ಕರ್ನಾಟಕ

karnataka

ಕುಡಿಯುವ ನೀರಿಗಾಗಿ ಜೈಲಿಗೆ ಹೋಗಲೂ ರೆಡಿ: ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು

By ETV Bharat Karnataka Team

Published : Sep 20, 2023, 4:26 PM IST

Updated : Sep 20, 2023, 5:28 PM IST

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ದಮನಕಾರಿ ನೀತಿಯನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

Aam Aadmi Party protest
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ

ಬೆಂಗಳೂರು: ನಮ್ಮಲ್ಲಿ ಬರಗಾಲವಿದೆ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಲು ಹೇಗೆ ಸಾಧ್ಯ? ಇದಕ್ಕಾಗಿ ಜೈಲಿಗೆ ಹೋದರೂ ರಾಜ್ಯದ ಹಿತಕ್ಕಾಗಿ ಹೋದಂತಾಗುತ್ತದೆ. ಆದ್ದರಿಂದ ಅಲ್ಲಿಗೆ ಹೋಗಲೂ ರೆಡಿ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ದಮನಕಾರಿ ನೀತಿಯನ್ನು ವಿರೋಧಿಸಿ, ಆಮ್ ಆದ್ಮಿ ಪಕ್ಷದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ವೇಳೆ ಖಾಲಿ ಬಿಂದಿಗೆ, ಖಾಲಿ ಬಕೆಟ್ ಹಿಡಿದು ಪ್ರದರ್ಶಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಆಮ್ ಆದ್ಮಿ ಪಕ್ಷದ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಕಾವೇರಿ ನೀರಿನ ಸಮಸ್ಯೆ ಹಲವು ದಶಕಗಳಿಂದ ಇದೆ. ಈ ಸಮಸ್ಯೆಗೆ ಸರ್ಕಾರದ ಇಚ್ಛಾ ಶಕ್ತಿಯ ಕೊರತೆಯೇ ಕಾರಣವಾಗಿದೆ. ರಾಜ್ಯಕ್ಕೆ ನೀರಿಲ್ಲ, ತಮಿಳುನಾಡಿಗೆ ಬಿಡಲು ಹೇಗೆ ಸಾಧ್ಯ? ತಕ್ಷಣ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲಿ. ಮುಂದೆ ಏನೇ ಬಂದರೂ ಎದುರಿಸಲಿ, ನಾವೂ ಜೊತೆಗೆ ಇರುತ್ತೇವೆ ಎಂದರು.

ತಮಿಳುನಾಡು ಕೆಳಗಿರುವ ರಾಜ್ಯವಾಗಿರುವುದರಿಂದ ಸಹಜವಾಗಿ ಹೆಚ್ಚುವರಿ ನೀರು ಸೇರುತ್ತದೆ. ಸಿಪಿಎಸ್‌ ನೀರು ಅಂದರೆ ಇಂಗಿದ ನೀರು ಕೂಡ ಅಲ್ಲಿಗೆ ಹೋಗುತ್ತದೆ. ಅವರು ಒಂದು ಬೆಳೆಗೆ ಬಳಸುವ ನೀರನ್ನು ನಮ್ಮ ರೈತರು ಮೂರು ಬೆಳೆಗೆ ಬಳಸಬಹುದು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದರೆ ಕುಡಿಯುವ ನೀರಿನ ಸಮಸ್ಯೆಗೆ ಒಂದು ಹಂತದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಕಾವೇರಿ ವಿಚಾರದಲ್ಲಿ ಮೂರೂ ಪಕ್ಷಗಳು ಜನರ ಹಿತವನ್ನು ಮರೆತಂತೆ ವರ್ತಿಸುತ್ತಿವೆ. ಆದ್ದರಿಂದ ಎಲ್ಲರೂ ಹೋರಾಟಕ್ಕೆ ಕೈಜೋಡಿಸಬೇಕಿದೆ. ಸಾಹಿತಿಗಳು, ಚಲನಚಿತ್ರ ನಟರು, ಗಣ್ಯರು, ಬೆಂಗಳೂರು ನಿವಾಸಿಗಳು ಕೂಡ ಕಾವೇರಿ ನೀರಿನ ಹೋರಾಟಕ್ಕೆ ಇಳಿಯಬೇಕಿದೆ. ಕಾವೇರಿ ಇಲ್ಲದಿದ್ದರೆ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಜನ ಈಗಲೇ ಎಚ್ಚೆತ್ತುಕೊಂಡು ಹೋರಾಟಕ್ಕೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಚಂದ್ರು ಸಲಹೆ ನೀಡಿದರು.

ಡಿ ಕೆ ಶಿವಕುಮಾರ್ ನಿದ್ದೆ ಮಾಡುತ್ತಿದ್ದಾರೆ: ಬೆಂಗಳೂರಿಗೆ ನೀರು ಬೇಕು. ಹೀಗಾಗಿ ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಡಿ ಕೆ ಶಿವಕುಮಾರ್ ಇಂದು ಮಲಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಒಪ್ಪಂದ ಮಾಡಿಕೊಂಡಿದ್ದು, ಮತಬ್ಯಾಂಕ್‌ಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕಾಗಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜನರು ದಾಳವಾಗಿ ಬಳಕೆಯಾಗುತ್ತಿದ್ದಾರೆ: ತಮಿಳುನಾಡು ಸರ್ಕಾರದ ರಾಜಕಾರಣಿಗಳು ರೈತರಿಗೆ ನೀರು ಬಿಡಿಸಿಕೊಂಡಿದ್ದಾರೆ.ಆದರೆ, ನಮ್ಮ ರಾಜ್ಯದ ರೈತರಿಗೆ ಇರಲಿ, ಕುಡಿಯುವ ನೀರಿಗೂ ಅಭಾವ ಎದುರಾಗಿದೆ. ತಮಿಳುನಾಡಿನ ರಾಜಕಾರಣಿಗಳನ್ನು ನೋಡಿ ಕಲಿಯಬೇಕು. ಕಾಂಗ್ರೆಸ್‌ನ ಭ್ರಷ್ಟ ರಾಜಕಾರಣಕ್ಕೆ ರಾಜ್ಯದ ಜನರನ್ನು ದಾಳವನ್ನಾಗಿ ಬಳಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಖಾಲಿ ಬಕೆಟ್, ಖಾಲಿ ಬಿಂದಿಗೆ ಅಷ್ಟೇ ಗಟ್ಟಿಯಾಗಿದೆ. ಅದನ್ನು ತಪ್ಪಿಸಲು ಇಂದು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಮೈಸೂರು, ಬೆಂಗಳೂರು ಸಂಸದರು ಧ್ವನಿ ಎತ್ತಲಿ: ಎಎಪಿ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, ಚುನಾವಣೆಗೆ ಮುನ್ನ ಬೆಂಗಳೂರು ನಗರಕ್ಕೆ ಕುಡಿಯುವ ನೀರು, ಮೇಕೆದಾಟು ಯೋಜನೆ ಬೇಕು ಎಂದು ಹೋರಾಟ ಮಾಡಿದ ಡಿ ಕೆ ಶಿವಕುಮಾರ್ ಇಂದು ನೀರಾವರಿ ಸಚಿವರಾಗಿದ್ದಾರೆ. ಬೆಂಗಳೂರು ಉಸ್ತುವಾರಿ ಕೂಡ ಅವರದ್ದೇ ಆಗಿದೆ. ಆದರೆ, ನಮಗೇ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ದೂರಿದರು.

ರಾಜಕೀಯ ಕಾರಣಗಳಿಗಾಗಿ ತಮಿಳುನಾಡಿಗೆ ನೀರು: ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಕೂಡ ರಾಜಕೀಯ ಕಾರಣಗಳಿಗಾಗಿ ತಮಿಳುನಾಡಿಗೆ ನೀರು ಹರಿಸುತ್ತಿವೆ. ಇದರಿಂದ ರಾಜ್ಯಕ್ಕೆ ಹೆಚ್ಚಿನ ನಷ್ಟವಾಗುತ್ತಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರಂತಹವರು ಕೂಡ ಈ ವಿಚಾರದಲ್ಲಿ ಮಾತನಾಡುತ್ತಿಲ್ಲ ಎಂದರು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ, ಮಾಧ್ಯಮ ಉಸ್ತುವಾರಿ ಜಗದೀಶ್ ವಿ ಸದಂ ಮತ್ತು ಅನಿಲ್ ನಾಚಪ್ಪ, ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ರಾವ್, ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ, ಎಎಪಿ ಯುವ ಘಟಕದ ಅಧ್ಯಕ್ಷ ಉಮೇಶ್ ಬಾಬು ಪಿಳ್ಳೇಗೌಡ, ಜಗದೀಶ್ ಚಂದ್ರ, ವಿಶ್ವನಾಥ್, ಮಹಾಲಕ್ಷ್ಮಿ, ಫರೀದ್, ಗುರುಮೂರ್ತಿ ಮತ್ತಿತರ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಿದ್ದರು.

ಇದನ್ನೂಓದಿ:ಕಾವೇರಿ ವಿಚಾರದಲ್ಲಿ ಸರ್ವಪಕ್ಷ ಸಂಸದರ ಬೆಂಬಲ ಸಿಕ್ಕಿದೆ; ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುವ ಭರವಸೆ ಇದೆ: ಡಿ.ಕೆ.ಶಿವಕುಮಾರ್

Last Updated :Sep 20, 2023, 5:28 PM IST

ABOUT THE AUTHOR

...view details