ಕರ್ನಾಟಕ

karnataka

ಮಲಪ್ರಭಾ ನದಿ‌ ಪ್ರವಾಹಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ, ಪರಿಶೀಲನೆ

By

Published : Jul 26, 2021, 9:16 PM IST

ಬಾದಾಮಿ ಕ್ಷೇತ್ರ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ಧರಾಮಯ್ಯನವರು ಮಲಪ್ರಭಾ ನದಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಖ್ಯಾಡ್, ಕಾತರಕಿ, ಹೆಬ್ಬಳ್ಳಿ ಗ್ರಾಮದ ಪ್ರವಾಹ ಪರಿಸ್ಥಿತಿ ಅವಲೋಕನ ಮಾಡಿದ ಅವರು ಅಲ್ಲಿನ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

siddaramaiah-visits-the-malaprabha-river-flood-prone-area
ಸಿದ್ದರಾಮಯ್ಯ

ಬಾಗಲಕೋಟೆ: ಸ್ವಕ್ಷೇತ್ರದ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲಪ್ರಭಾ ನದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.

ಮಲಪ್ರಭಾ ನದಿ‌ ಪ್ರವಾಹ ಪೀಡಿತ ಪ್ರದೇಶಕ್ಕೆ ಸಿದ್ದರಾಮಯ್ಯ ಭೇಟಿ, ಪರಿಶೀಲನೆ

ಬಾದಾಮಿ ತಾಲೂಕಿನ ಚೊಳ್ಳಚಗುಡ್ಡ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ, ಕಾರ್ಗಿಲ್ ವಿಜಯ ದಿನಾಚರಣೆ ಅಂಗವಾಗಿ ವೀರಮರಣ ಹೊಂದಿರುವ ಬಸಯ್ಯ ಕುಲಕರ್ಣಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಖ್ಯಾಡ್, ಕಾತರಕಿ, ಹೆಬ್ಬಳ್ಳಿ ಗ್ರಾಮದ ಪ್ರವಾಹ ಪರಿಸ್ಥಿತಿ ಮತ್ತು ಅಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಇದಾದ ಬಳಿಕ ಮುಳುಗಡೆಯಾಗಿರುವ ಗೋವನಕೊಪ್ಪ ಗ್ರಾಮದ ಕೊಣ್ಣೂರ ಸೇತುವೆ ವೀಕ್ಷಣೆ ಮಾಡಿದರು.

ಹೆಬ್ಬಳ್ಳಿ ಗ್ರಾಮದ ಮಲಪ್ರಭಾ ನದಿ ದಡದಲ್ಲಿ ಮರಳುಗಣಿಗಾರಿಗೆ ನಡೆಯುತ್ತಿರುವ ಕುರಿತು ತಹಶೀಲ್ದಾರ್​​​ ಸುಹಾಸ್​​ ಇಂಗಳೆ ಅವರಿಂದ ಮಾಹಿತಿ ಪಡೆದುಕೊಂಡರು. ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೋ ಅಥವಾ ಕಾನೂನು ಪ್ರಕಾರ ತೆಗೆಯುತ್ತಿದ್ದಾರೋ ಎಂದು ತಹಶೀಲ್ದಾರ್​​ ಅವರನ್ನು ಪ್ರಶ್ನಿಸಿದರು. ಬಾದಾಮಿ ಕ್ಷೇತ್ರದಲ್ಲಿ ಯಾವುದೇ ಕಾನೂನುಬಾಹಿರ ಮರಳುಗಾರಿಕೆ ನಡೆಯುತ್ತಿಲ್ಲ, ಎಲ್ಲವೂ ಸರ್ಕಾರದ ನಿಯಮದ ಪ್ರಕಾರವೇ ನಡೆಯುತ್ತಿದೆ ಎಂದು ಇಂಗಳೆ​ ಉತ್ತರಿಸಿದರು.

ಪ್ರವಾಹ ಭೀತಿಯ ಗ್ರಾಮದಲ್ಲಿ ಸಂಚರಿಸಿ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದರು. ನಂತರ ಸುಳ್ಳ ಗ್ರಾಮದ ಎಸ್​ಸಿ ಕಾಲೋನಿ ನಿವಾಸಿಗಳು ಅಹವಾಲು ಸ್ವೀಕರಿಸಿದರು. ಈ ಸಮಯದಲ್ಲಿ ತಹಶೀಲ್ದಾರ್ ವಿರುದ್ಧ ಕಾಲೋನಿಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳು ತಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಪ್ರವಾಹ ಬಾಧಿತ ಸ್ಥಳದಿಂದ ತಮ್ಮನ್ನು ಬೇರೆಡೆ ಸ್ಥಳಾಂತರ ಮಾಡುವ ವ್ಯವಸ್ಥೆ ಮಾಡ್ತಿಲ್ಲ ಎಂದು ಆರೋಪಿಸಿದರು.

ನಾಳೆ ಇಲ್ಲಿಗೆ ಭೇಟಿ ‌ನೀಡಿ, ಇವರ ಸಮಸ್ಯೆಗಳನ್ನು ಕೇಳಿ ಸೂಕ್ತ ಕ್ರಮ ತೆಗೆದುಕೊಂಡು ನನಗೆ ಮಾಹಿತಿ ನೀಡಿ ಎಂದು ಸಿದ್ದರಾಮಯ್ಯನವರು ತಹಶೀಲ್ದಾರ್​ ಅವರಿಗೆ ಸೂಚನೆ ನೀಡಿದರು.

ABOUT THE AUTHOR

...view details