ಬಾಗಲಕೋಟೆ:ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಘಟಾನುಘಟಿಗಳಿಗೆ ಮತದಾರ ಪ್ರಭುಗಳು ಸೋಲುಣಿಸಿದ್ದಾರೆ. ಆದರಂತೆ ಇದಕ್ಕೆ ಬಾಗಲಕೋಟೆ ಜಿಲ್ಲೆಯೂ ಹೊರತಾಗಿಲ್ಲ. ಹಿಂದಿನ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಗೋವಿಂದ ಕಾರಜೋಳ ಹಾಗೂ ಮುರುಗೇಶ್ ನಿರಾಣಿ ಅವರಿಗೆ ಮತದಾರರು ಈ ಬಾರಿ ಸೋಲಿನ ರುಚಿ ತೋರಿಸಿದ್ದಾರೆ.
ಮುಧೋಳ ಕ್ಷೇತ್ರದಲ್ಲಿ ಗೋವಿಂದ ಕಾರಜೋಳ ಸತತವಾಗಿ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಐದನೇ ಬಾರಿಗೆ ಗೆಲುವಿನ ಕನಸು ಕಂಡಿದ್ದ ಅವರಿಗೆ ನಿರಾಸೆಯಾಗಿದೆ. ಇದರ ಜೊತೆಗೆ ಬೀಳಗಿಯಲ್ಲಿ ಮುರುಗೇಶ್ ನಿರಾಣಿ ಕೂಡಾ ಸೋಲುಂಡಿದ್ದಾರೆ. ಈ ಮೂಲಕ ಬಾಗಲಕೋಟೆ ಜಿಲ್ಲೆಯ 7 ವಿಧಾನಸಭೆಗಳ ಪೈಕಿ 5 ಕಾಂಗ್ರೆಸ್ ಹಾಗೂ ಎರಡರಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಈ ಹಿಂದೆ ಐದು ಬಿಜೆಪಿ ಹಾಗೂ ಇಬ್ಬರು ಕಾಂಗ್ರೆಸ್ ಶಾಸಕರಾಗಿದ್ದರು. ಈ ಸಾರಿ ಫಲಿತಾಂಶ ಉಲ್ಟಾ ಆಗಿದೆ.
ಕ್ಷೇತ್ರವಾರು ವಿವರವಾಗಿ ನೋಡುವುದಾದರೆ ತೇರದಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ 10,745 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಕೊಣ್ಣೂರ ವಿರುದ್ಧ ಜಯ ಗಳಿಸಿದ್ದಾರೆ. ಜಮಖಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಗುಡಗುಂಟಿ 4,716 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮುಧೋಳದಲ್ಲಿ 17,335 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಆರ್.ಬಿ. ತಿಮ್ಮಾಪುರ ಬಿಜೆಪಿ ಪ್ರತಿಸ್ಪರ್ಧಿ ಗೋವಿಂದ ಕಾರಜೋಳ ವಿರುದ್ಧ ಭಾರಿ ಅಂತರದ ಗೆಲುವು ದಕ್ಕಿಸಿಕೊಂಡಿದ್ದಾರೆ.