ಕರ್ನಾಟಕ

karnataka

ಹಿರಿಯ ನಟಿ ಲೀಲಾವತಿ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ; ಆಸ್ಪತ್ರೆಯ ಖರ್ಚು ಭರಿಸುವ ಭರವಸೆ

By ETV Bharat Karnataka Team

Published : Dec 3, 2023, 7:16 PM IST

ಹಿರಿಯ ನಟಿ ಲೀಲಾವತಿಯವರ ಮನೆಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದರು. ನಂತರ ಅವರ ಆರೋಗ್ಯವನ್ನು ವಿಚಾರಿಸಿದರು.

ಸಿಎಂ ಸಿದ್ಧರಾಮಯ್ಯ
ಸಿಎಂ ಸಿದ್ಧರಾಮಯ್ಯ

ನೆಲಮಂಗಲ :ಅನಾರೋಗ್ಯದಿಂದ ಬಳಲುತ್ತಿರೋ ಹಿರಿಯ ನಟಿ ಲೀಲಾವತಿಯವರ ಮನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಅವರ ಆರೋಗ್ಯ ಕುಶಲೋಪರಿಯನ್ನ ವಿಚಾರಿಸಿದರು. ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಎಂ ಲೀಲಾವತಿಯವರು, ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 25 ವರ್ಷಗಳ ಹಿಂದೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಜಮೀನು ಖರೀದಿ ಮಾಡಿ, ಜಮೀನಿನಲ್ಲಿ ಕೃಷಿ ಮಾಡುತ್ತಾ ಅಲ್ಲಿಯೇ ವಾಸವಾಗಿದ್ದು, ಮಗ ವಿನೋದ್ ರಾಜ್ ಸಹ ಅಮ್ಮನ ಜೊತೆಯಲ್ಲಿ ಇದ್ದಾರೆ.

ಇತ್ತಿಚೇಗೆ ಅವರ ಆರೋಗ್ಯದಲ್ಲಿ ಏರುಪೇರಾಗಿ, ಆಹಾರ ಸೇವನೆ ನಿಲ್ಲಿಸಿದ್ದಾರೆ. ಪೈಪ್ ಮೂಲಕ ಅವರಿಗೆ ಆಹಾರವನ್ನ ನೀಡಲಾಗುತ್ತಿದೆ. ಅವರ ಆರೋಗ್ಯವನ್ನ ವಿಚಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನೆಗೆ ಭೇಟಿ ನೀಡಿದರು. ಮುಖ್ಯಮಂತ್ರಿಯವರನ್ನ ಬರಮಾಡಿಕೊಂಡ ವಿನೋದ್ ರಾಜ್ ತಾಯಿ ಆರೋಗ್ಯ ಸ್ಥಿತಿಯನ್ನು ವಿವರಿಸಿದರು.

ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ ಸಿಎಂ ಸಿದ್ಧರಾಮಯ್ಯ

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗಿಯಾಗಲು ನೆಲಮಂಗಲಕ್ಕೆ ಬಂದಿದ್ದೆ. ಈ ವೇಳೆ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಬಂದೆ. ಲೀಲಾವತಿಯವರು ನೈಜ ಕಲಾವಿದೆ. ಈ ಜಮೀನಿನ ಸಮಸ್ಯೆ ಇದ್ದಾಗ ನನ್ನ ಭೇಟಿ ಮಾಡಿದ್ರು. ಅವರನ್ನ ಆಸ್ಪತ್ರೆಗೆ ಸೇರಿಸಿದ್ರೆ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತೇವೆ. ಸರ್ಕಾರದಿಂದ ಯಾವ್ದಾದ್ರು ಸಹಾಯ ಬೇಕಿದ್ರೆ ನಾವು ಕೊಡುತ್ತೇವೆ ಎಂದರು.

ಡಿಕೆಶಿ, ಶಿವಣ್ಣ ಭೇಟಿ : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ನಿವಾಸಕ್ಕೆ (ನವೆಂಬರ್ 28-2023) ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಹಿರಿಯ ನಟ ಶಿವರಾಜ್​ಕುಮಾರ್ ಭೇಟಿ ನೀಡಿದ್ದರು. ಶಿವಣ್ಣನ ಜೊತೆ ಪತ್ನಿ ಗೀತಾ ಕೂಡ ಇದ್ದರು. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಗೆ ಭೇಟಿ ನೀಡಿದ್ದ ಗಣ್ಯರು ಲೀಲಾವತಿಯವರ ಆರೋಗ್ಯ ವಿಚಾರಿಸಿದರು.

ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ ಸಿಎಂ ಸಿದ್ಧರಾಮಯ್ಯ

ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದ ನಟ ಶಿವರಾಜ್​​ಕುಮಾರ್​, ನಮ್ಮ ದನಿ ಕಂಡು ಹಿಡಿಯುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಅವರನ್ನು ನೋಡಿದ್ದೇನೆ. ಅಂದಿನಿಂದಲೂ ಅದೇ ಅತ್ಮೀಯತೆ, ಒಂದೊಳ್ಳೆ ಮನಸ್ಸಿರುವ ವ್ಯಕ್ತಿತ್ವ. ಈ ಗುಣದಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ವಿನೋದ್ ಅವರನ್ನು ನೋಡಿದಾಗಲೆಲ್ಲಾ ಅವರನ್ನೇ ನೋಡಿದಂತಾಗುತ್ತದೆ. ದೇವರ ಆಶೀರ್ವಾದ ಮತ್ತು ಜನರ ಪ್ರೀತಿ ಅವರೊಂದಿಗೆ ಇದೆ ಎಂದು ತಿಳಿಸಿದ್ದರು.

ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟನೆ : ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಡಾ. ಲೀಲಾವತಿಯವರಿಂದ ನಿರ್ಮಾಣ ಮಾಡಲಾಗಿರುವ ಪಶು ವೈದ್ಯಕೀಯ ಆಸ್ಪತ್ರೆಯನ್ನು ಅಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಉದ್ಘಾಟಿಸಿದ್ದರು.

ಇದನ್ನೂ ಓದಿ :ಹಿರಿಯ ನಟಿ ಲೀಲಾವತಿ ನಿವಾಸಕ್ಕೆ ಡಿಸಿಎಂ ಡಿಕೆಶಿ, ಶಿವಣ್ಣ ಭೇಟಿ; ಆರೋಗ್ಯ ವಿಚಾರಣೆ

ABOUT THE AUTHOR

...view details