ಕರ್ನಾಟಕ

karnataka

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆದ ಬ್ರಹ್ಮರಥೋತ್ಸವ

By ETV Bharat Karnataka Team

Published : Jan 16, 2024, 7:19 PM IST

ಇಂದು ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಅದ್ದೂರಿಯಾಗಿ ಬ್ರಹ್ಮರಥೋತ್ಸವ ಜರುಗಿತು.

ಬ್ರಹ್ಮರಥೋತ್ಸವ
ಬ್ರಹ್ಮರಥೋತ್ಸವ

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆದ ಬ್ರಹ್ಮರಥೋತ್ಸವ

ದೊಡ್ಡ ಬಳ್ಳಾಪುರ :ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಇಂದು ಅದ್ಧೂರಿಯಾಗಿ ಬ್ರಹ್ಮರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾದರು. ರಥೋತ್ಸವದ ವೇಳೆ ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿ ಭಕ್ತರ ಆತಂಕವನ್ನ ದೂರ ಮಾಡಿತು.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ನಾಗರಾಧನೆಯ ಕ್ಷೇತ್ರ. ಇಂದು ಮಧ್ಯಾಹ್ನ 12-15 ರಿಂದ 12-30 ಕ್ಕೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ನೆರವೇರಿತು.

ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿಯವರು ರಥೋತ್ಸವಕ್ಕೆ ಚಾಲನೆ ನೀಡಿದರು. ಸುಬ್ರಮಣ್ಯಸ್ವಾಮಿ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದು, ರಥಕ್ಕೆ ಹೂವು, ದವನ ಮತ್ತು ಬಾಳೆಹಣ್ಣು ಎಸೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ರಥೋತ್ಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಹೆಚ್ ಮುನಿಯಪ್ಪ ಮತ್ತು ದೊಡ್ಡಬಳ್ಳಾಪುರದ ಶಾಸಕರಾದ ಧೀರಜ್ ಮುನಿರಾಜು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ಇದೇ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಹೆಚ್ ಮುನಿಯಪ್ಪ, ಘಾಟಿ ದೇವಸ್ಥಾನಕ್ಕೆ ಉತ್ತಮ ಆದಾಯ ಬರುತ್ತಿದೆ. ಇಂತಹ ಕ್ಷೇತ್ರವನ್ನ ಅಭಿವೃದ್ಧಿಪಡಿಸಿ ಮೂಲ ಸೌಕರ್ಯಗಳನ್ನ ಒದಗಿಸಬೇಕು. ಈ ಕಾರಣಕ್ಕಾಗಿಯೇ ಮುಜರಾಯಿ ಸಚಿವರನ್ನ ರಥೋತ್ಸವಕ್ಕೆ ಆಹ್ವಾನಿಸಲಾಗಿತ್ತು. ಈ ಸಮಯದಲ್ಲಿ ಸಚಿವರೊಂದಿಗೆ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಲಾಯಿತು. ಅವರು ಸಹ ಸ್ಪಂದಿಸಿದ್ದಾರೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮತ್ತೊಂದು ಸಭೆಯನ್ನ ಘಾಟಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

ಆಯತಪ್ಪಿ ಕೆಳಗೆ ಬಿದ್ದ ಭಕ್ತರು : ರಥೋತ್ಸವದಲ್ಲಿ ಭಾಗಿಯಾಗಿದ್ದ ಗುಂಪೊಂದು ರಥದ ಹಗ್ಗವನ್ನ ಎಳೆಯುತ್ತಿದ್ದರು. ಈ ವೇಳೆ, ಅವರೆಲ್ಲ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದ ಪತ್ರಕರ್ತರಾದ ಶಿವರಾಜ್ ನೇಸರ ಮತ್ತು ಕೆಲವರು ಕೆಳಗೆ ಬಿದ್ದವರನ್ನ ಅಲ್ಲಿಂದ ಹೊರಗೆ ಎಳೆದಿದ್ದಾರೆ. ಒಂದು ಕ್ಷಣ ಯಾಮಾರಿದರೂ ಕೆಳಗೆ ಬಿದ್ದವರ ಮೇಲೆ ರಥ ಸಾಗಿ ದುರಂತವೇ ಸಂಭವಿಸುತ್ತಿತ್ತು. ಕೂದಲೆಳೆಯ ಅಂತರದಲ್ಲಿ ಅನಾಹುತ ತಪ್ಪಿ, ಎಲ್ಲರ ಆತಂಕವನ್ನ ದೂರ ಮಾಡಿತು. ಘಟನೆ ನಂತರ ಪೊಲೀಸರು ಮತ್ತಷ್ಟು ಎಚ್ಚರಿಕೆ ಕ್ರಮ ತೆಗೆದುಕೊಂಡು ಯಾವುದೇ ರೀತಿಯ ಅನಾಹುತಗಳಿಗೆ ಅವಕಾಶ ಕೊಡದಂತೆ ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಇಂದು ಬ್ರಹ್ಮರಥೋತ್ಸವ

ABOUT THE AUTHOR

...view details