ಕರ್ನಾಟಕ

karnataka

ಪಂದ್ಯ ಗೆಲ್ಲಿಸಿದ ಜಡೇಜಾ ಎತ್ತಿಕೊಂಡು ಸಂಭ್ರಮಿಸಿದ ಧೋನಿ: ನೋಡಿ ಅಪರೂಪದ ದೃಶ್ಯ

By

Published : May 30, 2023, 9:13 AM IST

ಚೆನ್ನೈ ಗೆಲುವಿನ ರೂವಾರಿ 'ಸರ್​ ರವೀಂದ್ರ ಜಡೇಜಾ'ರನ್ನು ನಾಯಕ ಮಹೇಂದ್ರ ಸಿಂಗ್​ ಧೋನಿ ಎತ್ತಿಕೊಂಡ ಚಿತ್ರ ಐಕಾನಿಕ್​ ಆಗಿದೆ. ಇಬ್ಬರ ನಡುವಿನ ಅಂತರವನ್ನು ಇದು ದೂರ ಮಾಡಿದೆ.

ರವೀಂದ್ರ ಜಡೇಜಾ ಎತ್ತಿಕೊಂಡು ಮೆರೆಸಿದ ದೋನಿ
ರವೀಂದ್ರ ಜಡೇಜಾ ಎತ್ತಿಕೊಂಡು ಮೆರೆಸಿದ ದೋನಿ

ಅಹಮದಾಬಾದ್ (ಗುಜರಾತ್):ಕ್ರೀಡೆ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂಬುದು ಸತ್ಯ. ಇದು ಐಪಿಎಲ್​ನಲ್ಲಿ ಸಾಬೀತಾಯಿತು. ಚೆನ್ನೈ ತಂಡದ ನಾಯಕ ಎಂ.ಎಸ್. ಧೋನಿ ಮತ್ತು ಆಲ್​ರೌಂಡರ್​ ರವೀಂದ್ರ ಜಡೇಜಾ ಮಧ್ಯೆ ಅಸಮಾಧಾನ ಹೊಗೆಯಾಡುತ್ತಿದೆ ಎಂದು ಐಪಿಎಲ್​ ಫೈನಲ್​ಗೂ ಮುಂದಷ್ಟೇ ದೊಡ್ಡ ಸುದ್ದಿಯಾಗಿತ್ತು. ಆದರೆ, ಅದ್ಭುತ ಗೆಲುವು ಇಬ್ಬರು ದಿಗ್ಗಜರನ್ನು ಒಂದಾಗಿಸಿದೆ. ಚೆನ್ನೈ ಗೆದ್ದಾಗ ಸ್ವತಃ ಧೋನಿಯೇ ಮೈದಾನದಲ್ಲಿ ಜಡೇಜಾರನ್ನು ಎತ್ತಿಕೊಂಡು ಸಂಭ್ರಮಿಸಿದರು. 'ಪ್ರಶಸ್ತಿಯನ್ನು ಧೋನಿಗೆ ಅರ್ಪಿಸುವುದಾಗಿ' ಜಡೇಜಾ ಹೇಳಿದರು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಇದಕ್ಕೆ ಮುಖ್ಯ ಕಾರಣ ಆಲ್‌ರೌಂಡರ್ ರವೀಂದ್ರ ಜಡೇಜಾ. ಕೊನೆಯ 2 ಎಸೆತಗಳಲ್ಲಿ 1 ಸಿಕ್ಸರ್​, ಬೌಂಡರಿಗಳಿಂದ 10 ರನ್ ಬಾರಿಸಿ ಜಯ ತಂದಿತ್ತರು. ಸೋಲಿನ ಸುಳಿಯಲ್ಲಿದ್ದ ತಂಡವನ್ನು ಜಡ್ಡು ಜಾದೂ ಮಾಡಿದಂತೆ ಗೆಲ್ಲಿಸಿಕೊಟ್ಟರು.

ರವೀಂದ್ರ ಜಡೇಜಾ ಮತ್ತು ಮಹೇಂದ್ರ ಸಿಂಗ್​ ಧೋನಿ ಮಧ್ಯೆ ಕಳೆದ ಸೀಸನ್​ನಿಂದಲೂ ಅಷ್ಟಕ್ಕಷ್ಟೇ ಎಂಬಂತಿತ್ತು. ಕಳೆದ ಬಾರಿ ಚೆನ್ನೈಗೆ ಜಡೇಜಾರನ್ನು ನಾಯಕರನ್ನಾಗಿ ಮಾಡಲಾಗಿತ್ತು. ಆದರೆ, ತಂಡ ಹೀನಾಯ ಪ್ರದರ್ಶನ ನೀಡಿದ್ದರಿಂದ ಜಡೇಜಾ ನಾಯಕತ್ವದ ಮೇಲೆ ದಂಡಿ ಟೀಕೆಗಳು ಬಂದವು. ಇದರಿಂದ ಬೇಸತ್ತ ಜಡ್ಡು ನಾಯಕತ್ವ ತೊರೆದು, ಕೊನೆಯ ಪಂದ್ಯಗಳಿಂದ ಹೊರನಡೆದಿದ್ದರು. ಇದಾದ ಬಳಿಕ ಧೋನಿ ಜತೆಗಿನ ಸಂಬಂಧ ಹಳಸಿದೆ ಎಂದೇ ವಿಶ್ಲೇಷಿಸಲಾಗಿತ್ತು.

ಜಡೇಜಾ ಎತ್ತಿಕೊಂಡ ಧೋನಿ:ಇಬ್ಬರ ನಡುವಿನ ಮುನಿಸು ಐಪಿಎಲ್​ ಫೈನಲ್​ ಪಂದ್ಯದಲ್ಲಿ ಮಂಜಿನಂತೆ ಕರಗಿದೆ. ಜಡೇಜಾ ಪಂದ್ಯ ಗೆಲ್ಲಿಸಿ ಗತ್ತಿನಲ್ಲಿ ಮೈದಾನದಲ್ಲೆಲ್ಲ ಓಡಾಡುತ್ತಿದ್ದರು. ಜಡೇಜಾ ಬಳಿ ಬಂದ ಧೋನಿ ಎತ್ತಿಕೊಂಡು ಮೆರೆದಾಡಿದರು. ಈ ವೇಳೆ ಕಣ್ಣಂಚಲ್ಲಿ ನೀರು ಕೂಡ ಜಿನುಗುತ್ತಿತ್ತು. ಜಡೇಜಾ ಮತ್ತು ಧೋನಿಯ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. 'ಇದನ್ನು ಪಿಕ್ಚರ್​ ಆಫ್​ ಮ್ಯಾಚ್​' ಎಂದೇ ಬಣ್ಣಿಸಲಾಗಿದೆ.

ಧೋನಿಗೆ ಪ್ರಶಸ್ತಿ ಅರ್ಪಣೆ:ಪಂದ್ಯದ ಬಳಿಕ ಮಾತನಾಡಿದ ಗೆಲುವಿನ ಹೀರೋ ಜಡೇಜಾ, "ತವರಿನಂಗಳದಲ್ಲಿ ಪ್ರಶಸ್ತಿ ಜಯಿಸಿರುವುದು ತುಂಬಾ ಖುಷಿ ತಂದಿದೆ. ನಾನು ಗುಜರಾತಿನವನು ಎಂಬುದೇ ನನಗೆ ವಿಶೇಷ ಭಾವನೆಯಾಗಿದೆ. ತಡರಾತ್ರಿವರೆಗೂ ಮಳೆಗಾಗಿ ಕಾದು ಪಂದ್ಯ ವೀಕ್ಷಿಸಿದ ಅಭಿಮಾನಿಗಳು ಅದ್ಭುತ. ಸಿಎಸ್​ಕೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಈ ಗೆಲುವನ್ನು ಸಿಎಸ್​ಕೆ ತಂಡದ ವಿಶೇಷ ಸದಸ್ಯ ಎಂ.ಎಸ್. ಧೋನಿಗೆ ಅರ್ಪಿಸುತ್ತೇನೆ" ಎಂದು ಹೇಳಿದರು.

"ಪಂದ್ಯದಲ್ಲಿ ನಾನು ಜವಾಬ್ದಾರಿ ಅರಿತು ಕಾದು ಆಟವಾಡಿದೆ. ಮೋಹಿತ್​ ಶರ್ಮಾ ನಿಧಾನವಾಗಿ ಬೌಲಿಂಗ್​ ಮಾಡುತ್ತಿದ್ದುದನ್ನು ಗಮನಿಸಿ ನೆಲಕಚ್ಚಿ ನಿಂತಿದ್ದೆ. ಹೀಗಾಗಿ ನಾನು ಕೊನೆಯ ಎಸೆತಗಳನ್ನು ಬಾರಿಸಲು ಸಾಧ್ಯವಾಯಿತು. ಪಂದ್ಯ ಗೆಲ್ಲಿಸಿದ್ದು, ವಿಶೇಷ ಅನುಭವ ನೀಡಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:ಚೆನ್ನೈ 'ಸೂಪರ್‌ ಸೂಪರ್‌' ಕಿಂಗ್ಸ್! 5ನೇ ಬಾರಿಗೆ ಐಪಿಎಲ್​ ಕಪ್​ ಎತ್ತಿ ಹಿಡಿದ ಧೋನಿ ಟೀಂ

ABOUT THE AUTHOR

...view details