ಕರ್ನಾಟಕ

karnataka

Road Safety World Series: ಪಾಕಿಸ್ತಾನವೂ ಭಾಗವಹಿಸುವ ಸಾಧ್ಯತೆ.. ಮತ್ತೆ ಶೋಯೆಬ್, ವಾಸಿಂ ಅಕ್ರಮ್ ವಿರುದ್ಧ ಆಡಲಿದ್ದಾರೆ ಸಚಿನ್

By

Published : Aug 5, 2023, 9:05 PM IST

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಮೂರನೇ ಆವೃತ್ತಿ ನಡೆಯಲಿದ್ದು, ಈ ವರ್ಷ ಪಾಕಿಸ್ತಾನ ತಂಡವೂ ಸೇರಿಕೊಳ್ಳುವ ಸಾಧ್ಯತೆ ಇದೆ.

Road Safety World Series
Road Safety World Series

ನವದೆಹಲಿ: ಭಾರತದ ಶ್ರೇಷ್ಠ ಬ್ಯಾಟರ್​ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಟದ ಅಭಿಮಾನಿಗಳಿಗೆ ಹಾಗೇ ಲೆಜೆಂಡ್​ ಆಡಗಾರರ ಕ್ರಿಕೆಟ್​ ನೋಡಲು ಇಷ್ಟ ಪಡುವ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಕ್ರಿಕೆಟ್​ ದೇವರು ಎಂದೇ ಖ್ಯಾತರಾಗಿರುವ ಸಚಿನ್ ಮತ್ತೊಮ್ಮೆ ಮೈದಾನಕ್ಕಿಳಿದು ಬ್ಯಾಟ್​ ಹಿಡಿಯಲಿದ್ದಾರೆ. ಅರೆ.. ನಿವೃತ್ತಿ ಆಗಿ ಬಹಳಾ ವರ್ಷ ಆಗಿದೆ ಈಗ ಭಾರತ ತಂಡಕ್ಕೆ ಮತ್ತೆ ಆಡುತ್ತಾರಾ? ಇಲ್ಲ.

ಕಳೆದ ಕೆಲ ವರ್ಷಗಳಿಂದ ಆಡಿಸಲಾಗುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಮೂರನೇ ಆವೃತ್ತಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್‌ನಲ್ಲಿ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ ಸೆಪ್ಟೆಂಬರ್‌ ತಿಂಗಳು ನಡೆಯಲಿದೆ. ತೆಂಡೂಲ್ಕರ್ ಈ ಸರಣಿಯಲ್ಲಿ ಆಡುವುದನ್ನು ಕಾಣಬಹುದು. ನವೆಂಬರ್ 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ತೆಂಡೂಲ್ಕರ್ ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಆಡುತ್ತಿದ್ದಾರೆ. ಕೊನೆಯ ಎರಡು ಸೀಸನ್‌ಗಳಲ್ಲಿ ಇಂಡಿಯಾ ಲೆಜೆಂಡ್ಸ್ ತಂಡಕ್ಕಾಗಿ ಬ್ಯಾಟ್​ ಬೀಸಿದ್ದಾರೆ.

ಪಾಕಿಸ್ತಾನವೂ ಭಾಗವಹಿಸುವ ಸಾಧ್ಯತೆ:ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್​ನಲ್ಲಿ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್​ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ಈ ಮಾಜಿ ಅನುಭವಿಗಳು ಟಿ20 ಲೀಗ್​ನಲ್ಲಿ ಜಾಗೃತಿಗಾಗಿ ಬ್ಯಾಟ್​ ಬೀಸಲಿದ್ದಾರೆ. 2023ರಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ತಂಡ ಕೂಡ ಈ ಸರಣಿಯಲ್ಲಿ ಭಾಗವಹಿಸಲು ಸಿದ್ಧವಾಗಿದೆ. ಮೂರನೇ ಸೀಸನ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಕೊನೆಯ ಎರಡು ಆವೃತ್ತಿಯನ್ನು ಭಾರತದಲ್ಲಿ ಆಡಿಸಲಾಗಿತ್ತು. ಮುಂದಿನ ಆವೃತ್ತಿಯನ್ನು ಇಂಗ್ಲೆಂಡ್​ ಆಯೋಜಿಸುತ್ತಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈ ಸೀಸನ್​ ನಡೆಸಲು ಮುಂದೆ ಬಂದಿದೆ.

ಒಂದು ವೇಳೆ ಪಾಕಿಸ್ತಾನ ತಂಡ ಈ ಸರಣಿಯ ಭಾಗವಾಗಿದ್ದರೆ, ಮತ್ತೊಮ್ಮೆ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ವೇಗದ ಬೌಲರ್‌ಗಳಾದ ಶೋಯೆಬ್ ಅಖ್ತರ್ ಮತ್ತು ವಾಸಿಂ ಅಕ್ರಮ್ ಎದುರು ಬ್ಯಾಟ್​ ಬೀಸಲಿದ್ದಾರೆ. ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಭಾರತ ತಂಡ ಕಳೆದೆರಡು ಆವೃತ್ತಿಯಲ್ಲಿ ಪ್ರಾಬಲ್ಯವನ್ನು ಹೊಂದಿತ್ತು. ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಭಾರತ ಲೆಜೆಂಡ್ಸ್ ತಂಡವು ಸರಣಿಯ ಎರಡೂ ಋತುಗಳಲ್ಲಿ ಚಾಂಪಿಯನ್ ಆಗಿದೆ.

ಕಳೆದೆರಡು ಆವೃತ್ತಿ ಭಾರತದಲ್ಲಿ ನಡೆದಿದ್ದರಿಂದ ಸಚಿನ್​ ನಾಯಕತ್ವದ ತಂಡ ಚಾಂಪಿಯನ್​ ಆಗಿತ್ತು. ಈ ಬಾರಿ ಇಂಗ್ಲೆಂಡ್​ನಲ್ಲಿ ಆಯೋಜನೆಗೊಳ್ಳುತ್ತಿರುವುದರಿಂದ ಸವಾಲು ಕಠಿಣವಾಗಲಿದೆ.

2022ರ ಆವೃತ್ತಿಯಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಭಾರತ ಪರ ಆಡಿದ್ದರು. ಬ್ರಿಯಾನ್ ಲಾರಾ, ಶೇನ್ ವ್ಯಾಟ್ಸನ್, ಬ್ರೆಟ್ ಲೀ, ಇಯಾನ್ ಬೆಲ್, ರಾಸ್ ಟೇಲರ್, ಶೇನ್ ಬಾಂಡ್, ಸ್ಕಾಟ್ ಸ್ಟೈರಿಸ್, ಜಾಂಟಿ ರೋಡ್ಸ್, ಲ್ಯಾನ್ಸ್ ಕ್ಲೂಸ್ನರ್, ತಿಲಕರತ್ನೆ ದಿಲ್ಶನ್, ತಿಸಾರಾ ಪೆರೆರಾ ಆಡಿದ್ದರು.

ಇದನ್ನೂ ಓದಿ:ಮಾಧ್ಯಮ ಪ್ರಸಾರದ ಹಕ್ಕಿನಲ್ಲಿ ಬೃಹತ್​ ಲಾಭಕ್ಕೆ ಬಿಸಿಸಿಐ ಲೆಕ್ಕಾಚಾರ.. ಮುಂದಿನ ಐದು ವರ್ಷ ಇಂಗ್ಲೆಂಡ್​, ಆಸ್ಟ್ರೇಲಿಯಾ ಮೇಲೆ ಸಿಂಹಪಾಲು ಪಂದ್ಯ

ABOUT THE AUTHOR

...view details