ಕರ್ನಾಟಕ

karnataka

ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇ ಮುಳುಗಡೆ: ತುರ್ತು ಕಾಮಗಾರಿ ನಡೆಸಿ ಸಮಸ್ಯೆ ಬಗೆಹರಿಸಿದ NHAI

By

Published : Mar 19, 2023, 8:24 AM IST

Updated : Mar 19, 2023, 9:23 AM IST

ಶುಕ್ರವಾರ ಸುರಿದ ಮಳೆಗೆ ಇತ್ತೀಚೆಗೆ ಲೋಕಾರ್ಪಣೆಗೊಂಡಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಹಾದು ಹೋಗುವ ಮಾದಾಪುರ ಗ್ರಾಮದ ಭಾಗದಲ್ಲಿ ಮುಳುಗಡೆಯಾಗಿತ್ತು.

Expressway flooded
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಮುಳುಗಡೆ

ಬೆಂಗಳೂರು: ಕೆಲವು ಜನರು ಒಳಚರಂಡಿ ಮಾರ್ಗವನ್ನು ಮಣ್ಣು ಹಾಕಿ‌ ಮುಚ್ಚಿದ್ದರಿಂದ ಶುಕ್ರವಾರ ಸುರಿದ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಮುಳುಗಡೆಯಾಗಿತ್ತು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್​​ಹೆಚ್​​ಎಐ) ತಿಳಿಸಿದೆ. ಇದೇ ವೇಳೆ ನಿನ್ನೆ ತುರ್ತು ಕಾಮಗಾರಿ ನಡೆಸಿದ್ದು, ಸಮಸ್ಯೆ ಬಗೆಹರಿಸಿದೆ.

NHAI ಸ್ಪಷ್ಟನೆ: ಕರ್ನಾಟಕದಲ್ಲಿ ಶುಕ್ರವಾರ ರಾತ್ರಿ ಅಧಿಕ ಮಳೆ ಸುರಿದಿದೆ. ಸಾಮಾನ್ಯ 0.1 ಮಿ.ಮೀ ಬದಲಾಗಿ 3.9 ಮಿ ಮೀ ಮಳೆಯಾಗಿದೆ. ಪರಿಣಾಮ ಪ್ರಾಣಿಗಳ ಓಡಾಟಕ್ಕಾಗಿ ನಿರ್ಮಿಸಿರುವ ಮೇಲ್ಸೇತುವೆಯ ಕೆಳಗೆ (ಕಿಲೋ ಮೀಟರ್ 42.640 ರಲ್ಲಿ) ಜನರು ಒಳಚರಂಡಿ ಮಾರ್ಗವನ್ನು ನಿರ್ಬಂಧಿಸಿದ್ದರಿಂದ ಮುಳುಗಡೆಯಾಗಿದೆ. ಮಾದಾಪುರ ಮತ್ತು ಇತರ ಸುತ್ತಮುತ್ತಲ ಭಾಗಗಳಲ್ಲಿ ತಮ್ಮ ಕೃಷಿ ಜಮೀನು ಮತ್ತು ಗ್ರಾಮಕ್ಕೆ ಕಿಲೋ ಮೀಟರ್ 42+640 ರಲ್ಲಿ ಪ್ರವೇಶಿಸಲು 3 ಮೀಟರ್ ಅಗಲದವರೆಗೆ ಚರಂಡಿಯನ್ನು ಮಣ್ಣಿನಿಂದ ಮುಚ್ಚಲಾಗಿತ್ತು. ಆ ಮೂಲಕ ಸರ್ವಿಸ್ ರಸ್ತೆಯಿಂದ ತಮ್ಮದೇ ಆದ ಮಾರ್ಗವನ್ನು ನಿರ್ಮಿಸುವ ಮೂಲಕ ರಸ್ತೆ ಕಡಿತ ಮಾರ್ಗ ಮಾಡಿಕೊಂಡಿದ್ದರು. ಪ್ರಾಣಿಗಳ ಓಡಾಟಕ್ಕಿರುವ ಮೇಲ್ಸೇತುವೆಯ ಕೆಳಗೆ ಅವ್ಯಾಹತ ಮಳೆ ಸುರಿದಾಗ ಮುಳುಗಡೆಯಾಗಿದೆ.

ಜನರ ಪ್ರವೇಶಕ್ಕಾಗಿ ನಿರ್ಮಿಸಿದ್ದ ದಂಡೆಯನ್ನು ಶನಿವಾರ ಮುಂಜಾನೆಯೇ ತೆರವುಗೊಳಿಸಲಾಗಿದೆ. ಮಾದಾಪುರ ಗ್ರಾಮದ ಅಕ್ಕಪಕ್ಕದ ಹೊಲಗಳಿಗೆ ಅನುಕೂಲವಾಗುವಂತೆ 1.2 ಮೀ ಡಯಾ ಪೈಪ್‌ನ ಎರಡು ಸಾಲುಗಳನ್ನು ಪೈಪ್ ಡ್ರೈನ್ ಮೂಲಕ ಒದಗಿಸಲು ನಿರ್ಧರಿಸಲಾಗಿದೆ. ಈ ಕಾಮಗಾರಿ ಶನಿವಾರ ಮಧ್ಯರಾತ್ರಿ ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

ಪ್ರತಾಪ್ ಸಿಂಹ ಟ್ವೀಟ್‌: "ಬಹುಶಃ ಬೈದು, ಟೀಕಿಸಿ, ಕುಹಕವಾಡಿ ಮುಗಿಯಿತು ಅಂದುಕೊಳ್ತೀನಿ. ಮಳೆ ನೀರು ಹೋಗುವ ಚರಂಡಿಯನ್ನು ಯಾರೋ ರಸ್ತೆ ಮಾಡಿಕೊಳ್ಳಲು ಅನಧಿಕೃತವಾಗಿ ಮುಚ್ಚಿದ್ದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಕೆಲಕಾಲ ಈಜುಕೊಳವಾಗಿತ್ತು. ಎರಡು Hume Pipe ಹಾಕಿ ಸರಿಪಡಿಸಿದ್ದೇವೆ. ಧನ್ಯವಾದಗಳು" ಎಂದು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಸುರಿದ ಮಳೆಗೆ ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರಿಂದ ಉದ್ಘಾಟಿಸಲ್ಪಟ್ಟಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಮಾದಾಪುರ ಗ್ರಾಮದ ಭಾಗದಲ್ಲಿ ಮುಳುಗಡೆಯಾಗಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಾಗಿತ್ತು. ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳು ಟೀಕೆ ಮಾಡಿದ್ದರು. ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಕೈ ನಾಯಕರು ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ:ಮೈಸೂರು - ಬೆಂಗಳೂರು ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಪ್ರಧಾನಿ ಮೋದಿ

ದುಬಾರಿ ಟೋಲ್, ಪ್ರತಿಭಟನೆ:ದುಬಾರಿ ಟೋಲ್​​ನಿಂದ ಈಗಾಗಲೇ ವಾಹನ ಸವಾರರಿಗೆ ಶಾಕ್ ನೀಡಿರುವ ಬೆಂಗಳೂರು - ಮೈಸೂರು ದಶಪಥ ಎಕ್ಸ್‌ಪ್ರೆಸ್‌ ಹೈವೇ ಇದೀಗ ಗಾಯದ ಮೇಲೆ ಬರೆ ಎಂಬಂತೆ ಕೆಎಸ್​ಆರ್​​ಟಿಸಿ ಬಸ್ ಪ್ರಯಾಣಿಕರಿಗೂ ಬರೆ ಎಳೆದಿದೆ. ದುಬಾರಿ ಟೋಲ್ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ತನ್ನ ಟಿಕೆಟ್ ದರವನ್ನು ಹೆಚ್ಚಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-275 ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹೊಸದಾಗಿ ನಿರ್ಮಿಸಿರುವ ಎಕ್ಸ್‌ಪ್ರೆಸ್ ಹೈವೇಯ ಮೊದಲನೇ ಹಂತದ ಬೆಂಗಳೂರು - ನಿಡಘಟ್ಟ ಮಧ್ಯದಲ್ಲಿನ ಕಣಿಮಿಣಿಕ ಟೋಲ್‌ ಮುಖಾಂತರ ಕಾರ್ಯಾಚರಣೆಯಾಗುವ ಬಸ್​​ಗಳಿಗೆ ಟೋಲ್ ಸಂಗ್ರಹಿಸಲು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೇ: ದುಬಾರಿ ಟೋಲ್ ಹೊರೆಗೆ ಇದೀಗ ಕೆಎಸ್ಆರ್​ಟಿಸಿ ಪ್ರಯಾಣಿಕರ ಮೇಲೆ ಬರೆ

Last Updated : Mar 19, 2023, 9:23 AM IST

ABOUT THE AUTHOR

...view details