ಕರ್ನಾಟಕ

karnataka

US Open: ಅಮೆರಿಕ ಓಪನ್​ ಬ್ಯಾಡ್ಮಿಂಟನ್​ ನಾಲ್ಕರಘಟ್ಟಕ್ಕೆ ಲಕ್ಷ್ಯ ಸೇನ್​ ಲಗ್ಗೆ, ಸೋತು ಹೊರಬಿದ್ದ ಸಿಂಧು

By

Published : Jul 15, 2023, 7:22 PM IST

ಅಮೆರಿಕ ಓಪನ್​ ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ಬಂದಿದೆ. ಲಕ್ಷ್ಯ ಸೇನ್​ ಗೆದ್ದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರೆ, ಪಿವಿ ಸಿಂಧು ಸೋತು ನಿರ್ಗಮಿಸಿದರು.

ಮೆರಿಕ ಓಪನ್​ ಬ್ಯಾಡ್ಮಿಂಟನ್
ಮೆರಿಕ ಓಪನ್​ ಬ್ಯಾಡ್ಮಿಂಟನ್

ಕೌನ್ಸಿಲ್ ಬ್ಲಫ್ಸ್ (ಯುಎಸ್‌ಎ):ಕೆನಡಾ ಓಪನ್​ ಗೆದ್ದು ಬೀಗಿದ್ದ ಭಾರತದ ತಾರಾ ಷಟ್ಲರ್ ಲಕ್ಷ್ಯ ಸೇನ್ ಅವರು ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್​ ಬ್ಯಾಡ್ಮಿಂಟನ್​ನಲ್ಲಿ ಪುರುಷರ ಸಿಂಗಲ್ಸ್ ಸೆಮಿಫೈನಲ್ ತಲುಪಿದರು. ಇತ್ತ, 2 ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಆಘಾತ ಅನುಭವಿಸಿದ್ದು, ಕ್ವಾರ್ಟರ್​ ಫೈನಲ್​ನಲ್ಲಿ ಸೋತು ಹೊರಬಿದ್ದರು.

ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಲಕ್ಷ್ಯಸೇನ್​ 21-10, 21-17ರಲ್ಲಿ ಭಾರತದವರೇ ಆದ ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ ಅವರನ್ನು ಸೋಲಿಸಿದರು. ಪಂದ್ಯದಲ್ಲಿ ಪೂರ್ಣ ಪ್ರಾಬಲ್ಯ ಮೆರೆದ ಸೇನ್, ಯಾವುದೇ ಸಮಯದಲ್ಲಿ ಶಂಕರ್ ಪುಟಿದೇಳದಂತೆ ತಡೆದರು. ಮೊದಲ ಸೆಟ್​ನ ಆರಂಭದಲ್ಲಿ 7-1 ರಿಂದ ಮುನ್ನಡೆ ಸಾಧಿಸಿದ ಸೇನ್​ ಪಾಯಿಂಟ್​ ಸಾಧಿಸುತ್ತಾ, 21-10 ರಲ್ಲಿ ಗೇಮ್​ ಗೆದ್ದರು. ಎರಡನೇ ಗೇಮ್‌ನಲ್ಲಿ ಎಸ್ ಶಂಕರ್ ತಿರುಗೇಟು ನೀಡುವ ಹೋರಾಟ ನಡೆಸಿದರು. ಆದರೆ, ತನ್ನ ಚಾಕಚಕ್ಯತೆಯಿಂದ ಸೇನ್​ ಗೇಮ್​ ಅನ್ನು 21-17 ರಲ್ಲಿ ಗೆದ್ದರು. ಲಕ್ಷ್ಯಸೇನ್​ ಪಂದ್ಯವನ್ನು ಕೇವಲ 38 ನಿಮಿಷಗಳಲ್ಲಿ ಗೆದ್ದುಕೊಂಡರು.

ಸೆಮೀಸ್​ನಲ್ಲಿ ಕಠಿಣ ಫೈಟ್​:21ರ ಹರೆಯದ ಲಕ್ಷ್ಯ ಸೇನ್ ಪ್ರಸ್ತುತ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 12ನೇ ಸ್ಥಾನದಲ್ಲಿದ್ದಾರೆ. ಅವರು ಫೈನಲ್‌ನಲ್ಲಿ ಸ್ಥಾನ ಪಡೆಯಲು ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಮತ್ತು ವಿಶ್ವದ ನಂ.7 ಆಟಗಾರ ಚೀನಾದ ಲಿ ಶಿ ಫೆಂಗ್ ಅವರನ್ನು ಎದುರಿಸಲಿದ್ದಾರೆ. ಕಳೆದ ವಾರ ಕೊನೆಗೊಂಡ ಕೆನಡಾ ಓಪನ್‌ನ ಫೈನಲ್‌ನಲ್ಲಿ ಇಬ್ಬರೂ ಷಟ್ಲರ್‌ಗಳು ಮುಖಾಮುಖಿಯಾಗಿದ್ದರು. ಸೇನ್ ಇಲ್ಲಿ ವಿಜಯ ಸಾಧಿಸಿ, ಟ್ರೋಫಿಗೆ ಮುತ್ತಿಟ್ಟಿದ್ದರು. ಭಾರತದ ಆಟಗಾರ ಚೀನೀ ಎದುರಾಳಿಯ ವಿರುದ್ಧದ ಮುಖಾಮುಖಿಯಲ್ಲಿ 5-3 ಮುನ್ನಡೆಯಲಿದ್ದಾರೆ. ಸೆಮೀಸ್​ನಲ್ಲಿ ಗೆದ್ದು ಮತ್ತೊಂದು ಓಪನ್​ ಪ್ರಶಸ್ತಿ ಗೆಲುವಿನತ್ತ ಲಕ್ಷ್ಯ ವಹಿಸಬೇಕಿದೆ.

ಸಿಂಧುಗೆ ಆಘಾತ:ಮತ್ತೊಂದೆಡೆ, 2 ಬಾರಿಯ ಒಲಿಂಪಿಕ್​ ಚಾಂಪಿಯನ್​ ಪಿವಿ ಸಿಂಧು ಆಘಾತ ಅನುಭವಿಸಿದರು. ನಿನ್ನೆ ರಾತ್ರಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಗಾವೊ ಫಾಂಗ್ ವಿರುದ್ಧ 20-22, 13-21 ಸೆಟ್‌ಗಳಿಂದ ಸೋತರು. ಈ ಮೂಲಕ ಮಹಿಳಾ ಸಿಂಗಲ್ಸ್​​ನಲ್ಲಿ ಭಾರತದ ಅಭಿಯಾನ ಮುಕ್ತಾಯವಾಯಿತು. ಸಿಂಧು ಪ್ರಸ್ತುತ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 12ನೇ ಸ್ಥಾನದಲ್ಲಿದ್ದರೆ, ಟೂರ್ನಿಯಲ್ಲಿ 3ನೇ ಶ್ರೇಯಾಂಕ ಪಡೆದಿದ್ದರು.

ಚೀನಾದ ಆಟಗಾರ್ತಿ ಮುಂದೆ ಸಿಂಧು ಸಲೀಸಾಗಿ ಮಂಡಿಯೂರಿದರು. ಮೊದಲ ಸೆಟ್​​ನಲ್ಲಿ ತೀವ್ರ ಸೆಣಸಾಟ ನಡೆಸಿದ ಭಾರತದ ತಾರಾ ಷಟ್ಲರ್​ 20-20 ರಲ್ಲಿ ಸಮಬಲ ಸಾಧಿಸಿದ್ದರು. ಕೊನೆಯ ಹಂತದಲ್ಲಿ ಚೀನೀ ಆಟಗಾರ್ತಿ ಸತತ 2 ಪಾಯಿಂಟ್​ ಗಳಿಸುವ ಮೂಲಕ ಮೊದಲ ಗೇಮ್​ ಗೆದ್ದರು. 2ನೇ ಗೇಮ್​ನಲ್ಲಿ ಪ್ರಬಲ ಹೊಡೆತಗಳಿಂದ ಮಿಂಚಿದ ಗಾವೊ ಫಾಂಗ್​, ಸತತ ಪಾಯಿಂಟ್​ ಕಲೆಹಾಕಿ 13-21 ರಲ್ಲಿ ಗೆಲುವು ಸಾಧಿಸಿದರು.

ಆಕ್ರಮಣಕಾರಿ ಆಟದ ಮುಂದೆ ಸಿಂಧು ನಿರುತ್ತರರಾದರು. 49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಚೀನೀ ಆಟಗಾರ್ತಿ ಪ್ರಾಬಲ್ಯ ಮೆರೆದರು. ಚೀನಾ ಆಟಗಾರ್ತಿ ಎದುರಿನ 5 ಮುಖಾಮುಖಿಗಳಲ್ಲಿ ಸಿಂಧುಗೆ ಇದು ನಾಲ್ಕನೇ ಸೋಲಾಗಿದೆ

ಇದನ್ನೂ ಓದಿ:ಜೈಸ್ವಾಲ್​ 'ಯಶಸ್ವಿ' ಬ್ಯಾಟಿಂಗ್​ಗೆ ರೋಹಿತ್​ ಫಿದಾ: ಅಶ್ವಿನ್​ - ಜಡ್ಡು ಸ್ಪಿನ್​ ದಾಳಿ ಹೊಗಳಿದ ನಾಯಕ

ABOUT THE AUTHOR

...view details