ಯಲಹಂಕ (ಬೆಂಗಳೂರು): ಹೊಂಡಾ ಆಕ್ಟಿವಾ ಸವಾರನೊಬ್ಬ ಯೂಟರ್ನ್ ತೆಗೆದುಕೊಳ್ಳುವಾಗ ಅತೀ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು, ಸ್ಕೂಟರ್ ಅನ್ನು ಕಿಲೋ ಮೀಟರ್ ದೂರ ಎಳೆದುಕೊಂಡು ಹೋಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಯಲಹಂಕದ ಕೋಗಿಲು ಮುಖ್ಯ ರಸ್ತೆಯ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಘಟನೆ ನಡೆದಿದ್ದು, ಭೀಕರ ಅಪಘಾತದಲ್ಲಿ 33 ವರ್ಷದ ಬೆಂಗಳೂರಿನ ಮಂಜುನಾಥ್ ಎಂಬುವರು ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ 22 ರ ರಾತ್ರಿ 12:40 ರ ಸುಮಾರಿಗೆ ಮಂಜುನಾಥ್ ತಮ್ಮ ಹೊಂಡಾ ಆ್ಯಕ್ಟಿವಾ ಸ್ಕೂಟರ್ ಅನ್ನು ಯೂಟರ್ನ್ ತೆಗೆದುಕೊಳ್ಳುತ್ತಿದ್ದರು. ಈ ವೇಳೆ, ಕೋಗಿಲು ಗ್ರಾಮದಿಂದ ಅತಿ ವೇಗವಾಗಿ ಬಂದ ಟೊಯೊಟಾ ಇನೋವಾ ಕಾರು ಚಾಲಕ, ಮಂಜುನಾಥ್ ಅವರ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ, ಬಳಿಕ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಇತರ ಬೈಕ್ಗಳಿಗೂ ಗುದ್ದಿದ್ದಾನೆ.
ಮಂಜುನಾಥ್ ಅವರ ಸ್ಕೂಟರ್ ಅನ್ನು ಕಾರಿನ ಜೊತೆಯಲ್ಲೇ ಕಿ.ಮೀ ದೂರ ಎಳೆದುಕೊಂಡು ಹೋಗಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳುವಂತಿದೆ. ಈ ಕುರಿತು ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಕಾರಿಗೆ ನಾಯಿ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಆರೋಪ: ಸರ್ಕಾರಿ ಆಸ್ಪತ್ರೆ ವೈದ್ಯನ ವಿರುದ್ಧ ಪ್ರಕರಣ