ಕರ್ನಾಟಕ

karnataka

ಗಾಯದಿಂದ ಚೇತರಿಕೆ ದೊಡ್ಡದಲ್ಲ, ನೋವಿನ ಬಗ್ಗೆ ಇರುವ ಮಾನಸಿಕ ಭಯದಿಂದ ಹೊರ ಬರುವುದು ಕಷ್ಟ: ಕೆಎಲ್ ರಾಹುಲ್

By ETV Bharat Karnataka Team

Published : Sep 10, 2023, 10:03 PM IST

ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡರೆ ಮತ್ತೆ ಲಯಕ್ಕೆ ಮರಳಲು ಕೆಲವು ವಾರಗಳ ಕಠಿಣ ಅಭ್ಯಾಸ ಸಾಕಾಗುತ್ತದೆ ಎಂದಿದ್ದಾರೆ ರಾಹುಲ್​

KL Rahul
KL Rahul

ಕೊಲಂಬೊ (ಶ್ರೀಲಂಕಾ): ತೊಡೆಯ ಗಾಯದಿಂದ ಸುಮಾರು 4-5 ತಿಂಗಳ ಕಾಲ ಆಟದಿಂದ ದೂರ ಉಳಿದಿದ್ದ ಭಾರತದ ವಿಕೆಟ್ ಕೀಪರ್ ಬ್ಯಾಟರ್​ ಕೆಎಲ್ ರಾಹುಲ್​ಗೆ ಮಾನಸಿಕ ಅಡೆತಡೆಗಳನ್ನು ಮೆಟ್ಟಿ ನಿಲ್ಲುವುದೇ ದೊಡ್ಡ ಸವಾಲಾಗಿತ್ತು. ದೇಹವನ್ನು ಗೌರವಿಸುವುದು ಮತ್ತು ಚೇತರಿಸಿಕೊಳ್ಳಲು ಸಾಕಷ್ಟು ಸಮಯವನ್ನು ನೀಡುವ ಬಗ್ಗೆ ಅವರು ಸಂಪೂರ್ಣ ಗಮನ ಹರಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

16ನೇ ಆವೃತ್ತಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ, ಕೆಎಲ್ ರಾಹುಲ್ ಎರಡನೇ ಓವರ್‌ನಲ್ಲಿ ಬೌಂಡರಿ ತಡೆಯಲು ಚೆಂಡನ್ನು ಬೆನ್ನಟ್ಟುತ್ತಿದ್ದಾಗ ಗಾಯಗೊಂಡಿದ್ದರು ಮತ್ತು ಪಂದ್ಯದ ಮಧ್ಯದಲ್ಲಿ ಮೈದಾನವನ್ನು ತೊರೆಯಬೇಕಾಯಿತು. ಇದಾದ ಬಳಿಕ ಮೇ 5ರಂದು ರಾಹುಲ್ ಅವರ ಬಲತೊಡೆಯ ಸ್ನಾಯುರಜ್ಜುಗೆ ತೀವ್ರ ಗಾಯವಾಗಿದ್ದು, ಇದಕ್ಕಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ, ಕೆಎಲ್ ರಾಹುಲ್ ಆಟದಿಂದ ದೂರವಿದ್ದರು. ರಿಹ್ಯಾಬ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆದ ನಂತರ ಅವರು ಏಷ್ಯಾಕಪ್ 2023 ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಪುನರಾಗಮನ ಮಾಡಿದ್ದಾರೆ.

ಪಂದ್ಯಕ್ಕೂ ಮುನ್ನ ಮಾತನಾಡಿದ ರಾಹುಲ್, 'ನಿಮಗೆ ಶಸ್ತ್ರ ಚಿಕಿತ್ಸೆಯಾದಾಗ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ನಿಮ್ಮ ದೇಹವನ್ನು ಗೌರವಿಸುವುದು. ನಿಮ್ಮ ದೇಹವನ್ನು ಚೇತರಿಸಿಕೊಳ್ಳಲು ಸಾಕಷ್ಟು ಸಮಯವನ್ನು ನೀಡಬೇಕು. ಸಂಪೂರ್ಣವಾಗಿ ಚೇತರಿಸಿಕೊಂಡರೆ ಮೈದಾನದಲ್ಲಿ ಲಯ ಕಂಡುಕೊಳ್ಳಲು ಕೆಲವು ವಾರಗಳು ಸಾಕಾಗುತ್ತದೆ' ಎಂದು ರಾಹುಲ್ ಬಿಸಿಸಿಐ ಟಿವಿಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

'ಮೈದಾನಕ್ಕೆ ಮರಳಲು ನಾನು ಕೇವಲ ಎರಡು ಅಥವಾ ಮೂರು ವಾರಗಳ ಸಮಯವನ್ನು ನೀಡಿದ್ದೇನೆ. ದೊಡ್ಡ ವಿಷಯವೆಂದರೆ ನಾನು ನನ್ನ ದೇಹದಲ್ಲಿ ಆತ್ಮವಿಶ್ವಾಸವನ್ನು ಹೊಂದಿದ್ದೇನೆ ಮತ್ತು ನೋವುರಹಿತವಾಗಿ ಉಳಿದಿದ್ದೇನೆ. ಹಿಂತಿರುಗಿದ ನಂತರ ನಾನು ವಿಕೆಟ್ ಕೀಪಿಂಗ್ ಮಾಡಬೇಕೆಂದು ನನಗೆ ತಿಳಿದಿತ್ತು. ಇದು ಫಿಸಿಯೋ ಮತ್ತು ನನಗೆ ದೊಡ್ಡ ಚಿಂತೆಯಾಗಿತ್ತು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿ ಸಮಯದಲ್ಲಿ ನನ್ನ ಮನಸ್ಸಿನಲ್ಲಿದ್ದ ದೊಡ್ಡ ಸವಾಲು ವಿಕೆಟ್ ಕೀಪಿಂಗ್. ಬಲತೊಡೆಯ ಸ್ನಾಯುರಜ್ಜುಗೆ ತೀವ್ರ ಗಾಯವಾದ ಕಾರಣ ಪುನರಾಗಮನಕ್ಕೆ ದೊಡ್ಡ ಸವಾಲಿನದ್ದಾಗಿತ್ತು' ಎಂದು ಹೇಳಿಕೊಂಡಿದ್ದಾರೆ.

'ಪ್ರತಿ ಬಾಲ್‌ನಲ್ಲಿ ಕುಳಿತು ವಿಕೆಟ್‌ಗಳನ್ನು ಕೀಪಿಂಗ್ ಮಾಡುತ್ತಿರುವಾಗ, ತೊಡೆಯ ಭಾಗಕ್ಕೆ ಹೆಚ್ಚಿನ ಬಲ ಹಾಕಬಾಕಾಗುತ್ತದೆ. ಹೀಗಾಗಿ ಮೈದಾನಕ್ಕಿಳಿದು ಆಡುವಾಗ ಕೇವಲ ನೋವಿನಿಂದ ಹೊರಬಂದರೆ ಸಾಲದು, ಈ ಬಗ್ಗೆ ಮನಸ್ಸಿನಲ್ಲಿ ಉಳಿಯುವ ಭಯದಿಂದಲೂ ಹೊರಬರಬೇಕಾಗುತ್ತದೆ. ಮೈದಾನದಲ್ಲಿ ಉಳಿಯಲು ದೊಡ್ಡ ಮಾನಸಿಕ ಯುದ್ಧವನ್ನು ಮಾಡಬೇಕು. ನಾನು ನೋವನ್ನು ಸಹಿಸಿಕೊಳ್ಳಬಲ್ಲೆ. ಆದರೆ ಅಂತಹ ಮನಸ್ಥಿತಿಯಲ್ಲಿರುವಾಗ, ನಿಮ್ಮ ಆಟದ ಮೇಲೆ ನೀವು ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಿಲ್ಲ.' ಎಂದಿದ್ದಾರೆ.

ಕಷ್ಟದ ಸಮಯದಲ್ಲಿ ಮಾರ್ಗದರ್ಶನ ನೀಡಿದ ಫಿಸಿಯೋಗಳಿಗೆ ರಾಹುಲ್ ಕೃತಜ್ಞತೆ ಸಲ್ಲಿಸಿದರು. ನಾನು ಎನ್​ಸಿಎಯಲ್ಲಿ ಕೆಲವು ಉತ್ತಮ ತರಬೇತುದಾರರ ಮಾರ್ಗದರ್ಶನದಲ್ಲಿದ್ದೆ. 100 ಓವರ್‌ಗಳ ಪಂದ್ಯದ ಕಠಿಣತೆಗೆ ನಾನು ಸಿದ್ಧನಿದ್ದೇನೆ ಮತ್ತು ತನ್ನ ಸಾಮರ್ಥ್ಯದ ಬಗ್ಗೆ 'ಆತ್ಮವಿಶ್ವಾಸ' ಹೊಂದಿದ್ದೇನೆ ಎಂದು ರಾಹುಲ್ ಅಂತಿಮವಾಗಿ ಹೇಳಿದರು.

ಇದನ್ನೂ ಓದಿ:Asia CUP 2023: 20 ಓವರ್​ನ ಭಾರತ - ಪಾಕ್​ ಪಂದ್ಯ ನಡೆದರೆ ಗುರಿ ಎಷ್ಟು ಗೊತ್ತಾ?

ABOUT THE AUTHOR

...view details