ಕರ್ನಾಟಕ

karnataka

ಅಗ್ರಿ ಸ್ಟಾರ್ಟಪ್​ಗಳಿಂದ 4.5 ಬಿಲಿಯನ್ ಡಾಲರ್ ಮಾರುಕಟ್ಟೆ ಸೃಷ್ಟಿ: ಕೃಷಿ ಸಚಿವ ಪಾಟೀಲ

By

Published : Aug 21, 2020, 4:51 PM IST

ಬೆಂಗಳೂರಿನಲ್ಲಿ ನಡೆದ ಕೃಷಿ ನವೋದ್ಯಮ ಸಮ್ಮೇಳನವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಉದ್ಘಾಟಿಸಿದರು. 2014ರಿಂದ ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟ​ಪ್​ನ ಪ್ರಯೋಜನ ಹಾಗೂ ಲಾಭಗಳನ್ನು ವಿವರಿಸಿದರು.

Agricultural Crisis relief with New Agricultural Technology
ಕೃಷಿ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು : ಹೊಸ ಕೃಷಿ ತಂತ್ರಜ್ಞಾನ ರೈತರ ಸಮಸ್ಯೆಗಳನ್ನು ಪರಿಹರಿಸಬಲ್ಲದು ಹಾಗೂ ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ಅವಕಾಶವನ್ನು ಸೃಷ್ಟಿಸಬಲ್ಲದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅಭಿಪ್ರಾಯಪಟ್ಟರು.

ಕೃಷಿ ಸಚಿವ ಬಿ.ಸಿ.ಪಾಟೀಲ್

ಇಲ್ಲಿನ ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ “ಕೃಷಿ ನವೋದ್ಯಮ” (ಅಗ್ರಿ ಸ್ಟಾರ್ಟಪ್) ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಕೇಂದ್ರ ಸರ್ಕಾರವನ್ನು ಮುನ್ನಡೆಸುತ್ತಿದ್ದು, ಮೋದಿಯವರಿಂದಾಗಿ ದೇಶದಲ್ಲಿ ಸ್ಟಾರ್ಟಪ್​ಗಳ ಯುಗ ಆರಂಭವಾಯಿತು. 2018ರ ಹೊತ್ತಿಗೆ ದೇಶದಲ್ಲಿ 50 ಸಾವಿರ ನವೋದ್ಯಮಗಳು ಹಾಗೂ 9,300 ಸ್ಟಾರ್ಟಪ್​ಗಳು ಪ್ರಾರಂಭವಾಗಿವೆ ಎಂದರು.

ಇವುಗಳ ಪೈಕಿ 474 ಕೃಷಿ ಉದ್ಯಮಗಳಿವೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೃಷಿ ಕ್ಷೇತ್ರಕ್ಕೆ ನವಚೈತನ್ಯವನ್ನು ಒದಗಿಸಲು ಕೃಷಿ ಸ್ಟಾರ್ಟಪ್​ಗಳನ್ನು ಆರಂಭಿಸಿ ರೈತರು ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವೇದಿಕೆ ಸೃಷ್ಟಿಸಲಾಗಿದೆ ಎಂದು ಹೇಳಿದರು.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 4 ಸಾವಿರ ಸ್ಟಾರ್ಟಪ್​ಗಳನ್ನು ಆರಂಭಿಸಲಾಗುತ್ತಿದೆ. ದೇಶದ ಎಲ್ಲ ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಆರಂಭಿಕ ನೀತಿಗಳನ್ನು ಹೊರ ತಂದಿವೆ. ಇದರಿಂದಾಗಿ ವಾರ್ಷಿಕವಾಗಿ 4 ಸಾವಿರ ನವೋದ್ಯಮ ಸೃಷ್ಟಿಸಲು ಅನುಕೂಲವಾಗಿದೆ. ಸ್ಟಾರ್ಟಪ್​ಗಳು ಯುವಕರಿಗೆ 1.7 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ತಿಳಿಸಿದರು.

ಮಾರುಕಟ್ಟೆ ಸೃಷ್ಟಿ: ಭಾರತದಲ್ಲಿ ಕೃಷಿ ನವೋದ್ಯಮ ಪ್ರಾರಂಭದ ಹಂತದಲ್ಲಿಯೇ ಆಕರ್ಷಿತವಾಗಿರುವುದು ಹೆಮ್ಮೆಯ ವಿಚಾರ. ಅಂಕಿಅಂಶಗಳ ಪ್ರಕಾರ ಪ್ರತಿದಿನ 2 ರಿಂದ 3 ಸ್ಟಾರ್ಟ್​ಪ್​ಗಳು ಭಾರತದಲ್ಲಿ ಸ್ಥಾಪನೆಯಾಗುತ್ತಿವೆ. ಅಕ್ಸೆಂಚರ್ ಕಂಪನಿಯು ಮಾಡಿದ ಸಮೀಕ್ಷೆಯ ಪ್ರಕಾರ, ನಮ್ಮ ದೇಶದಲ್ಲಿ ಅಗ್ರಿ ಸ್ಟಾರ್ಟ್​ಪ್‌ಗಳಿಂದ 4.5 ಬಿಲಿಯನ್ ಡಾಲರ್ ಮಾರುಕಟ್ಟೆಯ ಸೃಷ್ಟಿ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.

ಸ್ಟಾರ್ಟಪ್ ವ್ಯವಸ್ಥೆಗಳನ್ನು ಹೊಂದಿರುವ ವಿಶ್ವದ 20 ಅಗ್ರ ನಗರಗಳ ಪೈಕಿ ಬೆಂಗಳೂರು 15 ನೇ ಸ್ಥಾನವನ್ನು ಪಡೆದಿದೆ. ಅಲ್ಲದೇ ಏಷ್ಯಾ ಖಂಡದಲ್ಲಿ ಸಿಂಗಾಪೂರ್ ಬಳಿಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವೆಂದು ಸಹ ಬೆಂಗಳೂರು ಗುರುತಿಸಲ್ಪಟ್ಟಿದೆ. ಕರ್ನಾಟಕ ರಾಜ್ಯ ಜೈವಿಕ ಹಾಗೂ ಸಿರಿಧಾನ್ಯಗಳ ಹಬ್ ಎಂದು ಕರೆಯಲ್ಪಟ್ಟಿದೆ ಎಂದು ಹೇಳಿದರು.

ಬಿಸಿಯೂಟದಲ್ಲಿ ಸಿರಿಧಾನ್ಯ: ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯವನ್ನು ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿದ್ದು, ಇದರಿಂದಾಗಿ ಕೃಷಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ. ರಾಜ್ಯದಲ್ಲಿ ಜೇವರ್ಗಿ, ಹಿರಿಯೂರು, ಮಾಲೂರು ಹಾಗೂ ಬಾಗಲಕೋಟೆಯಲ್ಲಿ ಈಗಾಗಲೇ ಮೆಗಾಫುಡ್ ಪಾರ್ಕ್​ಗಳಿದ್ದು, ಕೇಂದ್ರ ಸರ್ಕಾರದಡಿ ಕೆ.ಆರ್. ಪೇಟೆ ಹಾಗೂ ತುಮಕೂರಿನಲ್ಲಿಯೂ ಮೆಗಾಫುಡ್ ಪಾರ್ಕ್ ಆರಂಭಿಸಲಾಗಿದೆ. ಆ ಮೂಲಕ ಕೃಷಿ ಉತ್ಪಾದನಾ, ಆಹಾರ ಉತ್ಪಾದನಾ ಕ್ಷೇತ್ರಗಳಿಗೆ ರಾಜ್ಯದಲ್ಲಿ ಆದ್ಯತೆ ಕಲ್ಪಿಸಲಾಗಿದೆ ಎಂದರು.

ಕೋಲ್ಡ್​ ಸ್ಟೋರೇಜ್​ ಆರಂಭ:ಆತ್ಮ ನಿರ್ಭರ್ ಯೋಜನೆಯಡಿ ಆಹಾರ ಉತ್ಪಾದನಾ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ವೆಬಿನಾರ್​ನಲ್ಲಿ ಸಚಿವರು ಮಾಹಿತಿ ಹಂಚಿಕೊಂಡರು. ಕೃಷಿ ನವೋದ್ಯಮದಲ್ಲಿ ಕೃಷಿ ಉತ್ಪಾದನ ಉದ್ಯಮಿಗಳು ದೇಶಾದ್ಯಂತ ಸಕ್ರಿಯವಾಗಿ ಭಾಗವಹಿಸಿರುವುದು ಖುಷಿ ತಂದಿದೆ. ಕೊರೊನಾ ವೈರಸ್‌ನಿಂದಾಗಿ ಬಿಕ್ಕಟ್ಟಿನ ಅವಧಿಯಲ್ಲಿ ರೈತರು ಬೆಳೆದ ತರಕಾರಿ, ಹಣ್ಣು ಸೇರಿದಂತೆ ಕೃಷಿ ಫಸಲುಗಳು ನಾಶವಾಗದಂತೆ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೋಲ್ಡ್ ಸ್ಟೋರೇಜ್​ಗಳನ್ನು ಆರಂಭಿಸಲಾಯಿತು ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲ, ಸಹಕಾರ, ಸೂಚನೆಯಡಿ ಕೃಷಿಕ್ಷೇತ್ರದಲ್ಲಿ ರೈತರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ಹೊಸಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್ ಕತ್ರಿ ಅವರ ಮೇಲ್ವಿಚಾರಣೆಯಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗಗಳು ಉದ್ಯಮಿಗಳಿಗಾಗಿ ಕೃಷಿ ನವೋದ್ಯಮ ವೇದಿಕೆ ಆಯೋಜಿಸಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರ ಎಂದರು.

ಕೃಷಿ ಇಲಾಖೆ ಆಯುಕ್ತ ಬ್ರಿಜೆಷ್ ಕುಮಾರ್ ದೀಕ್ಷಿತ್, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

ಅಗ್ರಿ ಸ್ಟಾರ್ಟಪ್ ಸಮ್ಮೇಳನದಲ್ಲಿಯೂ ಸಚಿವರ ಪುತ್ರಿ, ಅಳಿಯ ಹಾಜರು : ಕೃಷಿ ಸಚಿವ ಬಿ.ಸಿ. ಪಾಟೀಲ ಅವರ ಪುತ್ರಿ ಸೃಷ್ಟಿ ಪಾಟೀಲ ಹಾಗೂ ಅಳಿಯ ಭಾಗವಹಿಸಿದ್ದು ಎದ್ದು ಕಾಣುತ್ತಿತ್ತು. ಪ್ರತಿ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ಪುತ್ರಿ ಹಾಜರಾತಿ ಇದ್ದೇ ಇರುತ್ತದೆ. ಇದರ ಹಿಂದಿನ ಮರ್ಮ ಮಾತ್ರ ನಿಗೂಢ.

ABOUT THE AUTHOR

...view details