ಬೆಂಗಳೂರು: ಪತ್ನಿ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಓಡಾಡಿಕೊಳ್ಳುತ್ತಿರುವುದನ್ನು ಪ್ರಶ್ನಿಸಲು ಹೋಗಿದ್ದ ದಂಪತಿ ಮೇಲೆ ಆರೋಪಿಗಳು ಮಚ್ಚಿನಿಂದ ಹಲ್ಲೆ ಮಾಡಿದ್ದು, ಗಲಾಟೆಯಲ್ಲಿ ಪತಿ ಮೃತಪಟ್ಟಿದ್ದು, ಪತ್ನಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ಗಂಗೊಂಡಹಳ್ಳಿ ನಿವಾಸಿ ಮುದಾಸೀರ್ ಖಾನ್ನನ್ನು ಹತ್ಯೆ ಮಾಡಿದ ಆರೋಪದಡಿ ಇಬ್ಬರು ಅಣ್ಣ ತಮ್ಮಂದಿರಾದ ವಾಹಿದ್ ಅಹ್ಮದ್ ಹಾಗೂ ಮತೀನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಮುದಾಸೀರ್ ಖಾನ್ ಹಾಗೂ ಆಯೇಷಬಾನು ದಂಪತಿಗೆ 13 ವರ್ಷಗಳ ಹಿಂದೆ ಮದುವೆಯಾಗಿತ್ತು. ನಾಲ್ಕು ಮಕ್ಕಳಿದ್ದಾರೆ. ಆರೋಪಿ ವಾಹಿದ್ ಹಾಗೂ ಮತಿನ್ ಎಂಬುವರು ಮುದಾಸೀರ್ ಸಂಬಂಧಿಗಳಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆ ನಾಲ್ಕು ತಿಂಗಳ ಹಿಂದೆ ಗಲಾಟೆಯಾಗಿತ್ತು. ಕುಟುಂಬದ ಹಿರಿಯರು ರಾಜಿ ಸಂಧಾನ ಮಾಡಿದ್ದರು.
ಈ ಮಧ್ಯೆ ಮತ್ತೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿದೆ. ನಿನ್ನೆ ಸಂಜೆ 7.30ರ ಸುಮಾರಿಗೆ ಗಲಾಟೆ ಹೆಚ್ಚಾಗುತ್ತಿದ್ದಂತೆ ಆರೋಪಿಗಳು ಮುದಾಸೀರ್ ಹಾಗೂ ಪತ್ನಿ ಮೇಲೆ ಹಲ್ಲೆ ಮಾಡಿದ್ದರು. ಕೆಲ ಸಮಯದ ಬಳಿಕ ತೀವ್ರ ಗಾಯಗೊಂಡಿದ್ದ ಮುದಾಸೀರ್ ಮೃತಪಟ್ಟಿದ್ದಾರೆ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ಹಾಗೂ ಗಂಡನ ಸಾವಿನ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ವಾಹಿದ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೆ ಸಹೋದರ ಮತಿನ್ ಕೆಂಗೇರಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಕೆಲ ತಿಂಗಳ ಹಿಂದೆ ಮೃತನ ಪತ್ನಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದ. ಈ ಬಗ್ಗೆ ತಿಳಿದಿದ್ದ ಮುದಾಸೀರ್ ಈತನ ಜೊತೆಗೆ ಗಲಾಟೆ ಮಾಡಿಕೊಂಡಿದ್ದನು. ಕೊನೆಗೆ ರಾಜಿ ಸಂಧಾನ ಮಾಡಲಾಗಿತ್ತು.