ಕರ್ನಾಟಕ

karnataka

ನೂತನ ಸಂಸತ್​ ಭವನದತ್ತ ಹೊರಟ ಕುಸ್ತಿಪಟುಗಳ ಬಂಧನ: ಪೊಲೀಸರಿಂದ ಪ್ರತಿಭಟನಾ ಸ್ಥಳ ತೆರವು

By

Published : May 28, 2023, 4:22 PM IST

ದೆಹಲಿಯಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದು, ಜಂತರ್​ ಮಂತರ್​ನಲ್ಲಿನ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿದ್ದಾರೆ.

Protesting wrestlers detained, Police clears protest site at Jantar Mantar
ನೂತನ ಸಂಸತ್​ ಭವನದತ್ತ ಪ್ರತಿಭಟನೆ ಹೊರಟಿದ್ದ ಕುಸ್ತಿಪಟುಗಳ ಬಂಧನ

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಸಂಬಂಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಖ್ಯಾತ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿ ಹಲವರನ್ನು ಇಂದು ದೆಹಲಿ ಪೊಲೀಸರು ಬಂಧಿಸಿದರು. ಮಹಿಳಾ ಸಮ್ಮಾನ್ ಮಹಾ ಪಂಚಾಯತ್​ ಹೆಸರಲ್ಲಿ ನೂತನ ಸಂಸತ್​ ಭವನದತ್ತ ತೆರಳುತ್ತಿದ್ದಾಗ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘಿಸಿದ ಆರೋಪದಲ್ಲಿ ಬಂಧಿಸಿದ್ದು, ಜಂತರ್​ ಮಂತರ್​ನಲ್ಲಿನ ಪ್ರತಿಭಟನಾ ಸ್ಥಳವನ್ನೂ ಪೊಲೀಸರು ತೆರವುಗೊಳಿಸಿದರು.

ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಏಪ್ರಿಲ್ 23ರಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಸಂಸತ್ತಿನತ್ತ ತೆರಳದಂತೆ ಪೊಲೀಸರು ಎಚ್ಚರಿಕೆ ನೀಡಿದ್ದರೂ ಪ್ರತಿಭಟನಾನಿರತ ಕುಸ್ತಿಪಟುಗಳು ಮುಂದೆ ಸಾಗಿದ್ದು ಗಲಾಟೆಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲೇ ಕುಸ್ತಿಪಟುಗಳು ಸೇರಿ ಇತರರನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೇ, ಎಲ್ಲರನ್ನೂ ಪೊಲೀಸರು ಬಸ್‌ಗಳಿಗೆ ಹತ್ತಿಸಿ ಅಜ್ಞಾತ ಸ್ಥಳಗಳಿಗೆ ಕರೆದೊಯ್ದರು.

ಮತ್ತೊಂದೆಡೆ, ತಕ್ಷಣವೇ ಪೊಲೀಸರು ಜಂತರ್​ ಮಂತರ್​ನಲ್ಲಿನ ಕುಸ್ತಿಪಟುಗಳ ಇತರ ಸಾಮಗ್ರಿಗಳೊಂದಿಗೆ ಮಂಚಗಳು, ಹಾಸಿಗೆಗಳು, ಕೂಲರ್‌ಗಳು, ಫ್ಯಾನ್‌ಗಳು ಮತ್ತು ಆಶ್ರಯಕ್ಕೆ ಬಳಕೆ ಮಾಡಿದ್ದ ಟಾರ್ಪಾಲಿನ್ ತೆಗೆದು ಹಾಕುವ ಮೂಲಕ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಲು ಪ್ರಾರಂಭಿಸಿದರು. ಇದೇ ವೇಳೆ ಇನ್ನು ಮುಂದೆ ಕುಸ್ತಿಪಟುಗಳನ್ನು ಪ್ರತಿಭಟನಾ ಸ್ಥಳಕ್ಕೆ ಮರಳಿ ಬರಲು ಅನುಮತಿಸುವ ಸಾಧ್ಯತೆ ಇಲ್ಲ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಪೊಲೀಸ್​ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ತಳ್ಳಾಟ - ನೂಕಾಟ: ಇದಕ್ಕೂ ಮುನ್ನ ವಿನೇಶ್ ಫೋಗಟ್​, ಸಂಗೀತಾ ಫೋಗಟ್ ಮತ್ತು ಸಾಕ್ಷಿ ಮಲಿಕ್​ ಬ್ಯಾರಿಕೇಡ್‌ಗಳನ್ನು ತಳ್ಳಿ ಮುಂದೆ ಸಾಗಲು ಪ್ರಯತ್ನಿಸಿದರು. ಆಗ ಕುಸ್ತಿಪಟುಗಳು ಮತ್ತು ಪೊಲೀಸ್ ಅಧಿಕಾರಿಗಳು ನಡುವೆ ಪರಸ್ಪರ ತಳ್ಳಾಟ, ನೂಕಾಟ ಉಂಟಾಗಿ ಜಂತರ್ ಮಂತರ್‌ನಲ್ಲಿ ಅಸಹಜ ಸ್ಥಿತಿ ಉಂಟಾದ ದೃಶ್ಯಗಳು ಕಂಡುಬಂದವು. ಇದೇ ಸಂದರ್ಭದಲ್ಲಿ ವಿನೇಶ್ ಫೋಗಟ್ ತಮ್ಮ ಬಂಧನವನ್ನು ಬಲವಾಗಿ ಪ್ರತಿರೋಧಿಸಲು ಯತ್ನಿಸಿದರು. ಸಂಗೀತಾ ಹಾಗೂ ವಿನೇಶ್ ರಸ್ತೆ ಮೇಲೆಯೇ ಮಲಗಿದರು. ಆಗ ಪೋಲೀಸ್ ಅಧಿಕಾರಿಗಳು ಕುಸ್ತಿಪಟುಗಳು ಮತ್ತವರ ಬೆಂಬಲಿಗರನ್ನು ಎಳೆದು ಬಸ್‌ಗಳಿಗೆ ಏರಿಸಿದರು.

ಪೊಲೀಸರು ಬಂಧಿಸಿ ಬಸ್​ ಹತ್ತಿಸುವ ಸಂದರ್ಭದಲ್ಲಿ ಕಣ್ಣೀರು ಹಾಕಿದ ವಿನೇಶ್ ಫೋಗಟ್, ನ್ಯಾಯಕ್ಕಾಗಿ ಬೇಡಿಕೆಯಿಟ್ಟಿದ್ದಕ್ಕಾಗಿ ಶಿಕ್ಷೆ ಅನುಭವಿಸುತ್ತಿದ್ದೇವೆ. ಆರೋಪಿಯು ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ. ಆತನಿಗೆ ಸರ್ಕಾರವು ಆಶ್ರಯ ನೀಡುತ್ತಿದೆ. ದೇಶಕ್ಕಾಗಿ ಪದಕಗಳನ್ನು ಗೆದ್ದ ನಮ್ಮನ್ನು ಈಗ ಜೈಲಿಗೆ ಹಾಕಲಾಗುತ್ತಿದೆ ಎಂದು ದೂರಿದರು. ಬಜರಂಗ್ ಮತ್ತು ವಿನೇಶ್ ಇತರರನ್ನು ಬಂಧಿಸುವಾಗ ಬ್ರಿಜ್ ಭೂಷಣ್ ಅವರ ಅಧಿಕೃತ ನಿವಾಸ ಕೇವಲ ಕೇವಲ ಮೀಟರ್ ದೂರದಲ್ಲಿತ್ತು.

ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಪೊಲೀಸ್​ ಆಯುಕ್ತ ದೇವೇಂದ್ರ ಪಾಠಕ್ ಪ್ರತಿಕ್ರಿಯಿಸಿ, ''ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕುಸ್ತಿಪಟುಗಳನ್ನು ಬಂಧಿಸಲಾಗಿದೆ. ನಾವು ಸೂಕ್ತ ಸಮಯದಲ್ಲಿ ವಿಚಾರಣೆಯ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ'' ಎಂದು ಹೇಳಿದರು. ಅಲ್ಲದೇ, ''ನಾವು ಸಂಪೂರ್ಣ ಪರಿಸ್ಥಿತಿಯನ್ನು ನಿರ್ಣಯಿಸಬೇಕಾಗಿದೆ. ಮುಂದೆ ಸಾಗದಂತೆ ನಾವು ವಿನಂತಿ ಮಾಡಿದರೂ ಬ್ಯಾರಿಕೇಡ್‌ಗಳನ್ನು ಮುರಿಯಲು ಯತ್ನಿಸಿದರು. ಆದ್ದರಿಂದ ನಾವು ತೆರವುಗೊಳಿಸಬೇಕಾಯಿತು'' ಎಂದು ತಿಳಿಸಿದರು.

ಈ ಮೊದಲೇ ದೇವೇಂದ್ರ ಪಾಠಕ್ ಯಾವುದೇ ಆಂದೋಲನ ಅಥವಾ ಮೆರವಣಿಗೆ ಕೈಗೊಳ್ಳದಂತೆ ಕುಸ್ತಿಪಟುಗಳಿಗೆ ಮನವಿ ಮಾಡಿದ್ದರು. "ಇಂದು ನಮ್ಮ ಹೊಸ ಸಂಸತ್ತಿನ ಉದ್ಘಾಟನೆ. ಇದು ನಮ್ಮ ದೇಶಕ್ಕೆ ಮಹತ್ವದ ದಿನ ಮತ್ತು ಹೆಮ್ಮೆಯ ಕ್ಷಣವಾಗಿದೆ. ಆದ್ದರಿಂದ ಇವತ್ತು ಯಾವುದೇ ರೀತಿಯ ಆಂದೋಲನ ಅಥವಾ ಮೆರವಣಿಗೆ ಮಾಡಬಾರದು. ಯಾವುದೇ ರೀತಿಯಲ್ಲಿ ಯಾವುದೇ ಲೋಪ ಉಂಟಾಗುವುದನ್ನು ಬಿಡುವುದಿಲ್ಲ. ನಾವು ನಮ್ಮ ಅಥ್ಲೀಟ್‌ಗಳನ್ನು ಗೌರವಿಸುತ್ತೇವೆ ಮತ್ತು ಪ್ರೀತಿಸುತ್ತೇವೆ. ಆದರೆ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ'' ಎಂದು ಅವರು ಹೇಳಿದ್ದರು. ಮಹಾ ಪಂಚಾಯತ್​ಗೆ ಕುಸ್ತಿಪಟುಗಳು ಕರೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಜಂತರ್ ಮಂತರ್​ನಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದರು.

ಇದನ್ನೂ ಓದಿ:WFI ಲೈಂಗಿಕ ಕಿರುಕುಳ ಪ್ರಕರಣ: ನಾರ್ಕೋ ಪರೀಕ್ಷೆಗೆ ನಾವು ಸಿದ್ಧರಿದ್ದೇವೆ - ಬಜರಂಗ್ ಪುನಿಯಾ

ABOUT THE AUTHOR

...view details