ಕರ್ನಾಟಕ

karnataka

Vinesh Phogat: ಏಷ್ಯನ್ ಗೇಮ್ಸ್​ನಿಂದ ಹಿಂದೆ ಸರಿದ ವಿನೇಶ್ ಫೋಗಟ್; ಯುವ ಪ್ರತಿಭೆಗೆ ಅವಕಾಶ

By

Published : Aug 15, 2023, 6:28 PM IST

Asian Games: ಸೆಪ್ಟೆಂಬರ್ 23ರಿಂದ ಚೀನಾದದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್​ನಿಂದ ವಿನೇಶ್ ಫೋಗಟ್ ಹಿಂದೆ ಸರಿದಿದ್ದಾರೆ.

Vinesh Phogat
Vinesh Phogat

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (IWF) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ವಿನೇಶ್ ಫೋಗಟ್ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್​ನಿಂದ ಹಿಂದೆ ಸರಿದಿದ್ದಾರೆ. ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಿಂದ ವಿನಾಯಿತಿ ಪಡೆದು ನೇರಪ್ರವೇಶ ಪಡೆದುಕೊಂಡಿದ್ದ ಫೋಗಟ್ ಗಾಯದ ಕಾರಣದಿಂದಾಗಿ ಆಡುತ್ತಿಲ್ಲ ಎಂದು ತಿಳಿಸಿದ್ದಾರೆ.

ತಮ್ಮ ಎಕ್ಸ್‌ಆ್ಯಪ್​ ಖಾತೆಯಲ್ಲಿ ಪತ್ರವೊಂದನ್ನು ಪೋಸ್ಟ್​ ಮಾಡಿರುವ ಅವರು, "ನಾನು ಅತ್ಯಂತ ದುಃಖದ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಒಂದೆರಡು ದಿನಗಳ ಹಿಂದೆ (13ನೇ ಆಗಸ್ಟ್ 2023) ತರಬೇತಿಯಲ್ಲಿ ನನ್ನ ಎಡ ಮೊಣಕಾಲಿಗೆ ಗಾಯವಾಯಿತು. ಸ್ಕ್ಯಾನ್ ಮತ್ತು ಪರೀಕ್ಷೆಗಳನ್ನು ಮಾಡಿದ ನಂತರ ನಾನು ಚೇತರಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ".

"ಆಗಸ್ಟ್ 17ರಂದು ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತೇನೆ. 2018ರಲ್ಲಿ ಜಕಾರ್ತಾದಲ್ಲಿ ಗೆದ್ದ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಭಾರತಕ್ಕಾಗಿ ಉಳಿಸಿಕೊಳ್ಳುವುದು ನನ್ನ ಕನಸಾಗಿತ್ತು. ಆದರೆ ದುರದೃಷ್ಟವಶಾತ್, ಗಾಯದಿಂದಾಗಿ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಮೀಸಲು ಆಟಗಾರನನ್ನು ಏಷ್ಯನ್ ಗೇಮ್ಸ್‌ಗೆ ಕಳುಹಿಸಲು ತಕ್ಷಣವೇ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ತಿಳಿಸಿದ್ದೇನೆ".

"ಅಭಿಮಾನಿಗಳು ನನ್ನನ್ನು ಬೆಂಬಲಿಸುವುದನ್ನು ಮುಂದುವರಿಸುವಂತೆ ವಿನಂತಿಸುತ್ತೇನೆ. ಇದರಿಂದ ನಾನು ಶೀಘ್ರದಲ್ಲೇ ಚೇತರಿಸಿಕೊಂಡು ಮತ್ತೆ ಮ್ಯಾಟ್‌ಗೆ ಮರಳುತ್ತೇನೆ. ಪ್ಯಾರಿಸ್ 2024 ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತೇನೆ. ನಿಮ್ಮ ಬೆಂಬಲ ನನಗೆ ಹೆಚ್ಚಿನ ಶಕ್ತಿ ನೀಡುತ್ತದೆ" ಎಂದು ಬರೆದುಕೊಂಡಿದ್ದಾರೆ.

ಆಂಟಿಮ್ ಪಂಘಲ್ ಅವರಿಗೆ ಅವಕಾಶ: ವಿನೇಶ್ ಪೊಗೆಟ್​ ಅವರಿಂದ ತೆರವಾದ ಜಾಗಕ್ಕೆ ಆಂಟಿಮ್ ಪಂಘಲ್ ಸೇರಿಕೊಳ್ಳಲಿದ್ದಾರೆ. 20 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಟ್ರಯಲ್ಸ್‌ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ ಈ ಆಟಗಾರ್ತಿಯನ್ನು ಮೀಸಲು ಪಟ್ಟಿಯಲ್ಲಿ ಹೆಸರಿಸಲಾಗಿತ್ತು. 53 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಇದೀಗ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಸೆಪ್ಟೆಂಬರ್ 23ರಿಂದ ಪ್ರಾರಂಭವಾಗಲಿರುವ ಏಷ್ಯನ್ ಗೇಮ್ಸ್​ಗೆ ವಿನೇಶ್ ಮತ್ತು ಬಜರಂಗ್ ಅವರಿಗೆ ತಾತ್ಕಾಲಿಕ ಸಮಿತಿಯಿಂದ ವಿನಾಯಿತಿ ನೀಡಿತ್ತು. 2023ರ ಏಷ್ಯನ್ ಗೇಮ್ಸ್‌ಗೆ ನೇರಪ್ರವೇಶ ಅವಕಾಶ ಪ್ರಶ್ನಿಸಿ ಆಂಟಿಮ್ ಪಂಘಲ್ ಮತ್ತು ಸುಜೀತ್ ಕಲ್ಕಲ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಕೋರ್ಟ್​ ವಜಾಗೊಳಿಸಿತ್ತು.

ಇದನ್ನೂ ಓದಿ:Pat Cummins: ಭಾರತದ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಗೆ ಕಮಿನ್ಸ್ ರೆಡಿ

ABOUT THE AUTHOR

...view details