ಕರ್ನಾಟಕ

karnataka

ಪ್ರೊ ಕಬಡ್ಡಿ 10ನೇ ಆವೃತ್ತಿ: ಯು ಮುಂಬಾ ಪಲ್ಟಿ ಹೊಡಿಸಿದ ಪುಣೇರಿ ಪಲ್ಟನ್​ಗೆ ಎರಡನೇ ಗೆಲುವು

By ETV Bharat Karnataka Team

Published : Dec 9, 2023, 7:35 AM IST

ಪ್ರೊ ಕಬಡ್ಡಿ 10ನೇ ಆವೃತ್ತಿಯ ನಿನ್ನೆ (ಶುಕ್ರವಾರ) ನಡೆದ ಪಂದ್ಯದಲ್ಲಿ ಯು ಮುಂಬಾ ಮಣಿಸಿ ಪುಣೇರಿ ಪಲ್ಟನ್ ತಂಡವು ಎರಡನೇ ಜಯ ದಾಖಲಿಸಿತು.

Etv Bharat
Etv Bharat

ಬೆಂಗಳೂರು:ಯು ಮುಂಬಾ ತಂಡವನ್ನು 43- 32 ಅಂಕಗಳ ಅಂತರದಿಂದ ಸೋಲಿಸುವ ಮೂಲಕ ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್‌ ತಂಡ ತನ್ನ ಎರಡನೇ ಗೆಲುವು ದಾಖಲಿಸಿದೆ. ಶುಕ್ರವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 17 ರೈಡಿಂಗ್‌ಗಳಲ್ಲಿ 12 ಅಂಕಗಳನ್ನು ಗಳಿಸಿದ ಮೋಹಿತ್‌ ಗೋಯತ್ ಅವರು, ಪಲ್ಟನ್‌ ತಂಡದ ಅದ್ಭುತ ಜಯಕ್ಕೆ ಕಾರಣರಾದರು.

ಯು ಮುಂಬಾ ಮಣಿಸಿ ಎರಡನೇ ಜಯ ದಾಖಲಿಸಿದ ಪುಣೇರಿ ಪಲ್ಟನ್

ಈ ಋುತುವಿನ ಅತ್ಯಂತ ಕಠಿಣ ಕಾಳಗಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಪಂದ್ಯದಲ್ಲಿ, ಪುಣೇರಿ ಪಲ್ಟನ್‌ ತಂಡವು ಉತ್ತಮ ಆರಂಭವನ್ನು ಮಾಡಿದೆ. ಪಂದ್ಯದ ನಾಲ್ಕನೇ ರೈಡ್‌ನಲ್ಲಿ ಪಂಕಜ್‌ ಮೋಹಿತ್‌ ಪುಣೇರಿಗೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದರ ಹಿನ್ನೆಲೆ ಶೀಘ್ರದಲ್ಲೇ ಪುಣೇರಿ ಯು ಮುಂಬಾ ವಿರುದ್ಧ ಮೊದಲ ಆಲ್‌ಔಟ್‌ ಮಾಡಿ 13-6 ಮುನ್ನಡೆ ಸಾಧಿಸಿತು. ನಂತರವೂ ಸಹ ಪುಣೇರಿ ಪಲ್ಟನ್‌ ಆಟಗಾರರು ಎದುರಾಳಿಗಳ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಿದರು. ಮೊದಲಾರ್ಧದಲ್ಲಿ ಮುಂಬಾದ ವಿ. ವಿಶ್ವನಾಥ್‌ ಗಳಿಸಿದ ಸೂಪರ್‌ ಟ್ಯಾಕಲ್‌ 21-13 ಅಂಕಗಳ ಮುನ್ನಡೆ ಯು ಮುಂಬಾ ತಂಡದ ಹೈಲೈಟ್ ಎನಿಸಿತು. ಆದರೆ, ವಿರಾಮದ ನಂತರ ಪಟ್ಟುಬಿಡದೇ ಆಡಿದ ಪಲ್ಟನ್‌ ಒಂದು ಹಂತದಲ್ಲಿ 13 ಅಂಕಗಳ ಮುನ್ನಡೆ ಸಾಧಿಸಿತು.

ನಂತರ ಪುಣೇರಿ ಪಲ್ಟನ್‌ ಯಾವುದೇ ಹಂತದಲ್ಲೂಯು ಮುಂಬಾಗೆ ಪಂದ್ಯದಲ್ಲಿ ಮುನ್ನಡೆ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ. ಜೊತೆಗೆ ತಮ್ಮ ಆಲ್‌ರೌಂಡ್‌ನ ಅದ್ಭುತ ಪ್ರದರ್ಶನವನ್ನು ದ್ವಿಗುಣಗೊಳಿಸುತ್ತಾ ಸಾಗಿದ ಪಲ್ಟನ್ ಬೃಹತ್‌ ಮುನ್ನಡೆ ಕಾಪಾಡಿಕೊಂಡಿತು. ಪಂದ್ಯ ಮುಗಿಯಲು ಮೂರು ನಿಮಿಷಗಳು ಬಾಕಿ ಇರುವಾಗ ಯು ಮುಂಬಾ ವಿರುದ್ಧ ಎರಡನೇ ಆಲ್‌ ಔಟ್‌ ಸಾಧಿಸಿದ ಪಲ್ಟನ್ಸ್ 11 ಅಂಕಗಳ ಅಂತರದಿಂದ ಜಯ ಸಾಧಿಸಿತು.

ಯು ಮುಂಬಾ ಹಾಗೂ ಪುಣೇರಿ ಪಲ್ಟನ್ ಪಂದ್ಯದ ದೃಶ್ಯ

ಬೆಂಗಳೂರು ಬುಲ್ಸ್‌ಗೆ ಸತತ 3ನೇ ಸೋಲು: ನಿನ್ನೆ (ಶುಕ್ರವಾರ) ಬೆಂಗಳೂರಿನಲ್ಲಿ ಬುಲ್ಸ್ ತಂಡದ ಅಬ್ಬರ ಕಾಣಿಸಲಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಸೀಸನ್‌ 10ರಲ್ಲಿ‌ ನಡೆದ ಮ್ಯಾಚ್​ನಲ್ಲಿ ದಬಾಂಗ್‌ ಡೆಲ್ಲಿ ವಿರುದ್ಧ ಬೆಂಗಳೂರು ಬುಲ್ಸ್‌ ತಂಡ ಸೋಲು ಅನುಭವಿಸಿತು. ಈ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್‌ ಸತತ ಮೂರನೇ ಸೋತಿದೆ. ಅಹಮದಾಬಾದ್‌ನಲ್ಲಿ ನಡೆದ ಟೂರ್ನಿಯ ಮೊದಲ ಹಂತದ ಎರಡೂ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್‌ ಮುಗ್ಗರಿಸಿತ್ತು. ನಿನ್ನೆ ಕೂಡ ದಬಾಂಗ್‌ ಡೆಲ್ಲಿ ವಿರುದ್ಧ 31-38 ಅಂಕಗಳ ಅಂತರದಿಂದ ಬೆಂಗಳೂರು ಬುಲ್ಸ್‌ ತಂಡ ಸೋತಿದೆ.

ಪ್ರೊ ಕಬಡ್ಡಿ 10ನೇ ಆವೃತ್ತಿಯ ಇಂದಿನ ಪಂದ್ಯಗಳು:

  • ಪಂದ್ಯ 1: ಬೆಂಗಳೂರು ಬುಲ್ಸ್‌ V/s ಹರಿಯಾಣ ಸ್ಟೀಲರ್ಸ್‌ - ರಾತ್ರಿ 8 ಗಂಟೆ
  • ಪಂದ್ಯ 2: ಯುಪಿ ಯೋಧಾಸ್‌ V/s ತೆಲುಗು ಟೈಟಾನ್ಸ್‌ - ರಾತ್ರಿ 9 ಗಂಟೆ

ಇದನ್ನೂ ಓದಿ:ತವರಿನಲ್ಲಿ ಮುಗ್ಗರಿಸಿದ ಬೆಂಗಳೂರು ಬುಲ್ಸ್: ಡೆಲ್ಲಿಗೆ ಮೊದಲ ಜಯ

ABOUT THE AUTHOR

...view details