ಕರ್ನಾಟಕ

karnataka

ಜಾವೆಲಿನ್‌ ಥ್ರೋಗೆ ವರ್ಚಸ್ಸು ತಂದುಕೊಟ್ಟ 'Neeraj Chopra': ಯುವ ಕ್ರೀಡಾಪಟುಗಳಿಗೆ ಪ್ರೇರಣೆ

By ETV Bharat Karnataka Team

Published : Aug 30, 2023, 7:24 AM IST

Neeraj Chopra ಅವರ ಸಾಲು ಸಾಲು ಸಾಧನೆಗಳಿಂದಾಗಿ ಇಂದು ಹರಿಯಾಣದಲ್ಲಿ ಅಥ್ಲೆಟಿಕ್ಸ್‌ಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

Neeraj Chopra
ನೀರಜ್ ಚೋಪ್ರಾ

ಪಾಣಿಪತ್ (ಹರಿಯಾಣ):ಕ್ರೀಡಾ ಪಟುಗಳ ವಿಷಯಕ್ಕೆ ಬಂದರೆ ಹರಿಯಾಣದ ಹೆಸರನ್ನು ಹೆಮ್ಮೆಯಿಂದ ಹೇಳಲಾಗುತ್ತದೆ. ಭಿವಾನಿಯ ಬಾಕ್ಸರ್‌ಗಳು ಇಲ್ಲಿ ಪ್ರಮುಖವಾಗಿ ಕಂಡು ಬರುತ್ತಾರೆ. ಮೊದಲು ಈ ರಾಜ್ಯ ಕುಸ್ತಿ ಮತ್ತು ಬಾಕ್ಸಿಂಗ್‌ಗೆ ಹೆಸರುವಾಸಿಯಾಗಿತ್ತು. ಇದೀಗ ರಾಜ್ಯದ ಆಟಗಾರರು ಇತರ ಕ್ರೀಡೆಗಳಲ್ಲಿ ಇತಿಹಾಸ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಒಲಿಂಪಿಕ್ ಚಾಂಪಿಯನ್, ಸ್ಟಾರ್ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ.

ಸೋಮವಾರ(ಆ.28) ಬೆಳ್ಳಂಬೆಳಗ್ಗೆ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಮತ್ತೊಂದು ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಭಾರತಕ್ಕೆ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ನ ಜಾವೆಲಿನ್‌ ಥ್ರೋನಲ್ಲಿ ಅವರು ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. 88.17 ಮೀ. ದೂರ ಥ್ರೋ ಮಾಡಿ ದಾಖಲೆ ಬರೆದರು. ಇದರೊಂದಿಗೆ ನೀರಜ್ ಚೋಪ್ರಾ ಅವರು ಎಲ್ಲ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸ್ವರ್ಣ ಗೆದ್ದ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ನೀರಜ್ ಅವರ ಈ ಸಾಲು ಸಾಲು ಸಾಧನೆಗಳಿಂದಾಗಿ ಇಂದು ದೇಶದಲ್ಲಿ ಅಥ್ಲೆಟಿಕ್ಸ್‌ಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮುಖ್ಯವಾಗಿ ಮಕ್ಕಳು ಒಲಿಂಪಿಕ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹೆಚ್ಚುತ್ತಿರುವ ಜಾವೆಲಿನ್ ಕ್ರೇಜ್: ನೀರಜ್ ಚೋಪ್ರಾ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಾಗಿನಿಂದ, ಹರಿಯಾಣದಲ್ಲಿ ಜಾವೆಲಿನ್ ಅಭ್ಯಾಸ ಮಾಡುವ ಆಟಗಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಪಾಣಿಪತ್ ಜಿಲ್ಲೆಯಿಂದ ಹೆಚ್ಚಿನ ಜಾವೆಲಿನ್ ಆಟಗಾರರು ಬರುತ್ತಿದ್ದಾರೆ. ಯುವಕರು ಮಾತ್ರವಲ್ಲದೇ, ವೃದ್ಧರೂ ಕೂಡ ಜಾವಲಿನ್ ಎಸೆತಕ್ಕೆ ದಾಸರಾಗುತ್ತಿದ್ದಾರೆ. ಪಾಣಿಪತ್‌ನ 80 ವರ್ಷದ ವೃದ್ಧೆ 'ದರ್ಶನಾ ದೇವಿ' ಅವರು ವಿಶ್ವ ಮಾಸ್ಟರ್ ಅಥ್ಲೀಟ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ದರ್ಶನಾ ದೇವಿ ಸ್ಥಳೀಯ ಕ್ರೀಡಾಂಗಣದಲ್ಲಿ ದಿನಕ್ಕೆ ಎರಡು ಬಾರಿ ಅಭ್ಯಾಸ ಮಾಡುತ್ತಾರೆ. ನೀರಜ್ ಚೋಪ್ರಾ ಅಭ್ಯಾಸ ನಡೆಸಿದ ಕ್ರೀಡಾಂಗಣ ಈಗ ಉದಯೋನ್ಮುಖ ಕ್ರೀಡಾಪಟುಗಳಿಂದ ತುಂಬಿದೆ. ಕೆಲವು ಆಟಗಾರರು ಈ ಹಿಂದೆ ಕ್ರಿಕೆಟ್, ಕುಸ್ತಿ ಮತ್ತು ಬಾಕ್ಸಿಂಗ್ ಆಡುತ್ತಿದ್ದರು. ಆದರೆ, ನೀರಜ್ ಚೋಪ್ರಾ ಅವರ ಯಶಸ್ಸನ್ನು ನೋಡಿ ಅವರು ಜಾವೆಲಿನ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಜೂನಿಯರ್ ವಿಶ್ವ ಚಾಂಪಿಯನ್ ಆಗಿ ಖ್ಯಾತಿ ಗಳಿಸಿದ 25 ವರ್ಷದ ನೀರಜ್ ಚೋಪ್ರಾ ಪಾಣಿಪತ್ ಜಿಲ್ಲೆಯ ಖಂಡ್ರಾ ಗ್ರಾಮದ ನಿವಾಸಿ. ಇಲ್ಲಿನ ಶಿವಾಜಿ ಸ್ಟೇಡಿಯಂನಲ್ಲಿ ಕ್ರೀಡೆಯ ಅಭ್ಯಾಸ ಆರಂಭಿಸಿದರು. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಕ್ರೀಡಾಕೂಟ, 2021ರಲ್ಲಿ ಟೋಕಿಯೊ ಒಲಿಂಪಿಕ್ ಕೂಟ, ಡೈಮಂಡ್ ಲೀಗ್ ಕೂಟಗಳಲ್ಲಿ ಇವರು ಸ್ಫರ್ಧಿಸಿ ಜಯಿಸಿದ್ದಾರೆ. ಯುರೋಪ್‌ ದೇಶಗಳ ಬಲಾಢ್ಯ ಅಥ್ಲೀಟ್‌ಗಳ ಪೈಪೋಟಿ ಮೀರಿ ನಿಂತು ಮಾಡಿದ ಈ ಸಾಧನೆ ಅದ್ಭುತವೇ ಸರಿ. ಹಲವು ದಶಕಗಳಿಂದ ಒಲಿಂಪಿಕ್ಸ್‌ ಮತ್ತು ವಿಶ್ವ ಟ್ರ್ಯಾಕ್‌ ಮತ್ತು ಫೀಲ್ಡ್‌ ಸ್ಪರ್ಧೆಗಳಲ್ಲಿ ಭಾರತದ ಅಥ್ಲೀಟ್‌ಗಳಿಗೆ ಪದಕ ಒಲಿದಿರುವುದು ವಿರಳ. ಆದರೆ, ಈಗ ನೀರಜ್ ತಮ್ಮ ಸಾಧನೆಗಳಿಂದ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಈ ಸಾಧನೆಗೆ ಅವರ ಸಿದ್ಧತೆ, ಬದ್ಧತೆ, ಪರಿಶ್ರಮವೇ ಕಾರಣ. ನಿರಂತರ ಸಾಧನೆಯ ತುಡಿತ ಅವರಲ್ಲಿತ್ತು. ಎಲ್ಲ ಕ್ರೀಡಾಪಟುಗಳು ಅವರಿಂದ ಕಲಿಯಬೇಕಾದ ಗುಣಗಳು ಇವು ಎಂಬುದರಲ್ಲಿ ಸಂಶಯವಿಲ್ಲ. ಇದಕ್ಕೆ ಖಂಡ್ರಾ ಗ್ರಾಮದ 70ಕ್ಕೂ ಹೆಚ್ಚು ಯುವಕರು ಒಲಿಂಪಿಕ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದು ಸಾಕ್ಷಿ. ಹರಿಯಾಣದ ಇತರ ಜಿಲ್ಲೆಗಳಲ್ಲಿನ ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚುತ್ತಿದೆ.

"ನಾನು ಈ ಹಿಂದೆ ವಿಭಿನ್ನ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದೆ. ನೀರಜ್ ಚೋಪ್ರಾ ಅವರ ಸಾಧನೆ ನೋಡಿ ಈಗ ಜಾವೆಲಿನ್ ಅಭ್ಯಾಸ ಮಾಡಲು ಪ್ರಾರಂಭಿಸಿದೆ. ಪಾಣಿಪತ್‌ನಲ್ಲಿ ಉತ್ತಮ ತರಬೇತುದಾರರು ಇದ್ದಾರೆ. ಅವರಿಗೆ ಸರ್ಕಾರದಿಂದ ಉತ್ತಮ ಸೌಲಭ್ಯಗಳನ್ನು ಸಹ ನೀಡಲಾಗುತ್ತಿದೆ. ಇದರಿಂದ ನಮಗೆ ಅನುಕೂಲವಾಗುತ್ತಿದೆ" ಎಂದು ಶಿವಾಜಿ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುತ್ತಿರುವ ಕ್ರೀಡಾಪಟು ರೋಮಿತ್ ಹೇಳಿದರು.

"ಉತ್ತಮ ಅಥ್ಲೀಟ್ ಆಗಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಮಗುವು 10ನೇ ವಯಸ್ಸಿನಲ್ಲಿ ಕ್ರೀಡಾ ಅಭ್ಯಾಸ ಆರಂಭಿಸಿದರೆ ಉತ್ತಮ. ಇದರಿಂದ ಆಟಗಾರ ಉತ್ತಮ ಪ್ರದರ್ಶನ ನೀಡಬಲ್ಲನು. ಮೊದಲು ಜಾವೆಲಿನ್ ಎಸೆತದ ಬಗ್ಗೆ ಕೆಲವೇ ಜನರಿಗೆ ತಿಳಿದಿತ್ತು. ಇಂದು ಪ್ರತಿ ಮಗು ನೀರಜ್ ಚೋಪ್ರಾ ಆಗಬೇಕು ಎಂಬ ಕನಸು ಕಾಣುತ್ತಿದೆ. 10 ರಿಂದ 14 ವರ್ಷದೊಳಗಿನ ಹಲವಾರು ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ" ಎಂದು ನೀರಜ್ ಅವರ ಫಿಟ್ನೆಸ್ ತರಬೇತುದಾರರಾಗಿದ್ದ ಜಿತೇಂದ್ರ ಜಗ್ಲಾನ್ ಹೇಳಿದರು.

ಹರಿಯಾಣದ ಹಳ್ಳಿಯೊಂದರಿಂದ ಬಂದ ನೀರಜ್‌ ಇವತ್ತು ವಿಶ್ವದ ಅಗ್ರಮಾನ್ಯ ಅಥ್ಲೀಟ್‌ ಆಗಿ ಬೆಳೆದಿದ್ದು ಸಣ್ಣ ಸಾಧನೆಯೇನಲ್ಲ. ನೀರಜ್ ಸಾಧನೆಯಿಂದ ದೇಶದೆಲ್ಲೆಡೆ ಸಂತಸದ ಹೊನಲು ಹರಿದಿದೆ. ಜಾವೆಲಿನ್ ಥ್ರೋ ಕ್ರೀಡೆಗೆ ವರ್ಚಸ್ಸು ತಂದುಕೊಟ್ಟ ಶ್ರೇಯಸ್ಸು ಅವರಿಗೆ ಸಲ್ಲಬೇಕು. ದೇಶದ ಕ್ರೀಡಾಕ್ಷೇತ್ರ ಮತ್ತಷ್ಟು ಸದೃಢವಾಗಿ ಬೆಳೆಯಲು ಅವರ ಸಾಧನೆ ಪ್ರೇರಣೆ ಎಂದರೆ ಅತಿಶಯೋಕ್ತಿಯಲ್ಲ.

ಇದನ್ನೂ ಓದಿ:ಜಾವೆಲಿನ್ ಥ್ರೋನಲ್ಲಿ ಭಾರತಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನದ ಪದಕ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​ನಲ್ಲಿ ಚೋಪ್ರಾ ಭರ್ಜರಿ ಸಾಧನೆ..

ABOUT THE AUTHOR

...view details