ಕರ್ನಾಟಕ

karnataka

ಪತಿಯನ್ನು ಪ್ರಿಯಕರನಿಂದ ಕೊಲ್ಲಿಸಿ ಮಿಸ್ಸಿಂಗ್ ಕೇಸು ದಾಖಲಿಸಿದ ಪತ್ನಿ, ಇಬ್ಬರ ಬಂಧನ

By

Published : Jul 21, 2023, 1:06 PM IST

ಪ್ರಿಯಕರನಿಂದ ಪತಿಯ ಕೊಲೆ ಮಾಡಿಸಿ ಮಿಸ್ಸಿಂಗ್​ ಪ್ರಕರಣ ದಾಖಲಿಸಿದ್ದ ಪತ್ನಿ ಮತ್ತು ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಿಯಕರನಿಂದ ಪತಿಯ ಕೊಲೆ
ಪ್ರಿಯಕರನಿಂದ ಪತಿಯ ಕೊಲೆ

ಆನೇಕಲ್ (ಬೆಂಗಳೂರು): ಮೂರು ತಿಂಗಳ ಹಿಂದೆ ಪತಿಯ ಕಿರುಕುಳ ತಾಳಲಾರದೆ ಪ್ರಿಯಕರನ ಮೂಲಕ ಕೊಲೆಗೆ ಸಂಚು ರೂಪಿಸಿ ರಸ್ತೆ ಅಪಘಾತದಂತೆ ಕೊಲ್ಲಿಸಿ ಮಿಸ್ಸಿಂಗ್ ದೂರು ನೀಡಿದ ಪತ್ನಿ ಪೊಲೀಸರ ಅತಿಥಿಯಾಗಿದ್ದಾಳೆ. ಸರ್ಜಾಪುರದಲ್ಲಿ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಆಂಧ್ರಪ್ರದೇಶದ ಅಣ್ಣಾಮಲೈ ಜಿಲ್ಲೆಯ ಚಿತ್ತೂರು ತಾಲೂಕಿನ ಬೊಮ್ಮಿರೆಡ್ಡಿ ಪಾಳ್ಯ ಮೂಲದ ಪವನ್ ಕುಮಾರ್ (37) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಪಾರ್ವತಿ ಕೊಲೆ ಮಾಡಿಸಿದ ಆರೋಪಿ.

ಪ್ರಕರಣದ ವಿವರ: ಸರ್ಜಾಪುರ ಭಾಗಕ್ಕೆ ಬಂದು ಬಿಲ್ಲಾಪುರದಲ್ಲಿ ನೆಲೆಸಿ ಖಾಸಗಿ ಶಾಲಾ ಬಸ್ ಚಾಲಕನಾಗಿ ಪವನ್ ಕೆಲಸ ಮಾಡುತ್ತಿದ್ದ.‌ ಇಬ್ಬರಿಗೂ 18 ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪಾರ್ವತಿ ಇಲ್ಲಿಯ ಗಾರ್ಮೆಂಟ್ಸ್​​ನಲ್ಲಿ ಕೆಲಸಕ್ಕೆ ಸೇರಿ ಇಬ್ಬರು ಮಕ್ಕಳನ್ನು ಪೋಷಿಸುತ್ತಿದ್ದಳು. ಲಾಕ್ಡೌನ್​ನಲ್ಲಿ ಗಾರ್ಮೆಂಟ್ಸ್ ಮುಚ್ಚಲಾಗಿತ್ತು. ಗಂಡನ ಶಾಲಾ ವಾಹನ ಚಾಲನೆಯೂ ಬಂದ್ ಆಗಿತ್ತು. ಪಾರ್ವತಿ ಕಾಡ ಅಗ್ರಹಾರದ ರಾಜಾರೆಡ್ಡಿ ತೋಟಕ್ಕೆ ಕೂಲಿ ಕೆಲಸಕ್ಕೆ ಸೇರಿದ್ದಳು.

ಅಲ್ಲಿ ತರಕಾರಿ ಸಾಗಣೆ ವಾಹನ ಚಾಲಕನೊಂದಿಗೆ ಪರಿಚಯವಾಗಿದೆ. ಈ ವಿಷಯ ಗಂಡ ಪವನ್​ಗೆ ಗೊತ್ತಾಗಿ ಜಗಳವಾಗಿದೆ. ನಂತರ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಮದನಪಲ್ಲಿಗೆ ಪಾರ್ವತಿ ತವರುಮನೆಗೆ ಹೊರಟು ಹೋಗಿದ್ದಳು. ಆದರೂ ಗಂಡ ಆಗಾಗ ಕೊಡುವ ಕಾಟ ತಾಳಲಾರದೆ ಪ್ರಿಯಕರ ಬೊಲೆರೋ ಪಿಕಪ್ ಚಾಲಕ ಬಿ ಹೊಸಹಳ್ಳಿ ಯಲ್ಲಪ್ಪನಿಗೆ ತಿಳಿಸಿ ಎಲ್ಲಾದರೂ ಅಪಘಾತದ ತರಹ ಮುಗಿಸಿಬಿಡು ಎಂದು ಸಂಚು ರೂಪಿಸುತ್ತಾಳೆ.

ಯಲ್ಲಪ್ಪ ಪ್ರೇಯಸಿಯ ಗಂಡನೊಂದಿಗೆ ಎಣ್ಣೆ ಪಾರ್ಟಿ ಶುರುವಿಟ್ಟು ಸ್ನೇಹಮಾಡಿ ಮದನಪಲ್ಲಿಗೆ ಹೋಗೋಣ ಪಿಕ್ಅಪ್ ಮಾಡ್ತೀನಿ ಎಂದು ಕಳೆದ ಮೇ 1ರಂದು ಕರೆದೊಯ್ಯುತ್ತಾನೆ. ಕೋಲಾರ-ಶ್ರೀನಿವಾಸಪುರ ರಸ್ತೆಯ ಕುರುಮಾಕಲಹಳ್ಳಿ ಗೇಟ್​ ಬಳಿ ಪವನ್​ನನ್ನು ಹತ್ಯೆ ಮಾಡಿ ರಸ್ತೆ ಮೇಲೆ ಮಲಗಿಸಿ ವಾಹನ ಹತ್ತಿಸಿ ಅಪಘಾತದ ರೂಪದಲ್ಲಿ ಬಿಂಬಿಸಿ ಪರಾರಿಯಾಗಿದ್ದಾನೆ. ಇತ್ತ ವಿಷಯ ತಿಳಿದ ಪಾರ್ವತಿ ಏನೂ ಗೊತ್ತಿಲ್ಲದವಳಂತೆ ಮರು ದಿನ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪತಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸುತ್ತಾಳೆ.

ಸರ್ಜಾಪುರ ಇನ್ಸಪೆಕ್ಟರ್ ಮಂಜುನಾಥ್ ಪ್ರಕರಣದ ತನಿಖೆ ಕೈಗೊಂಡು ಪವನ್ ಮೊಬೈಲ್ ಕರೆಗಳ ಹಿಸ್ಟರಿ ಪರಿಶೀಲಿಸಿದಾಗ, ಯಲ್ಲಪ್ಪ ಹೆಚ್ಚು ಕರೆ ಮಾಡಿರುವುದು ಕಂಡುಬಂದಿದೆ. ಕೊಲೆ ನಡೆದ ಜಾಗದಲ್ಲೂ ಇಬ್ಬರೂ ಜೊತೆಯಲ್ಲಿದ್ದದ್ದು ಗೊತ್ತಾಗಿದೆ. ಸರ್ಜಾಪುರ ಪೊಲೀಸರು ಪಾರ್ವತಿ-ಯಲ್ಲಪ್ಪನನ್ನು ಬಂಧಿಸಿ ಪ್ರಕರಣವನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಭದ್ರಾವತಿ: ರೌಡಿಶೀಟರ್ ಬರ್ಬರ ಹತ್ಯೆ

ABOUT THE AUTHOR

...view details