ಕರ್ನಾಟಕ

karnataka

ವಿಶ್ವ ಚೆಸ್​ ಟಾಪ್​​ 9 ಶ್ರೇಯಾಂಕ ಪಡೆದ ಡಿ ಗುಕೇಶ್​​: ವಿಶ್ವನಾಥನ್ ಆನಂದ್​ರನ್ನೇ ಮೀರಿಸಿದ 17ರ ಪೋರ

By

Published : Aug 4, 2023, 1:11 PM IST

Updated : Aug 4, 2023, 1:18 PM IST

ವಿಶ್ವ ಚೆಸ್​ ಶ್ರೇಯಾಂಕದಲ್ಲಿ ಡಿ ಗುಕೇಶ್ ಅವರು ವಿಶ್ವನಾಥನ್ ಆನಂದ್ ಮತ್ತು ಪೆಂಟಾಲ ಹರಿಕೃಷ್ಣ ನಂತರ ಟಾಪ್​ 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

D Gukesh
ವಿಶ್ವ ಚೆಸ್​ ಟಾಪ್​​ 9 ಶ್ರೇಯಾಂಕ ಪಡೆದ ಡಿ ಗುಕೇಶ್

ನವದೆಹಲಿ : ಚೆಸ್​ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರನ್ನು ವಿಶ್ವ ಚೆಸ್​​ ಶ್ರೇಯಾಂಕದಲ್ಲಿ ಹಿಂದಿಕ್ಕುವ ಮೂಲಕ 17 ವರ್ಷದ ಡಿ. ಗುಕೇಶ್ ಅವರು ಗಮನ ಸೆಳೆದಿದ್ದಾರೆ. ಈ ಮೂಲಕ ಚೆಸ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಗುಕೇಶ್​ ಅವರ ಸಾಧನೆಗೆ ಮೆಚ್ಚಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆದ ಫಿಡೆ (FIDE) ವಿಶ್ವಕಪ್‌ನ ಎರಡನೇ ಸುತ್ತಿನಲ್ಲಿ ಮಿಸ್ಟ್ರಾಡಿನ್ ಇಸ್ಕಂದರೋವ್ ಅವರನ್ನು ಸೋಲಿಸಿದ ಗುಕೇಶ್, ಕ್ಲಾಸಿಕ್ ಓಪನ್ ವಿಭಾಗದಲ್ಲಿ ವಿಶ್ವದ 9ನೇ ಶ್ರೇಯಾಂಕ ಪಡೆದುಕೊಂಡರು. ಲೈವ್​ ರೇಟಿಂಗ್​ನಲ್ಲಿ ಗುಕೇಶ್​ 2755.9 ಅಂಕ ಗಳಿಸಿದರು. ಇದರಿಂದ 2754.0 ಅಂಕವನ್ನು ಹೊಂದಿರುವ ಚೆಸ್​ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ 10ನೇ ಶ್ರೇಯಾಂಕ ಇಳಿದಿದ್ದಾರೆ. ಭಾರತದ ಗುಕೇಶ್​ ತಮ್ಮ ಗುರು ಆನಂದ್​ ಅವರನ್ನೇ ಶ್ರೇಯಾಂಕದಲ್ಲಿ ಮೀರಿಸಿ ದಾಖಲೆ ಮಾಡಿದ್ದಾರೆ. 1986ರ ನಂತರ ಆನಂದ್ ಅವರು ಎರಡನೇ ಬಾರಿ ನೇರ ವಿಶ್ವ ಶ್ರೇಯಾಂಕನಲ್ಲಿ ಕುಸಿತ ಕಂಡಿದ್ದಾರೆ.

ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (ಐಸಿಎಫ್) ಈ ಬಗ್ಗೆ ಟ್ವೀಟ್ ಮಾಡಿ ಗುಕೇಶ್​ ಅವರಿಗೆ ಶುಭಾಶಯ ತಿಳಿಸಿದೆ. "ಗುಕೇಶ್ ಡಿ ಇಂದು ಮತ್ತೊಮ್ಮೆ ಗೆದ್ದಿದ್ದಾರೆ ಮತ್ತು ಲೈವ್ ರೇಟಿಂಗ್‌ನಲ್ಲಿ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ. ಸೆಪ್ಟೆಂಬರ್ 1ರಂದು ಮುಂದಿನ ಅಧಿಕೃತ FIDE ರೇಟಿಂಗ್ ಪಟ್ಟಿ ಬಿಡುಗಡೆ ಆಗಲಿದ್ದು, ಯುವ ಆಟಗಾರ ಇನ್ನಷ್ಟೂ ಏರಿಕೆ ಕಾಣಲಿದ್ದಾರೆ. ವಿಶ್ವದ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಆಟಗಾರರಾಗಲಿದ್ದಾರೆ" ಎಂದಿದೆ.

ಡಿ.ಗುಕೇಶ್ ಅವರ ಅತ್ಯುತ್ತಮ ಪ್ರದರ್ಶನದ ಮೂಲಕ ಚೆಸ್ ಜಗತ್ತಿನಲ್ಲಿ ಗಮನ ಸೆಳೆಯುತ್ತಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಅಜರ್ಬೈಜಾನಿ ಅವರನ್ನು ಎದುರಿಸಲಿದ್ದಾರೆ. ಈ ಮುಖಾಮುಖಿಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಈ ಮಹತ್ವದ ಪಂದ್ಯದಲ್ಲಿ ಡ್ರಾ ಸಾಧಿಸಿದರೆ ಎರಡನೇ ಸುತ್ತಿಗೆ ಮುನ್ನಡೆಯಲಿದ್ದಾರೆ. ವಿಶ್ವನಾಥನ್ ಆನಂದ್ ಮತ್ತು ಪೆಂಟಾಲ ಹರಿಕೃಷ್ಣ ನಂತರ ವಿಶ್ವದ ಟಾಪ್ 10ರೊಳಗೆ ಸ್ಥಾನ ಪಡೆದ ಮೂರನೇ ಭಾರತೀಯ ಆಟಗಾರ ಎಂಬ ಖ್ಯಾತಿ ಗುಕೇಶ್​​ರದ್ದಾಗಿದೆ.

ಗುಕೇಶ್​ಗೆ ಅಭಿನಂದನೆ ಸಲ್ಲಿಸಿದ ಎಂಕೆ ಸ್ಟಾಲಿನ್​​:ಶ್ರೇಯಾಂಕದಲ್ಲಿ ಟಾಪ್​ 10 ಪಟ್ಟಿಯನ್ನು ಪ್ರವೇಶಿಸಿ ದಾಖಲೆ ಬರೆದ ಯುವ ಆಟಗಾರನನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಭಿನಂದಿಸಿದ್ದಾರೆ. ಟ್ವೀಟ್​ ಮಾಡಿರುವ ಸಿಎಂ,"ಮೊದಲ ಬಾರಿಗೆ ವಿಶ್ವದ ಅಗ್ರ 10 (FIDE) ಶ್ರೇಯಾಂಕಕ್ಕೆ ಪ್ರವೇಶಿಸಿದ ಅದ್ಭುತ ಸಾಧನೆಗಾಗಿ ಗ್ರ್ಯಾಂಡ್ ಮಾಸ್ಟರ್ @DGukeshಗೆ ಅಭಿನಂದನೆಗಳು. ನಿಮ್ಮ ನಿರ್ಣಯ ಮತ್ತು ಕೌಶಲ್ಯವು ನಿಮ್ಮನ್ನು ಚೆಸ್‌ನ ಉನ್ನತ ಶ್ರೇಣಿಗೆ ಕೊಂಡೊಯ್ದು, ನಿಮ್ಮನ್ನು ಅತ್ಯುನ್ನತ ಭಾರತೀಯ ಆಟಗಾರನನ್ನಾಗಿ ಮಾಡಿದೆ. ಈ ಸಾಧನೆಯು ಎಲ್ಲೆಡೆ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದೆ ಮತ್ತು ತಮಿಳುನಾಡಿಗೆ ಹೆಮ್ಮೆಯ ಕ್ಷಣವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ನಿವೃತ್ತ ಐಪಿಎಸ್​ ಅಧಿಕಾರಿ ವಿರುದ್ಧ ಧೋನಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಆ. 31ಕ್ಕೆ ಮುಂದೂಡಿಕೆ

Last Updated :Aug 4, 2023, 1:18 PM IST

ABOUT THE AUTHOR

...view details