ಕರ್ನಾಟಕ

karnataka

ಕರ್ನಾಟಕವೇ ಮಾಡೆಲ್, ನಮಗೆ ಯುಪಿ, ಗುಜರಾತ್ ಮಾಡೆಲ್ ಬೇಕಿಲ್ಲ, ರಾಜ್ಯಪಾಲರಿಂದ ಸರ್ಕಾರ ಬರೀ ಸುಳ್ಳು ಹೇಳಿಸಿದೆ: ಹರಿಪ್ರಸಾದ್

By

Published : Feb 14, 2023, 3:40 PM IST

ರಾಜ್ಯಪಾಲರು ಆಡಳಿತದಲ್ಲಿ ಪಾರದರ್ಶಕತೆ ಇದೆ ಎಂದಿದ್ದಾರೆ. ಆದರೆ ಪಾರದರ್ಶಕತೆಯಲ್ಲಿ ಸ್ಪಷ್ಟತೆ ಇಲ್ಲ. ನರೇಗಾದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ - ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್

ಬೆಂಗಳೂರು: ಕರ್ನಾಟಕಕ್ಕೆ ಬೇರೆ ರಾಜ್ಯಗಳ ಮಾಡೆಲ್ ಬೇಕಿಲ್ಲ. ಕರ್ನಾಟಕವೇ ಒಂದು ಮಾಡೆಲ್. ವಿಐಎಸ್ಎಲ್, ಮೈಸೂರು ಸೋಪ್ಸ್, ಮೈಸೂರು ಲ್ಯಾಂಪ್ಸ್ ಮುಚ್ಚಬಾರದು. ಒಂದು ವೇಳೆ ಈ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಹೊರಟರೆ ಅದನ್ನು ದೇಶದ್ರೋಹದ ಕೆಲಸ ಎಂದು ಕರೆಯಬೇಕಾಗಲಿದೆ. ರಾಜ್ಯಪಾಲರ ಬಾಯಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಹರಿಪ್ರಸಾದ್, ಜಿಎ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಮಾತೆತ್ತಿದರೆ ಗುಜರಾತ್ ಮಾಡೆಲ್ ಎನ್ನುತ್ತಿದ್ದಾರೆ. ಆದರೆ, ಅದೇನು ಎಂದು ಈವರೆಗೂ ನಮಗೆ ಗೊತ್ತಿಲ್ಲ. ನಮ್ಮಲ್ಲಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಐದು ಇಂಜಿನಿಯರಿಂಗ್ ಕಾಲೇಜು ಇದೆ. ದೇರಳಕಟ್ಟೆ ಪಂಚಾಯತ್ ಒಂದರಲ್ಲೇ ಐದು ಮೆಡಿಕಲ್ ಕಾಲೇಜು ಇದೆ. ಗುಜರಾತ್​ನಲ್ಲಿ ಎಲ್ಲಿದೆ? ಹಾಗಾದರೆ ಅದು ಯಾವ ಮಾಡೆಲ್? ಎಂದು ಪ್ರಶ್ನಿಸಿದರು.

ಅಮಿತ್ ಶಾ ರಾಜ್ಯಕ್ಕೆ ಬಂದಾಗ ನಂದಿನಿಯನ್ನು ಅಮೂಲ್ ಜೊತೆ ಸೇರಿಸಿ ಎಂದ ವರದಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದು ಖಂಡನೀಯ. ನಮ್ಮ ರೈತರು ಕಷ್ಟಪಟ್ಟು ಬೆಳೆಸಿದ ಹಾಲು ಒಕ್ಕೂಟ ನಮ್ಮದು. ನೀವು ಬೇಕಾದರೆ ನಂದಿನಿ ಜೊತೆ ಅಮೂಲ್ ಸೇರಿಸಿ, ನಮಗೆ ಯುಪಿ ಮಾಡೆಲ್ ಬೇಕಿಲ್ಲ, ಗುಜರಾತ್ ಮಾಡೆಲ್ ಬೇಕಿಲ್ಲ ಎಂದು ಟಾಂಗ್ ನೀಡಿದರು.

ಸಂವಿಧಾನದ ಅಡಿ 60 ವರ್ಷದ ಆಡಳಿತ ನಡೆಸಿದ್ದೇವೆ- ಹರಿಪ್ರಸಾದ್​:ಸಂವಿಧಾನ, ಪ್ರಜಾಪ್ರಭುತ್ವ ಇಟ್ಟುಕೊಂಡು ನಾವು 60 ವರ್ಷ ಆಡಳಿತ ನಡೆಸಿದ್ದೇವೆ. ರಾಜ್ಯದ, ದೇಶದ ಅಭಿವೃದ್ಧಿಯಲ್ಲಿ ನಮ್ಮ ಕೊಡುಗೆಯೂ ಇದೆ. ಇಲ್ಲದಿದ್ದರೆ ಇವರೆಲ್ಲಿ ಪ್ರಧಾನಿ ಆಗುತ್ತಿದ್ದರು? ನಮ್ಮ ಕೊಡುಗೆ ಕೂಡ ಸ್ಮರಿಸಬೇಕು. ಇಂಧನ ಇಲಾಖೆಯಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡಿದ್ದಕ್ಕಾಗಿ ನಮ್ಮ ಡಿ ಕೆ ಶಿವಕುಮಾರ್ ಅವರನ್ನು ಮೋದಿ ಸರ್ಕಾರದ ವೇಳೆಯಲ್ಲೇ ಸನ್ಮಾನಿಸಲಾಗಿತ್ತು ಎಂದು ಉಲ್ಲೇಖಿಸಿದರು.

ರಾಜ್ಯಪಾಲರು ಆಡಳಿತದಲ್ಲಿ ಪಾರದರ್ಶಕತೆ ಇದೆ ಎಂದಿದ್ದಾರೆ. ಆದರೆ, ಪಾರದರ್ಶಕತೆಯಲ್ಲಿ ಸ್ಪಷ್ಟತೆ ಇಲ್ಲ. ನರೇಗಾದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಿಲ್ಲ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ, ಪ್ರಧಾನಿಗೆ ಪತ್ರ ಬರೆದರೂ ಕ್ರಮ ಇಲ್ಲವೆಂದು ಬೇಸತ್ತು ಆತ್ಮಹತ್ಯೆ ಮಾಡಿಕೊಂಡ, ಸರ್ಕಾರದಿಂದ ಹಣ ಬಂದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ, ಆತನ ಜೀವಕ್ಕೆ ಬೆಲೆ ಇಲ್ಲವೇ? ಸರ್ಕಾರದ ಕೆಲಸ ದೇವರ ಕೆಲಸ ಎಂದು ವಿಧಾನಸೌಧದ ಮುಂದೆ ಬರೆದಿದೆ.

ಆದರೆ 10 ಲಕ್ಷ ತಂದು ಇಂಜಿನಿಯರ್ ಸಿಕ್ಕಿಬಿದ್ದ. ಯಾರಿಗೆ ಕಾಣಿಕೆ ಕೊಡಲು ತಂದಿದ್ದರು. ವಿಧಾನಸೌಧಕ್ಕೆ 10 ಲಕ್ಷ ತಂದು ಕೊಡುತ್ತಾರೆ ಎಂದರೆ ಜನರಿಗೆ ಯಾವ ಭಾವನೆ ಬರಲಿದೆ. ವಿಧಾನಸೌಧಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾರೆ. ಆದರೆ ಇದರ ಉಲ್ಲೇಖ ರಾಜ್ಯಪಾಲರ ಭಾಷಣದಲ್ಲಿ ಮಾಡಿಲ್ಲ ಎಂದು ಟೀಕಿಸಿದರು.

’ಮೀಸಲು ವಿಚಾರದಲ್ಲೂ ಸರ್ಕಾರ ಸುಳ್ಳು ಹೇಳಿದೆ’:ಮೀಸಲಾತಿಗಾಗಿ ಹೊಸ ಪ್ರವರ್ಗ ರಚಿಸಿದ್ದಾರೆ. ಆದರೆ ಎಸ್ಸಿ ಎಸ್ಟಿ ಒಬಿಸಿಗಳು ತುಳಿತಕ್ಕೊಳಗಾಗಿದ್ದಾರೆ. ಮೀಸಲಾತಿ ಉದ್ಯೋಗ ವಿನಿಮಯ ಕೇಂದ್ರ ಅಲ್ಲ, ಈ ವಿಚಾರದಲ್ಲಿಯೂ ಸುಳ್ಳು ಹೇಳಿದ್ದಾರೆ. ಮೀಸಲಾತಿ ಹೆಚ್ಚಳದ ಹೆಸರಿನಲ್ಲಿ ಎಸ್ಸಿ ಎಸ್ಟಿ ಸಮುದಾಯದ ಮೂಗಿಗೆ ಬೆಣ್ಣೆ ಹಚ್ಚಿದ್ದಾರೆ. ಸರ್ಕಾರಿ ಸ್ವಾಮ್ಯದ ಕಂಪನಿ ಯಾಕೆ ಮುಚ್ಚುತ್ತಿದ್ದೀರಿ. ವಿಎಸ್ಐಎಲ್ ಖಾಸಗಿಗೆ ಕೊಡುವುದಾದರೆ ಅದು ದೇಶದ್ರೋಹದ ಕೆಲಸ ಎಂದು ಕರೆಯಬೇಕಾಗಿದೆ ಎಂದರು.

ಖಾಸಗಿಕರಣ ಸಮರ್ಥಿಸಿಕೊಂಡ ಮುರುಗೇಶ್​ ನಿರಾಣಿ:ಈ ವೇಳೆ ಮಧ್ಯಪ್ರದೇಶ ಮಾಡಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ವಿಐಎಸ್​ಎಲ್​ ನೂರು ವರ್ಷದ ಹಿಂದೆ ಪ್ರಾರಂಭವಾಗಿದೆ. ಮೊದಲು ರಾಜ ಮಹಾರಾಜರು ಕೈಗಾರಿಕೆಗಳನ್ನು ಸ್ಥಾಪಿಸುತ್ತಿದ್ದರು. ನಂತರ ಕೇಂದ್ರ, ರಾಜ್ಯ ಸರ್ಕಾರ ಸಾರ್ವಜನಿಕ ಉದ್ದಿಮೆ ಆರಂಭಿಸಲು ಶುರು ಮಾಡಿತು. ಬಳಿಕ ಸಹಕಾರಿ ಅಡಿಯಲ್ಲಿ ಸ್ಥಾಪಿಸಲಾಯಿತು.

ಆದರೆ, ನಂತರ ಎಲ್ಲಾ ವಲಯದಲ್ಲೂ ಖಾಸಗಿ ಆಡಳಿತದ ವಲಯದಲ್ಲಿ ನಡೆಯುತ್ತಿವೆ. ಯಾವುದೇ ರಾಜ್ಯದಲ್ಲಿಯೂ ಹೊಸದಾಗಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಈಗ ಆರಂಭಗೊಳ್ಳುತ್ತಿಲ್ಲ. ಇರುವ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಬೇಕು. ರೋಗಗ್ರಸ್ತ, ಸರಿಪಡಿಸಲಾಗದ ಕಾರ್ಖಾನೆ ಮುಚ್ಚುವ ಬದಲು ಖಾಸಗಿಯವರಿಗೆ ವಹಿಸಿದರೆ ಉದ್ಯೋಗ ಸೃಷ್ಟಿಯಾಗಲಿದೆ. ಉದ್ಯೋಗ ಸೃಷ್ಟಿಯಾಗಬೇಕು, ಲಾಭದಾಯಕವಾಗಬೇಕು, ರೋಗಗ್ರಸ್ತ ಕಾರ್ಖಾನೆ ಮಾತ್ರ ಖಾಸಗೀಕರಣ ಮಾಡಬೇಕು, ಲಾಭದಾಯಕವಾಗಿದ್ದನ್ನು ಸರ್ಕಾರವೇ ಮುಂದುವರೆಸಬೇಕು ಎಂದರು.

ಸಚಿವರ ಸಮರ್ಥನೆಗೆ ಹರಿಪ್ರಸಾದ್​ ಆಕ್ಷೇಪ:ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹರಿಪ್ರಸಾದ್, ಮಂಡ್ಯ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಹೇಳುವುದಾದರೆ ನಿಮಗೆ ದಮ್ಮಿದ್ದರೆ, ತಾಕತ್ತಿದ್ದರೆ ಮಂಡ್ಯ ಸಕ್ಕರೆ ಕಾರ್ಖಾನೆ ಖಾಸಗೀಕರಣ ಮಾಡಿ ನೋಡೋಣ. ಅಲ್ಲಿನ ಜನ ನಿಮ್ಮನ್ನು ಸುಮ್ಮನೆ ಬಿಡುತ್ತಾರಾ? ವಿಎಸ್ಐಎಲ್, ಮೈಸೂರ್ ಸೋಪ್, ಮೈಸೂರು ಲ್ಯಾಂಪ್ಸ್ ಖಾಸಗಿಕರಣ ಮಾಡಬಾರದು, ವಿದ್ಯುತ್ ಮೊದಲು ಬಂದಿದ್ದು ಕರ್ನಾಟಕಕ್ಕೆ, ಇದು ಕರ್ನಾಟಕ ಮಾದರಿ, ನಾನು ಖಾಸಗೀಕರಣದ ವಿರೋಧಿ,ಖಾಸಗೀಕರಣ ಮಾಡಿದರೆ ಅವರನ್ನು ದೇಶದ್ರೋಹಿ ಎನ್ನುತ್ತೇನೆ ಎಂದರು.

ಹೆಚ್ಎಂಟಿ ಮುಚ್ಚಿಹೋಯಿತು. ಐಟಿಐ ಮುಚ್ಚಿ ಹೋಯಿತು. ಲಾಭದಾಯಕ ಇದ್ದ ಮಂಗಳೂರು ವಿಮಾನ ನಿಲ್ದಾಣ ಯಾಕೆ ಖಾಸಗೀಕರಣ ಮಾಡಿದ್ದೀರಿ. ಯಾರಿಗೆ ಅನುಕೂಲ ಮಾಡಿಕೊಡಲು ಮಾಡಿದ್ದೀರಿ, ಖಾಸಗಿಯವರು ದೇವ ಲೋಕದಿಂದ ಬಂದಿಲ್ಲ, ಐದಾರು ಬ್ಯಾಂಕ್ ಸ್ಥಾಪನೆ ಮಾಡಿದ್ದು ಕರ್ನಾಟಕದವರು. ಆದರೆ ಸಾಲ ಮಾಡಿ ಮುಳುಗಿಸಿದ್ದು ಯಾರು?. ಕರ್ನಾಟಕವನ್ನು ಬೇರೆಯವರು ಅನುಕರಿಸಬೇಕೇ ಹೊರತು ಕರ್ನಾಟಕವೇ ಬೇರೆ ರಾಜ್ಯವನ್ನು ಫಾಲೋ ಮಾಡಬೇಕಿಲ್ಲ. ಹಾಗಾಗಿ ಸರ್ಕಾರ ವಿಐಎಸ್ಎಲ್ ಮುಚ್ಚಬಾರದು. ಈ ನಿರ್ಧಾರ ಬದಲಿಸಬೇಕು ಎಂದು ಹೇಳಿದರು.

ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಸಮವಸ್ತ್ರದ ಬದಲು ಗಣವಸ್ತ್ರ ಎಂದು ಹಿಂದಿಯಲ್ಲಿ ಹೇಳಿದರು. ಇವರ ದೃಷ್ಟಿ ಯಾವ ಕಡೆ ಇದೆ ಎಂದು ಗೊತ್ತಾಗಲಿದೆ ಎಂದರು. ಇದಕ್ಕೆ ಸ್ಪಷ್ಟೀಕರಣ ನೀಡಿದ ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್ ಕುಮಾರ್, ಗಣ ಎಂದರೆ ಗುಂಪು, ಶಿವನ ಸುತ್ತಿಲಿನ ನಂದಿ ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಹರಿಪ್ರಸಾದ್, ನನ್ನನ್ನು ಚುಚ್ಚಬೇಡಿ, ಕಮ್ಯುನಿಸ್ಟ್ ನಿಂದ ಕೋಮುವಾದಿಯಾಗಿದ್ದೀರಿ, ಚುಚ್ಚಿದ್ದಕ್ಕೆ ನೇರವಾಗಿ ಹೇಳುತ್ತೇನೆ, ಗಣವಸ್ತ್ರ ಎಂದರೆ ಆರ್​ಎಸ್​ಎಸ್​ ಚಡ್ಡಿ ಬಟ್ಟೆ ಎನ್ನುತ್ತೇನೆ ಎಂದು ಟೀಕಿಸಿದರು. ಈ ವೇಳೆ ಮಾತನಾಡಿದ ಸರ್ಕಾರದ ಸಚೇತಕ ನಾರಾಯಣಸ್ವಾಮಿ, ನಾನು ಆರ್​ಎಸ್​ಎಸ್​ ಸಮವಸ್ತ್ರ ಹಾಕಿದ್ದೇನೆ, ಮುಂದೆಯೂ ಹಾಕುತ್ತೇನೆ, ಇದು ನಮ್ಮ ಹೆಮ್ಮೆ ಎಂದರು.

ಸರ್ಕಾರದಲ್ಲಿ ಮೊಟ್ಟೆ ಕಳ್ಳರು: ನಂತರ ಮಾತು ಮುಂದುವರೆಸಿದ ಹರಿಪ್ರಸಾದ್, ಮಕ್ಕಳಲ್ಲಿ ಅಪೌಷ್ಟಿಕತೆ ತೊಡೆದುಹಾಕಲು ಮೊಟ್ಟೆ ಕೊಡಲು ನಿರ್ಧರಿಸಿದ್ದರೆ ಕೆಲ ಮಠಾಧೀಶರು ಮತ್ತು ಇತರ ಕೆಲವರ ಚಿತಾವಣೆಯಿಂದ ಮೊಟ್ಟೆ ಬದಲು ಬಾಳೆಹಣ್ಣು ಕೊಡುತ್ತಿದ್ದಾರೆ. ಈ ಸರ್ಕಾರದಲ್ಲಿ ಮೊಟ್ಟೆ ಕಳ್ಳರಿದ್ದಾರೆ. ಮಕ್ಕಳ ಮೊಟ್ಟೆಯನ್ನೇ ಕದಿಯುತ್ತಿದ್ದಾರೆ. ಉನ್ನತ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದ್ದೇವೆ. ಹೊಸ ಶಿಕ್ಷಣ ನೀತಿ ತಂದಿದ್ದೇವೆ ಎನ್ನುತ್ತಾರೆ.

ಆದರೆ, ಶಿಕ್ಷಣ ಕ್ಷೇತ್ರದಲ್ಲಿ ಹಿಂದಿರುವ ಗುಜರಾತ್​ನಲ್ಲಿ ತರಬೇಕು. ಕರ್ನಾಟಕದಲ್ಲಿ ಅಲ್ಲ ಎಂದು ತಿವಿದರು. ಜಿಲ್ಲೆಗೊಂದು ವಿವಿ ಎಂದರೆ ಏನು ಮಾಡಲು ಹೊರಟಿದ್ದೀರಿ. ಬೌದ್ಧಿಕ ದಾರಿದ್ರ್ಯ ತರುತ್ತಿದ್ದೀರಿ. ಹೊಸ ವಿವಿ ಮಾಡಿದಾಗ ವಿಸಿಗಳ ನೇಮಕ ಮಾಡುತ್ತೀರಲ್ಲ. ಅದರಲ್ಲಿ ಬರೀ ಕಾಂಚಾಣ ಹರಿದಾಡುತ್ತದೆ. ಇದನ್ನು ಮೈಸೂರಿನಲ್ಲಿ ಸಂಸದರೊಬ್ಬರೇ ಹೇಳಿದ್ದರು. ವಿವಿ ಎಂದರೆ ದೇಗುಲ ಆಗಬೇಕಿತ್ತು. ಆದರೆ ಹಗರಣಗಳ ಜಾಗವಾಗಿದೆ. ಸಂಪೂರ್ಣವಾಗಿ ವಿದ್ಯಾಕ್ಷೇತ್ರ ನಾಶ ಮಾಡಿದ್ದೀರಿ ಎಂದರು.

ಬೆಂಗಳೂರು ನಗರದಲ್ಲಿ 40 ಲಕ್ಷ ಕೊಳಚೆ ನಿವಾಸಿಗಳಿದ್ದಾರೆ. ಅವರಿಗೆ ಪುನರ್ವಸತಿ ಯೋಜನೆ ಇವೆಯಾ? ಇವರ ಬಗ್ಗೆ ಯಾವುದೇ ರೀತಿಯ ಕಾರ್ಯಕ್ರಮ ಇಲ್ಲ. ರಾಜ್ಯಪಾಲರ ಬಾಯಲ್ಲಿ ಸತ್ಯಕ್ಕೆ ದೂರವಾದ ವಿಷಯ ಹೇಳಿಸಿದ್ದಾರೆ. ರಸ್ತೆ ಗುಂಡಿ ಅಪಘಾತದಲ್ಲಿ ವರ್ಷದಲ್ಲಿ 13 ಸಾವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನಹಾನಿಯಾಗಿದೆ. ಇದರ ಉಲ್ಲೇಖವಿಲ್ಲ, 25 ಸಾವಿರ ಕೋಟಿಗೂ ಹೆಚ್ಚಿನ ಹಣ ಏಳು ವರ್ಷದಲ್ಲಿ ಪಾಲಿಕೆ ವಿನಿಯೋಗಿಸಿದೆ. ಆದರೂ ರಸ್ತೆಗುಂಡಿ ಮುಚ್ಚಿಲ್ಲ, ಕೋರ್ಟ್ ಗಳು ಚಾಟಿ ಬೀಸಿದರೂ ಚಿತ್ರಣ ಬದಲಾಗಿಲ್ಲ. ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗಳ ಸಾವಾಗಿದೆ. ಪರಿಹಾರ ನೀಡುವುದು ಬೇರೆ ವಿಷಯ. ಆದರೆ ಇಂತಹ ಸ್ಥಿತಿ ಯಾವತ್ತೂ ಬಂದಿರಲಿಲ್ಲ ಎಂದು ಹೇಳಿದರು.

ಬಿಬಿಸಿಯ ಗುಜರಾತ್ ಫೈಲ್ಸ್ ತೋರಿಸಿ: ಕಪೋಲಕಲ್ಪಿತ ಕಾಶ್ಮೀರ್ ಫೈಲ್ಸ್ ಎಲ್ಲ ಕಡೆ ತೋರಿಸಿದ್ದೀರಲ್ಲ ಅದೇ ರೀತಿ ಬಿಬಿಸಿಯ ಗುಜರಾತ್ ಫೈಲ್ಸ್ ತೋರಿಸಿ ಎಂದು ಸದನದಲ್ಲಿ ಹರಿಪ್ರಸಾದ್ ಆಗ್ರಹಿಸಿದರು. ಸಭಾಪತಿಗಳ ಮೂಲಕ ಮನವಿ ಮಾಡಿದರು. ತುಳು, ಕೊಡವ, ಕುಂದ ಕನ್ನಡಕ್ಕೆ ಪ್ರಾತಿನಿಧ್ಯ ಸಿಗಬೇಕು. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಬೇಕು. ಕನ್ನಡ ಭಾಷೆ ಶಾಸ್ತ್ರೀಯ ಭಾಷೆ. ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಬೇಕು ಎಂದು ಒತ್ತಾಯಿಸಿದರು.

ಮಹಾದಾಯಿ ವಿಚಾರದಲ್ಲಿ ನಾಲ್ಕು ಇಂಜಿನ್ ಸರ್ಕಾರ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಬೇಕಿತ್ತು. ಆದರೆ ಅದಾಗಿಲ್ಲ, ವಿಪತ್ತು ಸಂಭವಿಸಿದಾಗ ಪ್ರಧಾನಿ ವೈಮಾನಿಕ ಸಮೀಕ್ಷೆ ನಡೆಸಬೇಕು. ಆದರೆ ಮೋದಿ ಬರಲಿಲ್ಲ. ರಾಜ್ಯದ ನೆರೆ, ಕೋವಿಡ್ ವೇಳೆ ಬಾರದ ಮೋದಿ ಈಗ ತಿಂಗಳಿಗೆ ಮೂರು ಬಾರಿ ಬರುತ್ತಿದ್ದಾರೆ. ನೀವೇನು ಪೊಲಿಟಿಕಲ್ ಟೂರಿಸಿಂ ಮಾಡುತ್ತಿದ್ದೀರಾ? ಎಂದು ಟೀಕಿಸಿದರು.

ಸತ್ಯಕ್ಕೆ ದೂರವಾದ ಭಾಷಣ, ಸರ್ಕಾರದ ತಪ್ಪು ಒಪ್ಪುಗಳ ಮುಚ್ಚುವ ಭಾಷಣ, ಪರೇಶ್ ಮೇಸ್ತಾ ಪ್ರಕರಣದಲ್ಲಿ ಏನಾಯಿತು? ಸಿಬಿಐಗೆ ವಿಸಿ ಎಂದಿರಿ. ಆದರೆ ವರದಿಯಲ್ಲಿ ಆತ್ಮಹತ್ಯೆ ಎಂದು ಬಂತು ಎಂದರು. ಈ ವೇಳೆ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶ ಮಾಡಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕೊಲೆ ಮಾಡಿಸಿದ್ದು ನೀವೇ, ನಿಮ್ಮ ಪಕ್ಷದ ಪ್ರೇರಿತ ಕೊಲೆ ಎಂದು ಹರಿಪ್ರಸಾದ್ ಆಪಾದಿಸಿದರು. ಇದಕ್ಕೆ ಪ್ರತಿಯಾಗಿ 13 ಕಾರ್ಯಕರ್ತರ ಕೊಲೆ ವೇಳೆ ಏಕೆ ಸುಮ್ಮನಿದ್ದಿರಿ ಎಂದು ಕೋಟಾ ಪ್ರಶ್ನಿಸಿದರು.

ಆಡಳಿತ ಪಕ್ಷ ಸದಸ್ಯರ ಮಧ್ಯಪ್ರವೇಶಕ್ಕೆ ಹರಿಪ್ರಸಾದ್ ಆಕ್ಷೇಪಿಸಿದರು. ನನ್ನ ಮಾತಿಗೆ ಅಡ್ಡಿ ಪಡಿಸಲಾಗುತ್ತದೆ. ರಕ್ಷಣೆ ನೀಡದಿದ್ದಲ್ಲಿ ಬಾವಿಗಿಳಿಯಬೇಕಾಗಲಿದೆ ಎಂದರು. ನಂತರ ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಪ್ರಾಣೇಶ್ ಪರಿಸ್ಥಿತಿ ಸಹಜ ಸ್ಥಿತಿಗೆ ತಂದರು.

ಇದನ್ನೂ ಓದಿ :ಚುನಾವಣೆ ಗೆಲ್ಲಲು ಚಾಣಕ್ಯ ತಂತ್ರದಂತೆ ಎಲ್ಲ ಬ್ರಹ್ಮಾಸ್ತ್ರ ಬಳಕೆ: ಬಿ ವೈ ವಿಜಯೇಂದ್ರ

ABOUT THE AUTHOR

...view details