ಕರ್ನಾಟಕ

karnataka

ಹೊಸದಾಗಿ ಚುನಾಯಿತವಾದ ರಾಷ್ಟ್ರೀಯ ಕುಸ್ತಿ ಫೆಡರೇಶನ್​ ಸಂಸ್ಥೆ ಅಮಾನತು ಮಾಡಿದ ಕೇಂದ್ರ ಸರ್ಕಾರ

By PTI

Published : Dec 24, 2023, 12:32 PM IST

ಹೊಸದಾಗಿ ಆಯ್ಕೆಯಾದ ರಾಷ್ಟ್ರೀಯ ಕುಸ್ತಿ ಫೆಡರೇಶನ್​ ಸಂಸ್ಥೆಯನ್ನು ಕೇಂದ್ರ ಸರ್ಕಾರ ಅಮಾನತು ಮಾಡಿದೆ. ನಿಯಮಗಳ ಉಲ್ಲಂಘನೆ ಆಪಾದನೆ ಮೇಲೆ ಈ ಕ್ರಮ ಜರುಗಿಸಲಾಗಿದೆ.

ರಾಷ್ಟ್ರೀಯ ಕುಸ್ತಿ ಫೆಡರೇಶನ್​ ಸಂಸ್ಥೆ ಅಮಾನತು
ರಾಷ್ಟ್ರೀಯ ಕುಸ್ತಿ ಫೆಡರೇಶನ್​ ಸಂಸ್ಥೆ ಅಮಾನತು

ನವದೆಹಲಿ:ವಿವಾದದ ಗೂಡಾಗಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮತ್ತೆ ಅಮಾನತುಗೊಂಡಿದೆ. ನಿಯಮ ಮತ್ತು ನಿಬಂಧನೆಗಳನ್ನು ಉಲ್ಲಂಘನೆ ಆಪಾದನೆ ಮೇಲೆ ಹೊಸ ಅಧ್ಯಕ್ಷ ಸಂಜಯ್​ ಸಿಂಗ್​ ಅವರ ನೇತೃತ್ವದ ಕಾರ್ಯಕಾರಿ ಸಮಿತಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಭಾನುವಾರ ಸಸ್ಪೆಂಡ್​ ಮಾಡಿದೆ.

ಆದೇಶ ಪತ್ರ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್​ ನಿಕಟವರ್ತಿ, ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಸಂಜಯ್​ ಸಿಂಗ್​ ನೇತೃತ್ವದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಸ್ತಿತ್ವದಲ್ಲಿದ್ದ ನಿಯಮಗಳನ್ನು ಮುರಿದಿದೆ. ತರಾತುರಿಯಲ್ಲಿ ಡಿಸೆಂಬರ್​ 21 ರಂದು ಜೂನಿಯರ್​ ರಾಷ್ಟ್ರೀಯ ಕುಸ್ತಿ (15 ಮತ್ತು 20 ವರ್ಷದೊಳಗಿನ ಸ್ಪರ್ಧೆ) ಸ್ಪರ್ಧೆಗಳನ್ನು ಘೋಷಿಸಿದೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಸ್ಪರ್ಧೆಗೆ ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಕಾಲಾವಕಾಶ ನೀಡಬೇಕಿತ್ತು. ಈ ನಿಯಮ ಪಾಲಿಸಲಾಗಿಲ್ಲ ಎಂದು ಹೇಳಿದೆ.

ತರಾತುರಿಯಲ್ಲಿ ಸ್ಪರ್ಧೆ ಆಯೋಜನೆ:ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ದಿನವೇ ಈ ಕುಸ್ತಿ ಸ್ಪರ್ಧೆಯನ್ನು ಘೋಷಿಸಿದ್ದಾರೆ. ಇದನ್ನು ಆತುರಾತುರವಾಗಿ ಆಯೋಜಿಸಲಾಗಿದೆ. ಜೊತೆಗೆ ನಡೆದ ಸಭೆಗಳಿಗೆ ಬಾಧ್ಯಸ್ಥರಾಗಿರುವ ಪ್ರಧಾನ ಕಾರ್ಯದರ್ಶಿಯನ್ನು ಕರೆಯಲಾಗಿಲ್ಲ. ಹೊಸದಾಗಿ ಚುನಾಯಿತವಾದ ಸಂಸ್ಥೆಯು ಕ್ರೀಡಾ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಮಾಜಿ ಪದಾಧಿಕಾರಿಗಳ ನಿಯಂತ್ರಣಕ್ಕೆ ಒಳಪಟ್ಟಿರುವುದು ತೋರುತ್ತಿದೆ ಎಂದು ಸಚಿವಾಲಯ ಹೇಳಿದೆ.

ಸಂಸ್ಥೆಯು ಅಥ್ಲೀಟ್‌ಗಳು, ಸಾರ್ವಜನಿಕರಲ್ಲಿ ನಂಬಿಕೆ ಬೆಳೆಸಬೇಕು. ಕುಸ್ತಿ ಫೆಡರೇಷನ್​ ಮೇಲೆ ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆಯು ನಿಷೇಧ ಹೇರಿದೆ. ಅಮಾನತು ತೆರವಾಗುವ ಮೊದಲೇ ಸ್ಪರ್ಧೆಗಳ ಆಯೋಜನೆಗೆ ಮುಂದಾಗಿರುವುದು ನಿಯಮಬಾಹಿರ. ಹೀಗಾಗಿ ಮುಂದಿನ ಆದೇಶದವರೆಗೆ ಸಂಸ್ಥೆಯ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಡಬ್ಲ್ಯುಎಫ್‌ಐಗೆ ಕ್ರೀಡಾ ಸಚಿವಾಲಯ ಸೂಚಿಸಿದೆ.

ಕುಸ್ತಿಪಟುಗಳ ನಿವೃತ್ತಿ, ಆಕ್ರೋಶ:ಲೈಂಗಿಕ ಆರೋಪ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್​ ಸಿಂಗ್​ ಅವರ ಆಪ್ತ ತಂಡ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಇದರಿಂದ ನೊಂದ ಕುಸ್ತಿಪಟು, ಒಲಿಂಪಿಕ್​​ ಪದಕ ವಿಜೇತೆ ಸಾಕ್ಷಿ ಮಲಿಕ್​ ಕಣ್ಣೀರಿಡುತ್ತಲೇ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದರು. ಇನ್ನೊಬ್ಬ ಪೈಲ್ವಾನ್​ ಭಜರಂಗ್​ ಪೂನಿಯಾ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ಮನೆಯ ಹಾದಿಯಲ್ಲಿ ಇಟ್ಟು ಬೇಸರ ವ್ಯಕ್ತಪಡಿಸಿದ್ದರು. ಜೊತೆಗೆ ಪ್ರಧಾನಿಗೆ ಪತ್ರ ಬರೆದು ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಹೇಳಿದ್ದರು.

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಕುಸ್ತಿಪಟುಗಳು ದೆಹಲಿಯಲ್ಲಿ ಹೋರಾಟ ಮಾಡಿದ್ದರು. ಈ ವೇಳೆ ಲಾಠಿ ಏಟು ಕೂಡ ತಿಂದಿದ್ದರು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿ, ಬ್ರಿಜ್ ಭೂಷಣ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಷರತ್ತು ಹಾಗೂ ಇನ್ನೂ ಕೆಲವು ಬೇಡಿಕೆಗಳನ್ನು ಇಟ್ಟಿದ್ದರು. ಇದಕ್ಕೆ ಸಚಿವರ ಒಪ್ಪಿಗೆ ಸೂಚಿಸಿದ ನಂತರ ಪ್ರತಿಭಟನೆ ಕೈಬಿಟ್ಟಿದ್ದರು. ಆದರೆ, ಆಯ್ಕೆಯಾಗಿರುವ ಸಂಜಯ್ ಸಿಂಗ್, ಬ್ರಿಜ್ ಭೂಷಣ್ ಆಪ್ತರೆಂಬ ಕಾರಣಕ್ಕೆ ಕುಸ್ತಿಪಟುಗಳು ಭಾರಿ ನಿರಾಶೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸಂಜಯ್ ಸಿಂಗ್ ಆಯ್ಕೆಗೆ ವಿರೋಧ: 'ಪದ್ಮಶ್ರೀ' ಹಿಂದಿರುಗಿಸುವುದಾಗಿ ಪ್ರಧಾನಿಗೆ ಪತ್ರ ಬರೆದ ಬಜರಂಗ್ ಪೂನಿಯಾ

ABOUT THE AUTHOR

...view details