ಕರ್ನಾಟಕ

karnataka

ದೂರು ನೀಡಲು ಬಂದ ಮಹಿಳೆಯನ್ನೇ ಮಂಚಕ್ಕೆ ಕರೆದ್ರಾ ಇನ್‌ಸ್ಪೆಕ್ಟರ್? ಡಿಸಿಪಿಗೆ ತನಿಖಾ ವರದಿ ಸಲ್ಲಿಕೆ

By

Published : Mar 21, 2023, 7:03 AM IST

Updated : Mar 21, 2023, 8:55 AM IST

ದೂರು ನೀಡಲು ಠಾಣೆಗೆ ಬಂದ ಮಹಿಳೆಯನ್ನೇ ಮಂಚಕ್ಕೆ ಕರೆದಿರುವ ಗಂಭೀರ ಆರೋಪವನ್ನು ಬೆಂಗಳೂರಿನ ಪೊಲೀಸ್ ಠಾಣೆಯೊಂದರ ಇನ್ಸ್​​ಪೆಕ್ಟರ್​ ಎದುರಿಸುತ್ತಿದ್ದಾರೆ.

allegation-of-harrassment-from-young-women-against-inspector
ದೂರು ನೀಡಲು ಬಂದ ಸಂತ್ರಸ್ಥೆಯನ್ನೇ ಮಂಚಕ್ಕೆ ಕರೆದ್ರಾ ಇನ್‌ ಸ್ಪೆಕ್ಟರ್ ? ಡಿಸಿಪಿಗೆ ವರದಿ ನೀಡಿದ ಎಸಿಪಿ

ಬೆಂಗಳೂರು: ದೂರು ನೀಡಲು ಬಂದ‌ ಮಹಿಳೆಯನ್ನು ಲೈಂಗಿಕ ಕ್ರಿಯೆಗೆ ಕರೆದಿರುವ ಗಂಭೀರ ಆರೋಪ ನಗರದ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ‌ ಸಂತ್ರಸ್ತೆ ಈಶಾನ್ಯ ವಿಭಾಗದ ಡಿಸಿಪಿಗೆ‌ ದೂರು ನೀಡಿದ್ದರು. ಡಿಸಿಪಿ ಸೂಚನೆಯ ಮೇರೆಗೆ ಯಲಹಂಕ ಉಪವಿಭಾಗದ ಎಸಿಪಿ ಇದೀಗ ತನಿಖೆ ನಡೆಸಿ ವಿಸ್ತೃತ ವರದಿ ಸಲ್ಲಿಸಿದ್ದಾರೆ.

ಮಹಿಳೆ ನೀಡಿದ ದೂರಿನ ವಿವರ:ವೀರೇಂದ್ರ ಬಾಬು ಎಂಬುವರು ನನ್ನಿಂದ 15 ಲಕ್ಷ ರೂ ಹಣ‌ ಪಡೆದುಕೊಂಡು ವಂಚಿಸಿರುವುದಾಗಿ ಆಪಾದಿಸಿ ಕಳೆ‌ದ‌ ತಿಂಗಳು ಠಾಣೆಗೆ ಬಂದಿದ್ದ ಮಹಿಳೆ ದೂರು ನೀಡಿದ್ದರು.‌ ಈ ದೂರು ಸ್ವೀಕರಿಸಿದ್ದ ಇನ್‌ಸ್ಪೆಕ್ಟರ್ ಸಂತ್ರಸ್ತೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದರು. ಕೆಲವು ದಿನಗಳ ಬಳಿಕ ಚಾಟ್ ಮಾಡಲು ಶುರು ಮಾಡಿದ್ದಾರೆ. ಒಂದು ದಿನ ಠಾಣೆಗೆ ಕರೆಯಿಸಿ ಒಂದು ಕವರ್‌ನಲ್ಲಿ ರೂಂ ಕೀ ಹಾಗೂ ಡ್ರೈಫ್ರೂಟ್ಸ್​​ ಇಟ್ಟು ಪರೋಕ್ಷವಾಗಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಆಹ್ವಾನಿಸಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಅವರಿಗೆ ನೀಡಿದ ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

ಪ್ರಕರಣದ ತನಿಖೆ‌ ನಡೆಸುವಂತೆ ಯಲಹಂಕ ಉಪವಿಭಾಗದ ಎಸಿಪಿಗೆ ಅವರು ಸೂಚಿಸಿದ್ದರು. ತನಿಖೆ ಆರಂಭಿಸಿದ ಎಸಿಪಿ ಠಾಣೆಯ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಠಾಣೆಯ ಕೆಲ‌ವು ಪೊಲೀಸ್ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿ‌ ಸೋಮವಾರ ಡಿಸಿಪಿಗೆ ವರದಿ ನೀಡಿದ್ದಾರೆ. ಆರೋಪ ಸಾಬೀತಾದರೆ ಇನ್‌ಸ್ಪೆಕ್ಟರ್ ಅಮಾನತು ಆಗುವ ಸಾಧ್ಯತೆ ಇದೆ ಎಂದು‌ ಪೊಲೀಸ್ ಅಧಿಕಾರಿ ಹೇಳಿದರು.

ಇತರೆ ಅಪರಾಧ ಸುದ್ದಿಗಳು:ಮೃತ ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಲು ಯತ್ನಿಸಿದ ಆರೋಪದಡಿ ಖಾಸಗಿ ಕಂಪನಿ ಮಾಲೀಕರು ಹಾಗೂ ಅವರ ಪುತ್ರನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕೆ.ಕೆ.ಮೊಟ್ವಾನಿ ಕಂಪನಿ ಹಾಗೂ ಪುತ್ರ ದೀಪಕ್ ಕೆ.ಮೊಟ್ವಾನಿ ವಿರುದ್ಧ ವಂಚನೆ, ಒಳಸಂಚು ಆರೋಪದಡಿ ಪ್ರಕರಣ ದಾಖಲಾಗಿದೆ. ವಂಚನೆಗೊಳಗಾದ 85 ವರ್ಷದ ಫಾರೂಕ್ ಸುಲೇಮಾನ್ ಎಂಬುವರು ದೂರು ದಾಖಲಿಸಿದ್ದಾರೆ.

ನಗರದ ಬಿಗ್ರೇಡ್ ರೋಡ್‌ನಲ್ಲಿರುವ ಫಾರೂಕ್ ಸುಲೇಮಾನ್ ಅವರ ಕುಟುಂಬ ಒಡೆತನದಲ್ಲಿರುವ 36,500 ಚದರ ಅಡಿ ಜಾಗವಿರುವ ವಾಣಿಜ್ಯ ಸಂಕೀರ್ಣ ಜಾಗವನ್ನು ತಮ್ಮದೆಂದು ನಕಲಿ ದಾಖಲಾತಿ ಸೃಷ್ಟಿಸಿ, ದೊಮ್ಮಲೂರಿನಲ್ಲಿರುವ ರಿಜಿಸ್ಟಾರ್ ಕಚೇರಿಯಲ್ಲಿ ಆಸ್ತಿ ಕಬಳಿಸಲು ಯತ್ನಿಸಿದ್ದಾರೆ‌. ದೂರುದಾರರ ತಂದೆ ಸುಲೇಮಾನ್ ಹಾಜಿ‌ ಇಬ್ರಾಹಿಂ ಹೆಸರಿನಲ್ಲಿದ್ದ ಜಾಗವನ್ನು ಉತ್ತರಾಧಿಕಾರಿಯಾಗಿದ್ದ ಫಾರೂಕ್ ಸುಲೇಮಾನ್ 1987ರಲ್ಲಿ ಮೊಟ್ವಾನಿ ಅವರೊಂದಿಗೆ ಕಟ್ಟಡ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಸುಲೇಮಾನ್ ತಿಳಿಸಿದ್ದಾರೆ.

ಪೊಲೀಸ್​ ಕಾನ್ಸ್‌ಟೇಬಲ್‌ ಮೃತದೇಹ ಪತ್ತೆ: ಪೊಲೀಸ್ ಕಾನ್ಸ್‌ಟೇಬಲ್‌ವೊಬ್ಬರ ಮೃತದೇಹ ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಗಿದೆ. ಮೃತರನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ತೆಗ್ಗಳ್ಳಿ ಗ್ರಾಮದ ಕರಿಯಪ್ಪ (37) ಎಂದು ಗುರುತಿಸಲಾಗಿದೆ. ಮೃತರು ವಾಡಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ತಡರಾತ್ರಿ ಘಟನೆ ನಡೆದಿದೆ. ಕರಿಯಪ್ಪ ತೆರಳುತ್ತಿದ್ದ ಬೈಕ್ ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ:ಅಕ್ರಮ ಸಂಬಂಧ ಮುಚ್ಚಿಡಲು ಬಾಲಕಿ ಹತ್ಯೆ: ಮೂವರು ಆರೋಪಿಗಳ ಬಂಧನ

Last Updated : Mar 21, 2023, 8:55 AM IST

ABOUT THE AUTHOR

...view details