ನವದೆಹಲಿ: ಇಲ್ಲಿನ ಜಂತರ್ ಮಂತರ್ನಲ್ಲಿ ಕುಸ್ತಿಪಟುಗಳು ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ, ಅವರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು 29ನೇ ದಿನಕ್ಕೆ ತಲುಪಿದೆ. ಈ ನಡುವೆ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ನಾರ್ಕೋ ಟೆಸ್ಟ್ ಕುರಿತು ಹೇಳಿದ್ದಕ್ಕೆ ಪತ್ರಿಕಾಗೋಷ್ಠಿ ನಡೆಸಿ ಕುಸ್ತಿಪಟುಗಳು ಪ್ರತಿಕ್ರಿಯಿಸಿದ್ದಾರೆ.
ಕುಸ್ತಿಪಟು ಬಜರಂಗ್ ಪುನಿಯಾ ಮಾತನಾಡಿ, 'ಈ ಪರೀಕ್ಷೆಗೆ ನಾವು ಸಿದ್ಧರಿದ್ದೇವೆ ಮತ್ತು ಇದು ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿರಬೇಕು. ನಾರ್ಕೋ ಪರೀಕ್ಷೆಯನ್ನು ಮಾಡಲು ನಾವೆಲ್ಲರೂ ಸಿದ್ಧರಿದ್ದೇವೆ, ಆದರೆ, ಈ ಪರೀಕ್ಷೆಯನ್ನು ಇಡೀ ದೇಶವೇ ನೋಡುವಂತೆ ಲೈವ್ ಆಗಬೇಕು ಎಂದು ಅವರು ಈ ವೇಳೆ ಒತ್ತಾಯಿಸಿದ್ದಾರೆ.
ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಮಾತನಾಡಿ, ಇದರೊಂದಿಗೆ ದೂರು ನೀಡಿರುವ ಬಾಲಕಿಯರು ಕೂಡ ನಾರ್ಕೋ ಟೆಸ್ಟ್ ಮಾಡಿಸಿಕೊಳ್ಳಬೇಕು. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಸ್ಟಾರ್ ಎಂದು ಬಿಂಬಿಸಬಾರದು. ನಾರ್ಕೋ ಟೆಸ್ಟ್ ಮಾಡಿಸುವ ಬಗ್ಗೆ ಮೊದಲು ನಾವು ಕೇಳಿದ್ದೆವು ಈ ಅವರು ಅದನ್ನೇ ಹೇಳಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ಹೀರೋ ಎಂಬಂತೆ ಬಿಂಬಿಸಬೇಡಿ. ಅವರ ಮೇಲೆ ಅತ್ಯಾಚಾರದ ಆರೋಪ ಇದೆ ಎಂದು ಹೇಳಿದರು.
ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್, ನಾವು ಇಲ್ಲಿ ಪ್ರತಿಭಟನೆ ನಡೆಸಲು ಪ್ರಾರಂಭಿಸಿ ಒಂದು ತಿಂಗಳಾಗಿದೆ. ಆದರೆ, ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿಭಟನೆಯ ಒಂದು ತಿಂಗಳು ಪೂರ್ಣಗೊಂಡ ನಂತರ, ನಾವು ಮಂಗಳವಾರ ಸಂಜೆ 5 ಗಂಟೆಗೆ ಇಂಡಿಯಾ ಗೇಟ್‌ನಲ್ಲಿ ಕ್ಯಾಂಡಲ್ ಮಾರ್ಚ್ ನಡೆಸುತ್ತೇವೆ. ನೂತನ ಸಂಸತ್ತಿನ ಉದ್ಘಾಟನೆಗೂ ಮುನ್ನ ಮಹಿಳಾ ಸಂಸದರು ಸಭೆ ನಡೆಸಿ ಕುಸ್ತಿಪಟುಗಳ ಪರ ಧ್ವನಿ ಎತ್ತಬೇಕು ಎಂದು ಹೇಳುತ್ತೇವೆ ಎಂದರು.