ಕರ್ನಾಟಕ

karnataka

ದೇವದುರ್ಗ ಕ್ಷೇತ್ರದಲ್ಲಿ ಭಯದ ವಾತಾವರಣ, ನನಗೂ ಕೂಡ ಜೀವಭಯವಿದೆ: ಸದನದಲ್ಲೇ ಜೆಡಿಎಸ್ ಶಾಸಕಿ ಕರೆಮ್ಮ ಆತಂಕ

By

Published : Jul 13, 2023, 7:31 PM IST

Updated : Jul 13, 2023, 11:03 PM IST

''ದೇವದುರ್ಗ ಕ್ಷೇತ್ರದಲ್ಲಿ ಭಯದ ವಾತಾವರಣ, ನನಗೂ ಕೂಡ ಜೀವಭಯವಿದೆ'' ಎಂದು ಜೆಡಿಎಸ್ ಶಾಸಕಿ ಕರೆಮ್ಮ ಆತಂಕ ವ್ಯಕ್ತಪಡಿಸಿದರು.

MLA Karemma
ಜೆಡಿಎಸ್ ಶಾಸಕಿ ಕರೆಮ್ಮ

ಜೆಡಿಎಸ್ ಶಾಸಕಿ ಕರೆಮ್ಮ ಮಾತನಾಡಿದರು.

ಬೆಂಗಳೂರು:''ಮಾಜಿ ಶಾಸಕರ ಬೆಂಬಲಿಗರಿಂದ ದೇವದುರ್ಗ ಕ್ಷೇತ್ರದಲ್ಲಿ ಭಯದ ವಾತಾವರಣ ಇದ್ದು, ನೆಮ್ಮದಿಯ ವಾತಾವರಣ ಕಳೆದುಹೋಗಿದೆ. ನನಗೂ ಕೂಡ ಜೀವ ಭಯವಿದೆ'' ಎಂದು ಆ ಕ್ಷೇತ್ರದ ಜೆಡಿಎಸ್​ ಶಾಸಕಿ ಕರೆಮ್ಮ ವಿಧಾನಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡಿದ ಅವರು, ''ನಾನು ಶಾಸಕಯಾಗಿ ಮೊದಲ ಬಾರಿ ಮಾತನಾಡುತ್ತಿದ್ದೇನೆ. ಅದಕ್ಕೆ ಇನ್ನೂ ಸಾಕಷ್ಟು ಅನುಭವ ಬೇಕು. ಜೊತೆಗೆ ಅಧ್ಯಯನ ಮಾಡಬೇಕಿದೆ'' ಎಂದರು. ''ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ಕೊಡುತ್ತೇನೆಂದು ಜನ ನನ್ನನ್ನು ಆಯ್ಕೆ ಮಾಡಿಲ್ಲ. ನೆಮ್ಮದಿಯ ವಾತಾವರಣಕ್ಕಾಗಿ ಗೆಲ್ಲಿಸಿದ್ದಾರೆ. ಬಡವಿ ಆದ ನನಗೆ ಉಡಿ ತುಂಬಿ ಚುನಾವಣೆಯ ಖರ್ಚಿಗೆ ಹಣ ಕೊಟ್ಟು ಆರಿಸಿದ್ದಾರೆ. ಅವರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ'' ಎಂದು ಅವರು ತಿಳಿಸಿದರು.

ಆತಂಕ ವ್ಯಕ್ತಪಡಿಸಿದ ಜೆಡಿಎಸ್​ ಶಾಸಕಿ ಕರೆಮ್ಮ:''ದೇವದುರ್ಗದಲ್ಲಿ ಮಟ್ಕಾ, ಇಸ್ಪೀಟು, ಮರಳು ದಂಧೆ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಹಲವಾರು ದಂಧೆಗಳು ನಿರಂತರವಾಗಿ ನಡೆಯುತ್ತಿವೆ. ಮಟ್ಕಾ ಬರೆಯುವವರನ್ನು ಜನರೇ ಹಿಡಿದು ತಂದು ಪೊಲೀಸರಿಗೆ ಒಪ್ಪಿಸಿದರೆ 300 ರೂ. ದಂಡ ವಿಧಿಸಿ ಕಳುಹಿಸಿಕೊಡುತ್ತಿದ್ದಾರೆ. ಮರಳು ದಂಧೆ ಮಾಡುವವರು ನಿನ್ನೆ ನಡುರಸ್ತೆಯಲ್ಲೇ ನನ್ನ ಸಹೋದರನನ್ನು ಹೊಡೆದಿದ್ದಾರೆ. ಶಾಸಕರಾಗಿ ಜನರಿಗೆ ನ್ಯಾಯ ಕೊಡಿಸಬೇಕಾದ ನನಗೇ ಆತಂಕ ಕಾಡುತ್ತಿದೆ. ಹಿಂದಿನ ಶಾಸಕರ ಬೆಂಬಲಿಗರು ಏನು ಮಾಡ್ತಾರೋ ಅನ್ನೋ ಭಯದಲ್ಲಿದ್ದೇವೆ. ನನಗೂ ರಕ್ಷಣೆ ಬೇಕಿದೆ. ನಿನ್ನೆ ವಿಧಾನಸಭೆಯಲ್ಲೇ ನನ್ನ ಸ್ಥಾನದಲ್ಲಿ ಅನಾಮಿಕನೊಬ್ಬ ಬಂದು ಕುಳಿತಿದ್ದು ನೋಡಿದರೆ ಮತ್ತಷ್ಟು ಅನುಮಾನಗಳನ್ನು ಮೂಡಿಸಿದೆ'' ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.

ಅದಕ್ಕೆ ಸ್ಪಷ್ಟನೆ ನೀಡಿದ ಸಭಾಧ್ಯಕ್ಷ ಯು ಟಿ ಖಾದರ್ ಅವರು, ''ಆ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದು ಬೇಡ. ನೀವು ತಡವಾಗಿ ಬಂದ ಕಾರಣಕ್ಕಾಗಿ ಅನಾಮಿಕನೊಬ್ಬ ಬಂದು ನಿಮ್ಮ ಕುರ್ಚಿಯಲ್ಲಿ ಕುಳಿತಿದ್ದಾರೆ'' ಎಂದು ಹೇಳಿದರು.

ಮಾತು ಮುಂದುವರೆಸಿದ ಕರೆಮ್ಮ ಅವರು, ನಮ್ಮನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಲಾರಿ ಹತ್ತಿಸುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ. ಆದರೆ, ಇದಕ್ಕೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಮರಳು ದಂಧೆಯನ್ನು ಪರಿಶೀಲನೆ ಮಾಡಿದ್ದೇನೆ ಎಂದು ಕರೆಮ್ಮ ವಿವರಿಸಿದರು. ಶಾಸಕಿ ಕರೆಮ್ಮ ಅವರು ಮೊದಲ ಬಾರಿಯ ಭಾಷಣದಲ್ಲೇ ಸುಲಲಿತವಾಗಿ ಮಾತನಾಡಿದ್ದನ್ನು ಸಭಾಧ್ಯಕ್ಷರು ಶ್ಲಾಘಿಸಿದರು.

ಇದನ್ನೂ ಓದಿ:ನಾಗವಾರ ಭೂ ಸ್ವಾದೀನ ಅಕ್ರಮ ಪ್ರಕರಣದ ತನಿಖೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್

Last Updated : Jul 13, 2023, 11:03 PM IST

ABOUT THE AUTHOR

...view details