ಕರ್ನಾಟಕ

karnataka

2ಬಿ ಮೀಸಲಾತಿ ರದ್ದು: ರಾಜ್ಯಪಾಲರಿಗೆ ದೂರು ನೀಡಲು ಎಎಪಿ ನಿರ್ಧಾರ

By

Published : Mar 26, 2023, 7:15 PM IST

ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಮೊನ್ನೆ ನಡೆದಿದ್ದು, ಅದರಲ್ಲಿ ಮೀಸಲಾತಿ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರು. ಇದೀಗ ಇದೇ ನಿರ್ಧಾರದ ಕುರಿತು ಆಮ್‌ ಆದ್ಮಿ ಪಾರ್ಟಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫರೀದುದ್ದೀನ್‌ ಷರೀಫ್‌ ಖಂಡಿಸಿದ್ದಾರೆ.

Fariduddin Sharif
ಫರೀದುದ್ದೀನ್‌ ಷರೀಫ್‌

ಬೆಂಗಳೂರು:ಕರ್ನಾಟಕರಾಜ್ಯ ವಿಧಾನಸಭೆಚುನಾವಣೆ ಹತ್ತಿರ ಸಮೀಸುತ್ತಿದ್ದಂತೆ ಪಕ್ಷಗಳ ನಡುವಿನ ವಾರ್​, ಹೊಸ ಹೊಸ ನಿರ್ಧಾರಗಳು, ವಿರೋಧ, ಪ್ರತಿರೋಧ ಸರ್ವೆ ಸಾಮಾನ್ಯ. ಇದೀಗ ಮುಸ್ಲಿಮರಿಗೆ 2ಬಿ ಕೆಟಗರಿಯಲ್ಲಿ ನೀಡಲಾಗುತ್ತಿದ್ದ 4% ಮೀಸಲಾತಿಯನ್ನು ರದ್ದುಪಡಿಸಿದ ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರವನ್ನು ಆಮ್‌ ಆದ್ಮಿ ಪಾರ್ಟಿಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫರೀದುದ್ದೀನ್‌ ಷರೀಫ್‌ ಖಂಡಿಸಿದ್ದಾರೆ. ಮಾಧ್ಯಮ ಹೇಳಿಕೆ ನೀಡಿರುವ ಫರೀದುದ್ದೀನ್‌ ಷರೀಫ್‌, ಮುಸ್ಲಿಮರಿಗಿದ್ದ 2ಬಿ ಮೀಸಲಾತಿಯನ್ನು ಯಾರೂ ಕೂಡ ಪ್ರಶ್ನಿಸಿರಲಿಲ್ಲ. ಇದನ್ನು ರದ್ದು ಪಡಿಸಬೇಕೆಂದು ನ್ಯಾಯಾಲಯದ ಆದೇಶ ಕೂಡ ಇಲ್ಲ.

ಕೋಮುಗಲಭೆ ಸೃಷ್ಟಿಸಲು ಹುನ್ನಾರ ನಡೆಸಿದೆ-ಅಧ್ಯಕ್ಷ ಫರೀದುದ್ದೀನ್‌: ಆದರೂ ರಾಜ್ಯ ಬಿಜೆಪಿ ಸರ್ಕಾರವು ಯಾವುದೇ ಮುನ್ಸೂಚನೇ ನೀಡದೇ, ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಮೀಸಲಾತಿ ರದ್ದು ನಿರ್ಣಯವನ್ನು ಘೋಷಿಸಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮುಸ್ಲಿಮರನ್ನು ಕೆರಳಿಸಿ ಕೋಮುಗಲಭೆ ಸೃಷ್ಟಿಸಲು ಹುನ್ನಾರ ನಡೆಸಿರುವುದು ಕಂಡುಬರುತ್ತಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಅಶಾಂತಿ ಸೃಷ್ಟಿಸಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮೀಸಲಾತಿ ರದ್ದು, ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ: ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಸ್ಲಿಂ ಸಮುದಾಯ ಹಿಂದುಳಿದೆ. ಅಲ್ಪಸಂಖ್ಯಾತ ಸಮುದಾಯವೆಂಬ ಕಾರಣಕ್ಕೆ ಮುಸ್ಲಿಮರ ಮೇಲೆ ಶೋಷಣೆ ಮಾಡುತ್ತಿರುವ ಘಟನೆಗಳನ್ನು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮೀಸಲಾತಿ ರದ್ದು ಪಡಿಸಿರುವುದು ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ. ಮೀಸಲಾತಿ ಪಡೆಯುವುದು ಮುಸ್ಲಿಮರ ಸಾಂವಿಧಾನಿಕ ಹಕ್ಕಾಗಿದ್ದು, ಇಡಬ್ಲ್ಯುಎಸ್‌ ಬದಲು 2ಬಿ ಕೆಟಗರಿಯನ್ನು ಮುಂದುವರಿಸಬೇಕು. ಈ ಕುರಿತು ರಾಜ್ಯಪಾಲರಿಗೂ ದೂರು ನೀಡಿ, ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಲು ನಿರ್ಧರಿಸಿದ್ದೇವೆ ಎಂದು ಫರೀದುದ್ದೀನ್‌ ಷರೀಫ್‌ ಹೇಳಿದ್ದಾರೆ.

ಏನಿದು ಮೀಸಲಾತಿ ಸಮಸ್ಯೆ:ದಿನಾಂಕ 24/03/2023 ರಂದು ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ನಡೆದಿತ್ತು. ಈ ಸಭೆಯಲ್ಲಿ ಮೀಸಲಾತಿ ಕುರಿತು ಚರ್ಚೆ ನಿರ್ಧಾರ ನಡೆದಿದ್ದು, ಕೊನೆಗೆ ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತ್ತು. ಅದೇ ನಿರ್ಧಾರವು ಈಗ ಪಕ್ಷಗಳ ನಡುವೆ ಬಹಳ ಚರ್ಚೆಗೆ ಕಾರಣವಾಗಿದೆ. ಸಭೆಯಲ್ಲಿ 2Bಯಡಿಯಲ್ಲಿದ್ದ ಮುಸ್ಲಿಂ ಸಮುದಾಯದವರ ಶೇಕಡ 4% ಮೀಸಲಾತಿಯನ್ನು 2C ಪ್ರವರ್ಗದ ಒಕ್ಕಲಿಗರಿಗೆ ಹಾಗೂ 2D ಪ್ರವರ್ಗದ ವೀರಶೈವ ಲಿಂಗಾಯುತರಿಗೆ ತಲಾ ಶೇಕಡ 2%ರಂತೆ ಹಂಚಿಕೆ ಮಾಡಿದ್ದರು.

ಇದರಿಂದ ಒಕ್ಕಲಿಗರಿಗೆ ಮೊದಲಿದ್ದ 4% ಮೀಸಲಾತಿಗೆ 2% ಸೇರ್ಪಡೆಗೊಂಡು 6% ಏರಿಕೆಯಾಗಿದೆ. ಹಾಗೇ ವೀರಶೈವ ಲಿಂಗಾಯತರಿಗೆ 2Dಯಲ್ಲಿ ಮೊದಲಿದ್ದ 5% ಮೀಸಲಾತಿಗೆ 2% ಸೇರ್ಪಡೆಯಾಗಿ ಒಟ್ಟು 7% ಮೀಸಲಾತಿ ದೊರೆಯಿತು. ಆದರೆ 2Bಯಡಿಯಲ್ಲಿದ್ದ 4% ಮುಸ್ಲಿಂ ಮೀಸಲಾತಿಗೆ ಸರ್ಕಾರ ಕತ್ತರಿ ಹಾಕಿದ್ದು ಮುಸ್ಲಿಂ ಸಮುದಾಯದವರನ್ನು EWS 10% ಮೀಸಲಾತಿಗೆ ವರ್ಗಾಯಿಸಲು​ ನಿರ್ಧಾರ ಮಾಡಿತ್ತು.

ಇದನ್ನೂ ಓದಿ:ಮೀಸಲಾತಿ ವಿಚಾರ.. ಡಿಕೆಶಿ ಹೇಳಿಕೆಗೆ ಖಡಕ್​ ಉತ್ತರ ಕೊಟ್ಟ ಯತ್ನಾಳ್​

ABOUT THE AUTHOR

...view details