ಕರ್ನಾಟಕ

karnataka

IPL Playoff Race: ಉಳಿದೆರಡು ಪಂದ್ಯ ಗೆದ್ರೆ RCB ಪ್ಲೇಆಫ್​ಗೆ, 7 ತಂಡಗಳ ನಡುವೆ ರೋಚಕ ಫೈಟ್​!

By

Published : May 15, 2023, 9:37 AM IST

ಇಂಡಿಯನ್​ ಪ್ರೀಮಿಯರ್​ ಲೀಗ್ ಪ್ಲೇಆಫ್ ಲೆಕ್ಕಾಚಾರ ಶುರುವಾಗಿದ್ದು, ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಇನ್ನೂ ಕೂಡ ಯಾವುದೇ ತಂಡವೂ ಅಧಿಕೃತವಾಗಿ ನಿರ್ಣಾಯಕ ಹಂತ ತಲುಪಿಲ್ಲ. ಹೀಗಾಗಿ ಹಲವು ತಂಡಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ.

Etv Bharat
Etv Bharat

ಇಂಡಿಯನ್​ ಪ್ರೀಮಿಯರ್​ ಲೀಗ್ 2023​ ಅಂತಿಮ ಹಂತದತ್ತ ಸಾಗುತ್ತಿದೆ. ಸದ್ಯ ಪ್ಲೇಆಫ್ ರೇಸ್ ನಡೆಯುತ್ತಿದ್ದು, ಭಾನುವಾರ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪ್ಲೇಆಫ್ ಕನಸು ಜೀವಂತವಾಗಿವೆ. ರಾಜಸ್ಥಾನ ರಾಯಲ್ಸ್ ತಂಡವನ್ನು 112 ರನ್‌ಗಳಿಂದ ಸೋಲಿಸಿದ ಬೆಂಗಳೂರು 12 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಜಿಗಿದರೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್‌ಗಳ ಜಯದೊಂದಿಗೆ ಕೆಕೆಆರ್ ಕೂಡ 7ನೇ ಸ್ಥಾನದೊಂದಿಗೆ ರೇಸ್​ನಲ್ಲಿ ಮುಂದುವರೆದಿದೆ.

ಇನ್ನೊಂದೆಡೆ, ಕೋಲ್ಕತ್ತಾ ವಿರುದ್ಧ ಸೋತ ಎಂ.ಎಸ್.ಧೋನಿ ಪಡೆ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಕಳೆದುಕೊಂಡಿತು. ಅಲ್ಲದೆ, ಈ ಸೋಲು ಪ್ಲೇಆಫ್ ತಲುಪುವುದನ್ನೂ ಸಹ ವಿಳಂಬವಾಗಿಸಿದೆ. ಗುಜರಾತ್ ಟೈಟಾನ್ಸ್ ತಂಡವು ಇಂದು (ಸೋಮವಾರ) ಸನ್‌ರೈಸರ್ಸ್ ಹೈದರಾಬಾದ್ ಮಣಿಸಿದರೆ ಅಧಿಕೃತವಾಗಿ ಪ್ಲೇಆಫ್​​ಗೆ ಅರ್ಹತೆ ಪಡೆದ ಮೊದಲ ತಂಡವಾಗಲಿದೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ಈ ರೇಸ್​ನಿಂದ ಹೊರಬಿದ್ದಿದೆ. ವಿವಿಧ ತಂಡಗಳ ಪ್ಲೇಆಫ್ ಹಾದಿ ಹೇಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.

ರಾಜಸ್ಥಾನ್ ರಾಯಲ್ಸ್:ಈ ಬಾರಿ ರಾಜಸ್ಥಾನ್ ರಾಯಲ್ಸ್‌ ತಂಡದ ಅಸಮತೋಲಿತ ಪ್ರದರ್ಶನವು ಈಗ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಪ್ಲೇಆಫ್‌ನಿಂದ ಹೊರಬೀಳುವ ಅಪಾಯದಲ್ಲಿದ್ದು, ಕೊನೆಯ ಪಂದ್ಯದಲ್ಲಿ ಗೆದ್ದರೂ ಆ ಹಂತಕ್ಕೆ ತಲುಪುವುದು ಅನುಮಾನ. ಭಾನುವಾರ ಆರ್‌ಸಿಬಿ ಕೇವಲ 59 ರನ್‌ಗಳಿಗೆ ಆಲೌಟ್​​ ಆಗಿ 112 ರನ್‌ಗಳಿಂದ ಸೋತ ರಾಜಸ್ಥಾನ ರನ್​​ ರೇಟ್​​ಗೆ ಭಾರಿ ಹೊಡೆತ ಬಿದ್ದಿದೆ. ಅಂತಿಮ ಪಂದ್ಯದಲ್ಲಿ ಗೆಲುವು ಕಂಡರೂ ಸಹ ಸಂಜು ಪಡೆ ರನ್​​ ರೇಟ್​ ಆಧಾರದಲ್ಲಿ ಟೂರ್ನಿಯಿಂದ ಹೊರಬೀಳುವ ಭೀತಿ ಎದುರಿಸುತ್ತಿದೆ.

14 ಅಂಕ ತಲುಪಲು ರಾಜಸ್ಥಾನವು ಪಂಜಾಬ್ ವಿರುದ್ಧದ ಏಕೈಕ ಹಣಾಹಣಿಯಲ್ಲಿ ಭಾರಿ ಅಂತರದ ಜಯದ ಜೊತೆಗೆ ಇತರರ ಫಲಿತಾಂಶಗಳ ಮೇಲೆ ಅವಲಂಬಿತ ಆಗಬೇಕಿದೆ. ಹೇಗೆಂದರೆ, ಹೈದರಾಬಾದ್​ ತಂಡವನ್ನು ಗುಜರಾತ್​ ಮಣಿಸಬೇಕು. ಲಕ್ನೋ ತಂಡವನ್ನು ಮುಂಬೈ ಸೋಲಿಸಬೇಕು. ಡೆಲ್ಲಿ ವಿರುದ್ಧ ಪಂಜಾಬ್​ ಸೋತರೆ ಹಾಗೂ ಕೊನೆಗೆ ಆರ್​​ಸಿಬಿಯು ಗುಜರಾತ್​ ಜೊತೆಗಿನ ಪಂದ್ಯದಲ್ಲಿ ಪರಾಜಯಗೊಂಡರೆ ಮಾತ್ರ ಪ್ಲೇಆಫ್‌ ಲೆಕ್ಕಾಚಾರ ಮಾಡಬಹುದಾಗಿದೆ. ಆರ್​ಆರ್​ ಕೊನೆಯ ಪಂದ್ಯವು ಮೇ 19ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಇದೆ.

ಲಕ್ನೋ ಸೂಪರ್ ಜೈಂಟ್ಸ್: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 7 ವಿಕೆಟ್‌ ಜಯದಿಂದಾಗಿ ಲಕ್ನೋ ಸೂಪರ್​ ಜೈಂಟ್ಸ್​ 4ನೇ ಸ್ಥಾನದಲ್ಲಿದೆ. 12 ಪಂದ್ಯಗಳಿಂದ 13 ಅಂಕಗಳೊಂದಿಗೆ ಆರ್​​ಸಿಬಿ, ಪಂಜಾಬ್​, ಸಿಎಸ್​ಕೆ ಹಾಗೂ ರಾಯಲ್ಸ್​ ಜೊತೆ ರೇಸ್‌ನಲ್ಲಿದೆ. ಲಕ್ನೋಗೆ ಇನ್ನೂ 2 ಪಂದ್ಯಗಳು ಬಾಕಿಯಿದೆ. ಟೂರ್ನಿಯ ಆರಂಭದಲ್ಲಿದ್ದ ಹುಮ್ಮಸ್ಸನ್ನೇ ಮುಂದುವರೆಸಿದರೆ ಪ್ಲೇಆಫ್‌ ತಲುಪುವುದು ಕಷ್ಟವೇನಲ್ಲ. ಲಕ್ನೋ ತಂಡದ ಉಳಿದೆರಡು ಪಂದ್ಯಗಳು ಮೇ 16ರಂದು ಮುಂಬೈ ಇಂಡಿಯನ್ಸ್ ಹಾಗೂ ಮೇ 20ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗಿವೆ.

ಚೆನ್ನೈ ಸೂಪರ್ ಕಿಂಗ್ಸ್:ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭಾನುವಾರ ಸೋತರೂ ಕೂಡ ಪಟ್ಟಿಯಲ್ಲಿ ಸಿಎಸ್​ಕೆ 2ನೇ ಸ್ಥಾನದಲ್ಲಿದೆ. 13 ಪಂದ್ಯಗಳಿಂದ 15 ಅಂಕ ಹೊಂದಿರುವ ಚೆನ್ನೈ ಪ್ಲೇಆಪ್​ಗೇರಲು ಅಂತಿಮ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲ್ಲಲೇಬೇಕಿದೆ. ಕ್ಯಾಪಿಟಲ್ಸ್​ ಜೊತೆ ಸೋತರೂ ಸಹ ಧೋನಿ ಪಡೆ ಪ್ಲೇಆಪ್​ಗೇರುವ ಸಾಧ್ಯತೆ ಇದ್ದು, ಆರ್​ಸಿಬಿ ಮುಂದಿನ ಎರಡೂ ಪಂದ್ಯ ಸೋತರೆ ಹಾಗೂ ಮುಂಬೈ ಮತ್ತು ಲಕ್ನೋ ತಂಡಗಳು ಕನಿಷ್ಠ ಒಂದು ಪಂದ್ಯದಲ್ಲಿ ಸೋಲು ಕಾಣಬೇಕಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಅಂತಿಮ ಪಂದ್ಯದಲ್ಲಿ ಮೇ 20ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.

ಗುಜರಾತ್ ಟೈಟಾನ್ಸ್: ಹಾಲಿ ಚಾಂಪಿಯನ್ ಗುಜರಾತ್​ ತಂಡವು ಮುಂಬೈ ವಿರುದ್ಧ ಸೋತಿದ್ದರಿಂದ ಪ್ಲೇಆಪ್ ಅರ್ಹತೆಗಾಗಿ ಕಾಯಬೇಕಿದೆ. ಟೈಟಾನ್ಸ್​ 12 ಪಂದ್ಯಗಳಿಂದ 16 ಅಂಕದೊಂದಿದೆ ಅಗ್ರಸ್ಥಾನದಲ್ಲಿದೆ. ಹಾರ್ದಿಕ್ ಪಡೆಯು ಉಳಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಸತತ ಎರಡನೇ ಪ್ಲೇಆಫ್​​​ಗೇರಲಿದೆ. ಟೈಟಾನ್ಸ್​ ಮೇ 15ರಂದು ಸನ್ ರೈಸರ್ಸ್ ಹಾಗೂ ಮೇ 21ರಂದು ಬೆಂಗಳೂರು ವಿರುದ್ಧ ಕಾದಾಡಲಿದೆ.

ಪಂಜಾಬ್ ಕಿಂಗ್ಸ್:ಪಂಜಾಬ್ ತಂಡವು ಮತ್ತೊಮ್ಮೆ ಐಪಿಎಲ್​ನಲ್ಲಿ ಏರಿಳಿತದ ಪ್ರದರ್ಶನ ಮುಂದುವರೆಸಿದೆ. ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಬಳಿಕ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 12 ಪಂದ್ಯಗಳಲ್ಲಿ 12 ಅಂಕ ಹೊಂದಿರುವ ಕಿಂಗ್ಸ್​ ಅಂತಿಮ ಎರಡೂ ಹಣಾಹಣಿಗಳಲ್ಲಿ ಜಯ ಸಾಧಿಸಲೇಬೇಕಾದ ಅಗತ್ಯವಿದೆ. ಪಂಜಾಬ್ ಮೇ 17ರಂದು ದೆಹಲಿ ಕ್ಯಾಪಿಟಲ್ಸ್ ಹಾಗೂ ಮೇ 19ರಂದು ರಾಜಸ್ಥಾನ ವಿರುದ್ಧ ಕಣಕ್ಕಿಳಿಯಲಿದೆ.

ಮುಂಬೈ ಇಂಡಿಯನ್ಸ್:ಇತ್ತೀಚೆಗೆ ಅದ್ಭುತ ಗೆಲುವುಗಳನ್ನು ಕಂಡ ಮುಂಬೈ ಇಂಡಿಯನ್ಸ್​ 12 ಪಂದ್ಯಗಳಿಂದ 14 ಅಂಕ ಹೊಂದಿದೆ. ರೋಹಿತ್ ಶರ್ಮಾ ಪಡೆಯು ಪ್ಲೇಆಫ್​ಗೆ ಪ್ರಬಲ ಸ್ಪರ್ಧಿಯಾಗಿದೆ. ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದಲ್ಲಿರುವ ಮುಂಬೈ ಪ್ಲೇಆಫ್​​​ ತಲುಪಲು ಗೆಲುವಿನ ಓಟ ಮುಂದುವರೆಸಬೇಕಿದೆ. ಉಳಿದೆರಡು ಪಂದ್ಯಗಳಲ್ಲಿ ಮುಂಬೈ ಮೇ 16ರಂದು ಲಕ್ನೋ ಹಾಗೂ ಮೇ 21ರಂದು ಹೈದರಾಬಾದ್ ವಿರುದ್ಧ ಸೆಣೆಸಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್:ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದ ಬಳಿಕ ಕೆಕೆಆರ್ ಪ್ಲೇ ಆಫ್‌ ಆಸೆ ಜೀವಂತವಾಗಿದೆ. ಮೇ 20ರಂದು ಕೋಲ್ಕತ್ತಾ ಕೊನೆಯ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆಲ್ಲಲೇಬೇಕಿದೆ. ಗೆದ್ದರೂ ಸಹ ಇತರ ಹಲವು ಫಲಿತಾಂಶಗಳ ಮೇಲೆ ಅವಲಂಬಿತ ಆಗಬೇಕಿದೆ. ಅದು ಹೇಗೆಂದರೆ, ಆರ್​ಸಿಬಿಯು ರಾಯಲ್ಸ್​ ಮಣಿಸಬೇಕು. ಗುಜರಾತ್​ ವಿರುದ್ಧ ಹೈದರಾಬಾದ್​ ಸೋಲಬೇಕು. ಮುಂಬೈ ತಂಡವು ಲಕ್ನೋವನ್ನು ಸೋಲಿಸಿದರೆ, ಪಂಜಾಬ್​​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಗೆದ್ದರೆ, ಹೈದರಾಬಾದ್​​ ತಂಡ ಆರ್​ಸಿಬಿ ಮಣಿಸಿದರೆ, ಪಂಜಾಬ್​ ತಂಡವು ಆರ್​ಆರ್​ ವಿರುದ್ಧ ಜಯ ಕಂಡರೆ, ಗುಜರಾತ್​ ವಿರುದ್ಧ ಆರ್​ಸಿಬಿ ಸೋತರೆ ಕೆಕೆಆರ್​ ಹಾಗೂ ಪಂಜಾಬ್​ ತಂಡಗಳು 14 ಅಂಕ ಗಳಿಸಲಿವೆ. ತದನಂತರ ರನ್​ ರೇಟ್​ ಪ್ರಮುಖ ಪಾತ್ರ ವಹಿಸಲಿದೆ. ಕೆಕೆಆರ್​ ಉಳಿದ ಏಕೈಕ ಪಂದ್ಯದಲ್ಲಿ ಮೇ 20ರಂದು ಲಕ್ನೋ ವಿರುದ್ಧ ಮೈದಾನಕ್ಕಿಳಿಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು:ಮತ್ತೊಮ್ಮೆ ನಿರೀಕ್ಷಿತ ಆಟ ಪ್ರದರ್ಶಿಸುವಲ್ಲಿ ವಿಫಲವಾಗಿರುವ ಬೆಂಗಳೂರು ತಂಡ ರಾಜಸ್ಥಾನ ವಿರುದ್ಧ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಿದ್ದು, ಉತ್ತಮ ರನ್​ ರೇಟ್​ ಕೂಡ ಕಾಪಾಡಿಕೊಳ್ಳಬೇಕಿದೆ. ಉಳಿದಿರುವ ಎರಡು ಪಂದ್ಯಗಳು ಮೇ 18ರಂದು ಹೈದರಾಬಾದ್ ಹಾಗೂ ಮೇ 21ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಇವೆ.

ಸನ್‌ರೈಸರ್ಸ್ ಹೈದರಾಬಾದ್:ಹೈದರಾಬಾದ್ ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ಧು, ಲಕ್ನೋ ವಿರುದ್ಧ ತವರಿನಲ್ಲಿ 7 ವಿಕೆಟ್‌ ಸೋಲು ಪ್ಲೇಆಫ್‌ ಹಾದಿ ದುರ್ಗಮಗೊಳಿಸಿದೆ. 11 ಪಂದ್ಯಗಳಿಂದ 8 ಅಂಕ ಹೊಂದಿದ್ದು, ನಿರ್ಣಾಯಕ ಹಂತ ತಲುಪುವ ಅನುಮಾನ ದಟ್ಟವಾಗಿದೆ. ಉಳಿದೆಲ್ಲ ಪಂದ್ಯ ಗೆದ್ದರೂ ಸಹ 14 ಅಂಕಗಳೊಂದಿಗೆ ತೀವ್ರ ಪೈಪೋಟಿ ಎದುರಿಸಬೇಕಿದೆ. ಆದರೆ ಬಲಿಷ್ಠ ಗುಜರಾತ್ ಹಾಗೂ ಮುಂಬೈ ವಿರುದ್ಧ ಗೆಲುವು ಸುಲಭವಲ್ಲ. ಇಂದು (ಮೇ 15) ಅಹಮದಾಬಾದ್​ನಲ್ಲಿ ಗುಜರಾತ್​ ವಿರುದ್ಧ ಹೈದರಾಬಾದ್​​ ಆಡಲಿದ್ದು, ಉಳಿದೆರಡು ಪಂದ್ಯಗಳಲ್ಲಿ ಮೇ 18ರಂದು ಬೆಂಗಳೂರು ಹಾಗೂ ಮೇ 21ರಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ದೆಹಲಿ ಕ್ಯಾಪಿಟಲ್ಸ್ ಔಟ್​​:ದೆಹಲಿ ಕ್ಯಾಪಿಟಲ್ಸ್ ಅಧಿಕೃತವಾಗಿ ನಾಕ್ಔಟ್ ಆಗಿದೆ. ಪಂಜಾಬ್ ಕಿಂಗ್ಸ್‌ ವಿರುದ್ಧ 31 ರನ್‌ಗಳ ಸೋಲುಂಡ ಬಳಿಕ ಡೇವಿಡ್ ವಾರ್ನರ್ ಪಡೆಯು ಇನ್ನುಳಿದ 2 ಪಂದ್ಯಗಳನ್ನು ಗೆದ್ದರೂ ಅಗ್ರ 4ರಲ್ಲಿ ಸ್ಥಾನ ಪಡೆಯುವುದಿಲ್ಲ. ಉಳಿದ ಪಂದ್ಯಗಳು: ಮೇ 17 - ಪಂಜಾಬ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್ ಹಾಗೂ ಮೇ 20 - ದೆಹಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್

ABOUT THE AUTHOR

...view details