ಕರ್ನಾಟಕ

karnataka

ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ಪುನರ್ ಪರಿಶೀಲನೆ, ಹಿಜಾಬ್​ಗೆ ಅವಕಾಶ ನೀಡಿದರೆ ಹೋರಾಟ: ಅಶ್ವತ್ಥನಾರಾಯಣ್

By

Published : May 25, 2023, 1:51 PM IST

ಕಾಂಗ್ರೆಸ್​ ಪಕ್ಷ ಅಧಿಕಾರ ವಹಿಸಿಕೊಂಡಿದ್ದು ಬಿಜೆಪಿ ಸರ್ಕಾರದ ವೇಳೆ ತರಲಾಗಿದ್ದ ಕಾಯ್ದೆಗಳ ವಿರುದ್ಧ ಪುನರ್ ಪರಿಶೀಲನೆ ಮಾಡಿದರೆ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಅಶ್ವತ್ಥನಾರಾಯಣ್
ಅಶ್ವತ್ಥನಾರಾಯಣ್

ಬೆಂಗಳೂರು: ಬಿಜೆಪಿ ಸರ್ಕಾರದ ವೇಳೆ ತರಲಾಗಿದ್ದ ಕಾಯ್ದೆಗಳ ಪುನರ್ ಪರಿಶೀಲನೆ, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸುವ ಕಾಂಗ್ರೆಸ್ ಸರ್ಕಾರದ ನಿಲುವಿನ ವಿರುದ್ಧ ಬಿಜೆಪಿ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸಲಿದೆ ಎಂದು ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ಪಠ್ಯಪುಸ್ತಕ ಪುನರ್ ಪರಿಶೀಲನೆ ಮಾಡುವ ಕುರಿತು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಹಿಜಾಬ್ ಕುರಿತು ಕಾಂಗ್ರೆಸ್​ನಲ್ಲಿ ಮಾತನಾಡುತ್ತಿದ್ದಾರೆ ಮೊದಲು ಕಾಂಗ್ರೆಸ್​ನವರು ತುಷ್ಟೀಕರಣ ರಾಜಕಾರಣವನ್ನು ಕಾಂಗ್ರೆಸ್ ಪಕ್ಷ ಬಿಡಬೇಕು.

ಸಮಾನತೆಯ ಬಗ್ಗೆ ತರಲಾದ ಕಾನೂನು ಸಮವಸ್ತ್ರದ ಬಗ್ಗೆ ಹೇಳಿದೆ, ಅದರ ಪ್ರಕಾರ ಶಾಲಾ ಕಾಲೇಜುಗಳಲ್ಲಿ ಏಕರೂಪ ವಸ್ತ್ರ ಸಂಹಿತೆ ಜಾರಿಯಲ್ಲಿದೆ, ಯಾವುದೇ ಭೇದಭಾವವಿಲ್ಲದೆ ಎಲ್ಲ ಮಕ್ಕಳು ಒಂದೇ ಎನ್ನುವ ಸಂದೇಶ ಸಾರುವ ಸಮವಸ್ತ್ರ ನಿಯಮ ತರಲಾಗಿದೆ ಇದರ ಪ್ರಕಾರ ಹಿಜಾಬ್ ಕಾಲೇಜಿನಲ್ಲಿ ಇರಬಾರದು ಅನ್ನೋ ಕಾನೂನಿದೆ. ಇದು ಯಾವುದೇ ಒಂದು ಸಮುದಾಯದ ಬಗ್ಗೆ ಇಟ್ಟುಕೊಂಡು ತಂದಿರುವ ಕಾನೂನಲ್ಲ. ಎಲ್ಲರಿಗೂ ಅನ್ವಯ ಆಗುವಂತೆ ಕಾನೂನು ಮಾಡಲಾಗಿದೆ. ಅದನ್ನ ಮತ್ತೆ ಕೆದಕುವ ಕೆಲಸ ಮಾಡಬಾರದು.

ಬಿಜೆಪಿ ವಿರುದ್ಧದ ದ್ವೇಷಕ್ಕಾಗಿ ಶಾಲಾ ಕಾಲೇಜುಗಳಲ್ಲಿನ ಸಮಾನತೆಗೆ ಧಕ್ಕೆ ತರಬಾರದು ಒಂದು ವೇಳೆ ಸರ್ಕಾರ ಹಿಜಾಬ್​ಗೆ ಶಾಲಾ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸಲು ಮುಂದಾದಲ್ಲಿ ಇದನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಡುವ ಕೆಲಸ ಮಾಡಲಿದ್ದೇವೆ. ನಮ್ಮ ಸರ್ಕಾರದ ಅವಧಿಯ ತಂದ ಹಲವು ಕಾಯ್ದೆಗಳ ಪುನರ್ ಪರಿಶೀಲನೆ ಮಾಡುವ ಹೇಳಿಕೆ ನೀಡಿದ್ದಾರೆ ಇದರ ವಿರುದ್ಧ ಕೂಡ ನಮ್ಮ ಹೋರಾಟ ಇರಲಿದೆ ಎಂದರು.

ಉಚಿತ ಕೊಡುಗೆಗಾಗಿ ಜನಸಾಮಾನ್ಯರ ಗಲಭೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ್, ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರು ಎಲ್ಲಾ ಫ್ರೀ ಅಂತ ಹೇಳಿಕೆ ಕೊಟ್ಟಿದ್ದಾರೆ. ಒಂದು ಕ್ಷಣವೂ ತಡ ಮಾಡಲ್ಲ. ಅಧಿಕಾರಕ್ಕೆ ಬಂದ ತಕ್ಷಣವೇ ಕಾರ್ಯರೂಪಕ್ಕೆ ತರುತ್ತೇವೆ ಅಂತ ಹೇಳಿದ್ದರು. ಮೊದಲ ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿಗಳ ಜಾರಿ ಮಾಡುವ ಕುರಿತು ತಾತ್ಕಾಲಿಕ ಒಪ್ಪಿಗೆ ನೀಡಿದ್ದರು. ಹಾಗಾಗಿ ಜನ ಈಗ ನಾವು ವಿದ್ಯುತ್ ಬಿಲ್ ಕಟ್ಟಲ್ಲ ಎನ್ನುತ್ತಿದ್ದಾರೆ. ಕೆಎಸ್ಆರ್‌ಟಿಸಿ ಬಸ್​ಗಳಲ್ಲಿ ಮಹಿಳೆಯರು ಟಿಕೆಟ್ ತಗೋಳಲ್ಲ ಅಂತಿದ್ದಾರೆ. ಅವರು ಹೇಳಿದ್ದನ್ನೇ ಜನ ಮಾಡುತ್ತಿದ್ದಾರೆ. ಇದರಲ್ಲಿ ತಪ್ಪೇನಿಲ್ಲ, ಸರ್ಕಾರ ಕೂಡಲೇ ಗ್ಯಾರಂಟಿಗಳ ಜಾರಿ ಮಾಡಿ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ವಿಪಕ್ಷ ನಾಯಕ ಆಯ್ಕೆ ವಿಚಾರ ಕುರಿತು ಮಾತನಾಡಿದ ಅಶ್ವತ್ಥನಾರಾಯಣ್ ಅವರು, ಈಗಷ್ಟೇ ಕಾಂಗ್ರೆಸ್ ಸರ್ಕಾರ ರಚನೆ ಆಗಿದೆ. ಸಿಎಂ‌ ಈಗ ಆಯ್ಕೆ ಆಗಿದ್ದಾರೆ. ಪ್ರಮಾಣ ವಚನ ಸ್ವೀಕಾರ ಮಾಡಲು ಸದನ ಕರೆಯಲಾಗಿತ್ತು. ನಮ್ಮ ಪಕ್ಷದಿಂದಲೂ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ ಎಂದರು. ನೀವು ವಿಪಕ್ಷ ನಾಯಕ ಆಗ್ತೀರಾ ಅನ್ನೋ ವಿಚಾರಕ್ಕೆ ಖಂಡಿತ ಪಕ್ಷದಲ್ಲಿ ಯಾವ ಜವಾಬ್ದಾರಿ ಕೊಡ್ತಾರೋ ಅದನ್ನು ನಿರ್ವಹಿಸಲು ನಮ್ಮಲ್ಲಿ ಎಲ್ಲರೂ ಸಿದ್ಧರಿದ್ದಾರೆ. ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಸಿದ್ದು, ಡಿಕೆಶಿ ದ್ವೇಷದ ರಾಜಕಾರಣಕ್ಕೆ ಹೆದರಲ್ಲ, ಹೋರಾಡುವ ಶಕ್ತಿ ಭಗವಂತ ನಮಗೂ ಕೊಟ್ಟಿದ್ದಾನೆ: ಅಶ್ವತ್ಥನಾರಾಯಣ್

ABOUT THE AUTHOR

...view details