Mar 17, 2021, 1:13 PM IST

ಸಚಿವರ ಮನವಿ ಮೇರೆಗೆ 23 ದಿನಗಳ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದು ಸೆಪ್ಟಂಬರ್ 15ರವರೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಬಸವ ಜಯಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ.

Basava Jayamarityanjaya Sri
ಬಸವ ಜಯಮೃತ್ಯಂಜಯ ಶ್ರೀ

ಬೆಂಗಳೂರು:ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸುವಂತೆ ಒತ್ತಾಯಿಸಿ ಆರಂಭಿಸಿರುವ ನಮ್ಮ ಹೋರಾಟ ನಿರಂತರವಾಗಿರಲಿದೆ. ಕೇವಲ ಧರಣಿ ನಿಂತಿದೆ, ಸರ್ಕಾರದ ಮಾತಿಗೆ ಗೌರವ ಕೊಟ್ಟು ಧರಣಿಯನ್ನು ಸೆಪ್ಟೆಂಬರ್ 15 ರವರೆಗೆ ಮುಂದೂಡಿಕೆ ಮಾಡಿದ್ದು, ಮೀಸಲಾತಿ ಆದೇಶ ಪತ್ರ ಬರುವವರೆಗೂ ಹೋರಾಟ ಇರಲಿದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಬಸವ ಜಯಮೃತ್ಯುಂಜಯ ಶ್ರೀ ತಿಳಿಸಿದ್ದಾರೆ.

ಬಸವ ಜಯಮೃತ್ಯುಂಜಯ ಶ್ರೀ

ನಗರದ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಲು ಮತ್ತು ಇತರ ಲಿಂಗಾಯತ ಸಮುದಾಯವನ್ನು ಒಬಿಸಿ ಸೇರಿಸುವ ಮೀಸಲಾತಿಗೆ ಹಕ್ಕೊತ್ತಾಯಿಸಿ ಸಂಕ್ರಾಂತಿಯಂದು ಪಂಚಲಕ್ಷ ಐತಿಹಾಸಿಕ ಪಾದಯಾತ್ರೆ ಆರಂಭಿಸಲಾಯಿತು. 39 ದಿನ ಪಾದಯಾತ್ರೆ ನಡೆಸಿ ಬೆಂಗಳೂರು ತಲುಪಲಾಯಿತು. ಈಗ ಹೋರಾಟದ ಮೊದಲ ಹಂತ ಯಶಸ್ವಿಯಾಗಿ ಮುಗಿದಿದೆ. ಅಧಿವೇಶನದಲ್ಲಿ ಆರು ತಿಂಗಳಲ್ಲಿ ಮೀಸಲಾತಿ ಕೊಡುವ ಭರವಸೆ ಕೊಡುವ ಮಟ್ಟಿಗೆ ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದರು.

ಕಾನೂನುಬದ್ದ, ಸಂವಿಧಾನಬದ್ದ ಮೀಸಲಾತಿ ಬೇಕು ಎಂದರೆ ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮನವಿ ಮಾಡಿತು, ಸಮುದಾಯದ ಸಚಿವರು, ಕಾನೂನು ಸಚಿವರೂ ಮನವಿ ಮಾಡಿದರು. ಅದಕ್ಕೆ ಪ್ರತಿಯಾಗಿ ನಾವು ಅಧಿವೇಶನದಲ್ಲಿ ಭರವಸೆಗೆ ಬೇಡಿಕೆ ಇಟ್ಟಿದ್ದೆವು. ಶಾಸಕ ಯತ್ನಾಳ್ ನಿರಂತರ ಹೊರಾಟದ ಫಲವಾಗಿ ಸದನದಲ್ಲೇ ಸಿಎಂ ಒಪ್ಪಿಗೆ ಕೊಟ್ಟ ನಂತರ ಸ್ಪೀಕರ್, ಸಚಿವರ ಮನವಿ ಮೇರೆಗೆ 23 ದಿನಗಳ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದು ಸೆಪ್ಟಂಬರ್ 15ರವರೆಗೆ ಮುಂದೂಡಿಕೆ ಮಾಡಲಾಗಿದೆ, ಅಲ್ಪ ವಿರಾಮ ನೀಡಲಾಗಿದೆ. ಅಲ್ಲಿಯವರೆಗೆ ರಾಜ್ಯಾದ್ಯಂತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದರು.

ಸರ್ಕಾರ ಮಾತಿನಂತೆ ನಡೆದುಕೊಳ್ಳದೇ ಇದ್ದಲ್ಲಿ ಅಕ್ಟೋಬರ್ 15 ರಿಂದ ಮತ್ತೆ ಧರಣಿ ಆರಂಭಿಸಲಾಗುತ್ತದೆ. ಪ್ರಧಾನಿಗೂ ಹಕ್ಕೊತ್ತಾಯ ಮಾಡಲಾಗುತ್ತದೆ. ನಮ್ಮ ಹೋರಾಟ ನಿರಂತರ, ಈಗ ಧರಣಿ ಮಾತ್ರ ನಿಂತಿದೆ, ಸರ್ಕಾರದ ಮಾತಿಗೆ ಗೌರವ ಕೊಟ್ಟು ಮುಂದೂಡಿಕೆ ಮಾಡಿದ್ದೇವೆ, ಮೀಸಲಾತಿ ಆದೇಶ ಪತ್ರ ಬರುವವರೆಗೂ ಹೋರಾಟ ಇರಲಿದೆ ಎಂದರು.

ಸದ್ಯ ಧರಣಿ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿರುವುದರಿಂದ ಸಮುದಾಯದ ಮುಖಂಡರು ಮಠಕ್ಕೆ ವಾಪಸ್ಸಾಗಲು ಒತ್ತಾಯ ಮಾಡುತ್ತಿದ್ದಾರೆ. ಹಾಗಾಗಿ ಮಾರ್ಚ್ 23 ರಿಂದ ಏಪ್ರಿಲ್ 11 ರವರೆಗೆ ಪಾದಯಾತ್ರೆ ಬಂದ ಮಾರ್ಗದಲ್ಲೇ ಶರಣಾರ್ಥಿ ಸಂದೇಶ ಜಾಥಾ ಹಮ್ಮಿಕೊಳ್ಳಲಾಗಿದೆ. ಜಾಥಾ ಮೂಲಕ ಬಂದ ಮಾರ್ಗದಲ್ಲಿ ವಾಪಸ್ಸಾಗಲಿದ್ದೇವೆ. ಬೆಂಗಳೂರಿನಿಂದ ಹೊರಟು ನೆಲಮಂಗಲ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಸವಕಲ್ಯಾಣ, ಕಲಬುರಗಿ, ವಿಜಯಪುರ, ಚಿಕ್ಕೋಡಿ, ಬೆಳಗಾವಿ, ಬೈಲಹೊಂಗಲ ಧಾರವಾಡ ಮೂಲಕ ಏಪ್ರಿಲ್ 11 ರಂದು ಕೂಡಲಸಂಗಮ ತಲುಪಲಾಗುತ್ತದೆ ಎಂದರು.

ABOUT THE AUTHOR

...view details