ಲೌಸೇನ್: 2020ರ ಟೋಕಿಯೋ ಒಲಿಂಪಿಕ್ ಅನ್ನು ಮುಂದೂಡಲು ಬೆಂಬಲ ಸೂಚಿಸಿರುವುದಕ್ಕೆ ಜಿ- 20 ನಾಯಕರನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಧನ್ಯವಾದ ತಿಳಿಸಿದೆ.
ಜಿ-20 ನಾಯಕರಿಗೆ ಐಒಸಿ ಧನ್ಯವಾದ ಈ ಬಗ್ಗೆ ಮಾತನಾಡಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್, ಜಪಾನ್ ಮತ್ತು ಐಒಸಿಗೆ ಜಿ-20 ನಾಯಕರು ಮಹತ್ವ ಬೆಂಬಲ ನೀಡಿದ್ದಾರೆ. ಮನುಕುಲವು ಕತ್ತಲೆಯ ಸುರಂಗದಲ್ಲಿ ಸಿಲುಕಿದೆ. 2020ರ ಟೋಕಿಯೋ ಒಲಿಂಪಿಕ್ ಕ್ರೀಡಾಕೂಟವು ಈ ಸುರಂಗದ ಅಂತ್ಯದಲ್ಲಿ ಬೆಳಕು ಕಾಣಬಹುದು ಎಂದು ಹೇಳಿದ್ದಾರೆ.
ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳನ್ನು ಮುಂದೂಡುವ ಮೂಲಕ ನಮ್ಮ ಜನರ ಆರೋಗ್ಯವನ್ನು ಕಾಪಾಡುವ ಪ್ರಯತ್ನಗಳನ್ನು ನಾವು ಗೌರವಿಸುತ್ತೇವೆ, ನಿರ್ದಿಷ್ಟವಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಒಲಿಂಪಿಕ್ ಕ್ರೀಡಾಕೂಟವನ್ನು 2021ರ ಬೇಸಿಗೆಯ ನಂತರದ ದಿನಗಳಲ್ಲಿ ನಿಗದಿಪಡಿಸಿದೆ. 2020ರ ಟೋಕಿಯೊ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಮತ್ತೆ ಆಯೋಜಿಸುವ ಜಪಾನ್‌ನ ಸಂಕಲ್ಪವನ್ನು ನಾವು ಪ್ರಶಂಸಿಸುತ್ತೇವೆ ಎಂದು ಜಿ-20 ನಾಯಕರ ಶೃಂಗಸಭೆಯು ಗುರುವಾರ ಪ್ರಕಟಣೆಯಲ್ಲಿ ತಿಳಿಸಿತ್ತು.
ಇತಿಹಾಸದಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಒಂದು ವರ್ಷಗಳ ಕಾಲ ಮುಂದೂಡಲಾಗಿದೆ. ಈ ಕ್ರೀಡಾಕೂಟವನ್ನು 2021ಕ್ಕೆ ನಡೆಸಿದರು 2020ರ ಒಲಿಂಪಿಕ್ ಎಂದೇ ಹೆಸರಿಡಲಾಗುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಹೇಳಿದೆ.