ಕರ್ನಾಟಕ

karnataka

Bitcoin scam: ಬಿಟ್ ಕಾಯಿನ್ ಹಗರಣ: ತನಿಖೆಗೆ ಎಡಿಜಿಪಿ ಮನೀಶ್ ಕರ್ಬಿಕರ್ ನೇತೃತ್ವದ ಎಸ್ಐಟಿ ತಂಡ ರಚನೆ

By

Published : Jul 3, 2023, 3:59 PM IST

Updated : Jul 3, 2023, 4:15 PM IST

ಬಿಟ್ ಕಾಯಿನ್ ಹಗರಣದ ತನಿಖೆಗೆ ಎಡಿಜಿಪಿ ಮನೀಷ್ ಕರ್ಬೀಕರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆಯಾಗಿದೆ.

adgp-manish-karbikar-headed-sit-team-formed-to-probe-bitcoin-scam
bitcoin scam:ಬಿಟ್ ಕಾಯಿನ್ ಹಗರಣದ ತನಿಖೆಗೆ ಎಡಿಜಿಪಿ ಮನೀಶ್ ಕರ್ಬಿಕರ್ ನೇತೃತ್ವದ ಎಸ್ಐಟಿ ತಂಡ ರಚನೆ

ಬೆಂಗಳೂರು: ಇಡೀ ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ. ಸರ್ಕಾರ ಮೊದಲೇ ತಿಳಿಸಿದಂತೆ ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ಎಸ್ಐಟಿ (ವಿಶೇಷ ತನಿಖಾ ತಂಡ)ವನ್ನ ರಚನೆ ಮಾಡಿದೆ. ಅದರ ಮುಖ್ಯಸ್ಥರನ್ನನಾಗಿ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ತಂಡದಲ್ಲಿ ಡಿಐಜಿ ವಂಶಿಕೃಷ್ಣ, ಡಿಸಿಪಿ ಅನೂಪ್ ಶೆಟ್ಟಿ, ಎಸ್​ಪಿ ಶರತ್ ಸಹ ಇರಲಿದ್ದಾರೆ.

ತಂಡ ರಚನೆಯಾಗುತ್ತಿದ್ದಂತೆ ಸಿಐಡಿಯಲ್ಲಿ ಎಸ್ಐಟಿ ಅಧಿಕಾರಿಗಳ ಜೊತೆ ಸಿಐಡಿ ಡಿಜಿ ಎಂ. ಎ. ಸಲೀಂ ಸಭೆ ನಡೆಸಿದ್ದಾರೆ. ತನಿಖೆಯ ರೂಪುರೇಷಗಳ ಬಗ್ಗೆ ಚರ್ಚೆ ನಡೆಸಿದ್ದು, ಫೈಲ್ ವರ್ಗಾವಣೆ, ಕೆಳಹಂತದಿಂದ ಯಾವೆಲ್ಲ ಅಧಿಕಾರಿಗಳು ತಂಡದಲ್ಲಿ ಇರಬೇಕು ಎಂಬುದರ ಚರ್ಚೆ ಮಾಡಲಾಗಿದೆ. ಈಗಾಗಲೇ ಸಿಸಿಬಿಯಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಮೊದಲು‌ ನ್ಯಾಯಾಲಯದ ಅನುಮತಿ ಪಡೆದು ತನಿಖೆ ಮುಂದುವರೆಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಸಿಸಿಬಿಯಿಂದ ಪ್ರಕರಣದ ಕಡತಗಳ ವರ್ಗಾವಣೆ ಕೋರಿ ಪತ್ರ ಬರೆಯಲು ಎಸ್ಐಟಿ ಮುಂದಾಗಿದ್ದು ಕಡತಗಳು ಕೈಸೇರಿದ ಬಳಿಕ ಎಸ್ಐಟಿ ತನಿಖೆ ಆರಂಭವಾಗಲಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣದ ಕುರಿತು ಕಾಟನ್ ಪೇಟೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ‌ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪ್ರಮುಖ ಆರೋಪಿಯಾಗಿದ್ದ. ಕಳೆದ ಐದಾರು ವರ್ಷಗಳಿಂದ ವಿವಿಧ ಕ್ರಿಪ್ಟೋ ಕರೆನ್ಸಿ ಮಾರಾಟ ಪ್ಲಾಟ್‍ಫಾರ್ಮ್‍ಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಸಾವಿರಾರು ಬಿಟ್ ಕಾಯಿನ್‍ಗಳನ್ನು ಕದ್ದಿದ್ದ ಎಂದು ಪೊಲೀಸರು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದರು.

ಕೆಲವು ಗಂಟೆಗಳ ಹಿಂದೆ ಗೃಹ ಸಚಿವ ಡಾ ಜಿ ಪರಮೇಶ್ವರ್​ ವಿಧಾನಸೌಧದಲ್ಲಿ ಮಾತನಾಡಿ, ಬಿಟ್​ ಕಾಯಿನ್ ಹಗರಣ ತನಿಖೆಗೆ ಎಸ್​ಐಟಿ ರಚನೆಗೆ ಆದೇಶಿಸಿದ್ದು, ಆದಷ್ಟು ಬೇಗ ತನಿಖೆ ಮುಗಿಸಲಿದ್ದಾರೆ ಎಂದು ತಿಳಿಸಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಿಟ್ ಕಾಯಿನ್ ಹಗರಣ ಬಗ್ಗೆ ತನಿಖೆ ನಡೆಸಲು ಸಿಐಡಿ ಅಡಿ ಎಸ್​ಐಟಿ ರಚಿಸಿ ಆದೇಶ ಹೊರಡಿಸಿದ್ದೇವೆ. ಎಸ್​ಐಟಿ ಜೊತೆಗೆ ತಾಂತ್ರಿಕ ತಜ್ಞರ ಸಹಾಯ ಬೇಕಾದರೆ ಉಪಯೋಗ ಮಾಡಬಹುದು. ಅದಕ್ಕೆ ಪೂರಕವಾದ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದಿದ್ದರು.

ಬಿಟ್​ ಕಾಯಿನ್​ ಹಗರಣ ಉನ್ನತ ತನಿಖೆಗೊಳಪಡಿಸುವಂತೆ ಆಗ್ರಹ: ಬಿಟ್ ಕಾಯಿನ್ ಹಗರಣ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೊಳಪಡಿಸುವಂತೆ ರಾಜ್ಯ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್​ ಅವರಿಗೆ ಬೆಂಗಳೂರು ಪೊಲೀಸ್ ಇಲಾಖೆ ಕಳೆದ ವಾರ ಪತ್ರ ಬರೆದಿತ್ತು. ಹಗರಣದ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ವಂಚನೆ ಜಾಲವಿರುವ ಸಂಶಯ ಹಾಗೂ ಪರಿಣಿತ ವಿಧಿ ವಿಧಾನಗಳಿಂದ ಕೃತ್ಯ ಎಸಗಿರುವುದರಿಂದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿತ್ತು.

ಇದನ್ನೂ ಓದಿ:Bitcoin scam: ಬಿಟ್​ ಕಾಯಿನ್ ಹಗರಣ ತನಿಖೆಗೆ ಎಸ್​ಐಟಿ ರಚಿಸಿದ್ದು, ಆದಷ್ಟು ಬೇಗ ತನಿಖೆ ಮುಗಿಸಲಿದ್ದಾರೆ: ಸಚಿವ ಜಿ ಪರಮೇಶ್ವರ್

Last Updated :Jul 3, 2023, 4:15 PM IST

ABOUT THE AUTHOR

...view details