ಕರ್ನಾಟಕ

karnataka

ದುಬೈ ಟೂರ್ನಿ ಬಳಿಕ ಟೆನಿಸ್​ ಅಂಗಳಕ್ಕೆ ಸಾನಿಯಾ ಮಿರ್ಜಾ ವಿದಾಯ

By

Published : Jan 7, 2023, 3:02 PM IST

sania-mirza-to-retire

ಟೆನಿಸ್​ ಲೋಕಕ್ಕೆ ಸಾನಿಯಾ ಗುಡ್​ಬೈ- ಟೆನಿಸ್​ ಕ್ರೀಡೆಗೆ ಗುಡ್​ಬೈ ಹೇಳಿದ ಸಾನಿಯಾ - ಭಾರತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ- ದುಬೈ ಟೆನಿಸ್​ ಟೂರ್ನಿ ಬಳಿಕ ವಿದಾಯ

ನವದೆಹಲಿ:ಭಾರತದ ಟೆನಿಸ್​​ ತಾರೆ ಸಾನಿಯಾ ಮಿರ್ಜಾ ಮೈದಾನದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಫೆಬ್ರವರಿ 19 ರಿಂದ ಆರಂಭವಾಗುವ ದುಬೈ ಟೆನಿಸ್​ ಚಾಂಪಿಯನ್​ಶಿಪ್​ ಬಳಿಕ ಅವರು ಟೆನಿಸ್​ಗೆ ಗುಡ್​ಬೈ ಹೇಳಲಿದ್ದಾರೆ. ಫಿಟ್​ನೆಸ್​ ಸಮಸ್ಯೆ ಮತ್ತು ಕುಟುಂಬದೊಂದಿಗೆ ಸಮಯ ಕಳೆಯಲು ಅವರು ಟೆನಿಸ್​ನಿಂದ ದೂರವುಳಿಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಪರ್ಲ್​ ಸಿಟಿಯ 36 ವರ್ಷದ ಮೂಗುತಿ ಸುಂದರಿ ಗಾಯದ ಸಮಸ್ಯೆಯಿಂದಾಗಿ ಕಳೆದ ಯುಎಸ್​ ಒಪನ್​ನಲ್ಲಿ ಭಾಗವಹಿಸಿರಲಿಲ್ಲ. ಅದಾದ ಬಳಿಕ ಅವರು ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದರು. ಆದರೆ, ಕಳೆದ ವರ್ಷ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದ ಬಳಿಕ ನಿರ್ಧಾರವನ್ನು ಕೆಲಕಾಲ ತಡೆಹಿಡಿದಿದ್ದರು. ಇದೀಗ ದುಬೈ ಟೆನಿಸ್​ ಟೂರ್ನಿಗೆ ಸಿದ್ಧವಾಗುತ್ತಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಇದಕ್ಕೂ ಮೊದಲು ಸಾನಿಯಾ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಆಡಲಿದ್ದು, ಆ ಬಳಿಕ ಯುಎಇಯಲ್ಲಿ ನಡೆಯುವ ಚಾಂಪಿಯನ್ ಶಿಪ್ ಆಡಿ ಟೆನಿಸ್​ ಅಂಗಳಕ್ಕೆ ವಿದಾಯ ಹೇಳಲಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾನಿಯಾ ಮಿರ್ಜಾ, 'ಕಳೆದ ವರ್ಷ ಡಬ್ಲ್ಯುಟಿಎ ಫೈನಲ್‌ನ ನಂತರವೇ ನಿವೃತ್ತಿ ಹೊಂದಲು ಬಯಸಿದ್ದೆ. ಆದರೆ, ಮೊಣಕೈ ಗಾಯದ ಕಾರಣ ಅಮೆರಿಕನ್​ ಓಪನ್ ಟೆನಿಸ್​​ ಮತ್ತು ಉಳಿದ ಕೆಲ ಪಂದ್ಯಾವಳಿಗಳಿಂದ ಹಿಂದೆ ಸರಿಯಬೇಕಾಯಿತು. ಈ ಎಲ್ಲ ಕಾರಣಗಳಿಂದ ಟೆನಿಸ್​ ಅಂಗಳದಲ್ಲಿಯೇ ವಿದಾಯ ಹೇಳಲು ಸಾಧ್ಯವಾಗಲಿಲ್ಲ. ಮುಂದಿನ ದುಬೈ ಟೆನಿಸ್ ಚಾಂಪಿಯನ್‌ಶಿಪ್ ನಿವೃತ್ತಿಯಾಗುವೆ ಎಂದು ಮೂಗುತಿ ಸುಂದರಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ವೈವಾಹಿಕ ಜೀವನದಲ್ಲಿ ಬಿರುಕು?:ಸಾನಿಯಾ ಮಿರ್ಜಾ ಅವರು 2010 ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಮಿಜಾ- ಮಲಿಕ್​ ದಂಪತಿಗೆ ಒಬ್ಬ ಪುತ್ರ ಸಹ ಇದ್ದಾನೆ. ಕಳೆದ ವರ್ಷ ಸ್ಟಾರ್​ ದಂಪತಿಯ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ ವದಂತಿ ಹಬ್ಬಿತ್ತು. ಪಾಕಿಸ್ತಾನದ ಮಾಧ್ಯಮಗಳಲ್ಲೂ ಇದು ದೊಡ್ಡ ಸುದ್ದಿಯಾಗಿತ್ತು. ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಎಂಬ ಚರ್ಚೆಯೂ ಇದೆ. ಆದರೆ ಅದಿನ್ನು ಅಧಿಕೃತವಾಗಿ ಬಹಿರಂಗವಾಗಿಲ್ಲ.

ಮೂಗುತಿ ಸುಂದರಿಯ ವೃತ್ತಿಜೀವನ:ಟೆನಿಸ್ ತಾರೆ ಸಾನಿಯಾ ಅನೇಕ ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಪ್ರಶಸ್ತಿಗಳನ್ನು ತಂದು ಕೊಟ್ಟಿದ್ದಾರೆ. ಆಸ್ಟ್ರೇಲಿಯನ್ ಓಪನ್ (2016), ವಿಂಬಲ್ಡನ್ (2015) ಮತ್ತು ಯುಎಸ್ ಓಪನ್ (2015) ಡಬಲ್ಸ್‌ನಲ್ಲಿ ಗೆದ್ದಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯನ್ ಓಪನ್ (2009), ಫ್ರೆಂಚ್ ಓಪನ್ (2012) ಮತ್ತು ಯುಎಸ್ ಓಪನ್ (2014) ಪ್ರಶಸ್ತಿಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.

ಟೆನಿಸ್‌ನಲ್ಲಿನ ಅವರ ಸಾಧನೆಗಾಗಿ ಭಾರತ ಸರ್ಕಾರ ಅರ್ಜುನ ಪ್ರಶಸ್ತಿ (2004), ಪದ್ಮಶ್ರೀ (2006), ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ (2015) ಮತ್ತು ಪದ್ಮಭೂಷಣ (2016) ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಓದಿ:ಅಥಿಯಾ ಶೆಟ್ಟಿ - ಕೆಎಲ್ ರಾಹುಲ್ ಮದುವೆ ದಿನಾಂಕ ಬಹಿರಂಗ: ಮುಂಬೈನಲ್ಲಿ ಅದ್ಧುರಿ ಮದುವೆಗೆ ಸಕಲ ಸಿದ್ಧತೆ

ABOUT THE AUTHOR

...view details