ಕರ್ನಾಟಕ

karnataka

ರೈಲ್ವೆ ನಿಲ್ದಾಣದ ನೆಲಹಾಸಿನಲ್ಲೇ ರಾತ್ರಿ ಕಳೆದ ಸಿಎಸ್​ಕೆ ಫ್ಯಾನ್ಸ್​: ವಿಡಿಯೋ

By

Published : May 29, 2023, 4:25 PM IST

ದೂರದ ಊರಿನಿಂದ ಬಂದ ಚೆನ್ನೈ ಅಭಿಮಾನಿಗಳಿಗೆ ವರುಣ ಕಾಟ ನೀಡಿದ್ದಾನೆ. ಫೈನಲ್ ಪಂದ್ಯಕ್ಕಾಗಿ ಫ್ಯಾನ್ಸ್​ ರೈಲ್ವೆ ನಿಲ್ದಾಣದಲ್ಲಿ ಮಳೆ, ಚಳಿಯೆನ್ನದೇ ರಾತ್ರಿ ಕಳೆದಿದ್ದಾರೆ.

ರೈಲ್ವೆ ನಿಲ್ದಾಣದ ನೆಲಹಾಸಿನಲ್ಲೇ ರಾತ್ರಿ ಕಳೆದ ಸಿಎಸ್​ಕೆ ಫ್ಯಾನ್ಸ್​
ರೈಲ್ವೆ ನಿಲ್ದಾಣದ ನೆಲಹಾಸಿನಲ್ಲೇ ರಾತ್ರಿ ಕಳೆದ ಸಿಎಸ್​ಕೆ ಫ್ಯಾನ್ಸ್​

ಅಹ್ಮದಾಬಾದ್:ಭಾನುವಾರ ನಡೆಯಬೇಕಿದ್ದ ಐಪಿಎಲ್​ ಫೈನಲ್​ ಪಂದ್ಯ ಮಳೆಯಿಂದಾಗಿ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಗುಜರಾತ್​ ಟೈಟಾನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಅಭಿಮಾನಿಗಳು ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಧಾವಿಸಿದ್ದರು. ಆದರೆ, ವರುಣರಾಯ ಅವಕೃಪೆ ತೋರಿದ್ದು, ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತ್ತು. ಇದಲ್ಲದೇ, ತಮಿಳುನಾಡಿನಿಂದ ಬಂದಿದ್ದ ಸಿಎಸ್​ಕೆ ಫ್ಯಾನ್ಸ್​ ರೈಲ್ವೆ ನಿಲ್ದಾಣದಲ್ಲಿಯೇ ರಾತ್ರಿ ಕಳೆದಿರುವ ವಿಡಿಯೋ ವೈರಲ್​ ಆಗಿದೆ.

ಸತತ ಮಳೆ ಸುರಿದ ಕಾರಣ ಒಂದೇ ಒಂದು ಎಸೆತವಿಲ್ಲದೇ ಫೈನಲ್ ಪಂದ್ಯವನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಯಿತು. ಗುಜರಾತ್​ ಮತ್ತು ಚೆನ್ನೈ ತಂಡಗಳ ಅಭಿಮಾನಿಗಳು ನಿರಾಸೆಯಿಂದಲೇ ಕ್ರೀಡಾಂಗಣದಿಂದ ಮನೆಗಳಿಗೆ ತೆರಳಬೇಕಾಯಿತು. ಆದರೆ, ಚೆನ್ನೈನ ಕೆಲ ಅಭಿಮಾನಿಗು ನಿಜಕ್ಕೂ ತೊಂದರೆ ಅನುಭವಿಸಿದ್ದಾರೆ. ಪಂದ್ಯ ನೋಡಲು ಬಂದಿರುವ ಜನರು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದೇ ರೈಲ್ವೆ ನಿಲ್ದಾಣದ ಬಯಲಲ್ಲಿ ಮಲಗಿರುವುದು ಕಂಡುಬಂದಿದೆ.

ರಾತ್ರಿಯಲ್ಲಿ ಸಿಎಸ್‌ಕೆ ಅಭಿಮಾನಿಗಳು ರೈಲ್ವೆ ನಿಲ್ದಾಣದಲ್ಲಿ ನೆಲದ ಮೇಲೆ ಹೊದಿಕೆಯಿಲ್ಲದೇ ಮಲಗಿರುವ ಕೆಲವು ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೀಸಲು ದಿನದಂದು ಅದೇ ಟಿಕೆಟ್‌ಗಳನ್ನು ಬಳಸಲು ಅಭಿಮಾನಿಗಳಿಗೆ ಅವಕಾಶ ನೀಡಿದೆ. ಹೀಗಾಗಿ ಫೈನಲ್‌ ಪಂದ್ಯವನ್ನು ನೋಡಲೇಬೇಕೆಂಬ ಹಠದಿಂದಾಗಿ ಫ್ಯಾನ್ಸ್ ಮನೆಗೆ ಮರಳದೇ ಅಲ್ಲಿಯೇ ಉಳಿದುಕೊಂಡಿದ್ದಾರೆ.

ಧೋನಿ ಮೇಲಿನ ಅಭಿಮಾನ:ಸಿಎಸ್​ಕೆ ಜರ್ಸಿಯನ್ನು ಧರಿಸಿರುವ ಅಭಿಮಾನಿಗಳು ರೈಲ್ವೆ ನಿಲ್ದಾಣದ ನೆಲಹಾಸಿನ ಮೇಲೆಯೇ ಮಲಗಿರುವುದನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದು, ಬಹುಶಃ ಇವರೆಲ್ಲರೂ ನಾಯಕ ಮಹೇಂದ್ರ ಸಿಂಗ್​ ಧೋನಿಯ ಅಪ್ಪಟ ಅಭಿಮಾನಿಗಳಾಗಿದ್ದಾರೆ. ಧೋನಿಗೆ ಇದು ಕೊನೆಯ ಪಂದ್ಯ ಮತ್ತು ಐಪಿಎಲ್​ ಎಂದೇ ಹೇಳಲಾಗಿದೆ. ಹೀಗಾಗಿ ತಮ್ಮ ನೆಚ್ಚಿನ ನಾಯಕನಿಗೆ ಅದ್ಧೂರಿ ಬೀಳ್ಕೊಡುಗೆ ನೀಡುವುದಕ್ಕಾಗಿ ಫ್ಯಾನ್ಸ್​ ಮಳೆ, ಚಳಿಯನ್ನು ಲೆಕ್ಕಿಸದೇ ರಾತ್ರಿ ಕಳೆದಿದ್ದಾರೆ.

'ನಾನು ಅಹಮದಾಬಾದ್ ರೈಲು ನಿಲ್ದಾಣಕ್ಕೆ ರಾತ್ರಿ 3 ಗಂಟೆಗೆ ಹೋದಾಗ, ಸಿಎಸ್​ಕೆ ತಂಡದ ಜೆರ್ಸಿ ಧರಿಸಿದ್ದವರನ್ನು ನೋಡಿದೆ. ಕೆಲವರು ಮಲಗಿದ್ದರು, ಕೆಲವರು ಎಚ್ಚರದಲ್ಲಿದ್ದರು. ನೀವಿಲ್ಲಿಗೆ ಯಾಕಾಗಿ ಬಂದಿದ್ದೀರಿ ಎಂದು ಕೇಳಿದೆ. ಅವರು ತಂಡವನ್ನು ಬೆಂಬಲಿಸಲು ಬಂದಿದ್ದೇವೆ ಎಂದರೆ, ಇನ್ನು ಕೆಲವರು ಧೋನಿಗಾಗಿಯೇ ಬಂದಿದ್ದೇವೆ ಎಂದರು ಅಂತಾ ನೆಟ್ಟಿಗರೊಬ್ಬರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಟಿಕೆಟ್​ ಕಡ್ಡಾಯ:ಮಳೆ ಕಾರಣಕ್ಕಾಗಿ ಮುಂದೂಡಿಕೆಯಾಗಿರುವ ಪಂದ್ಯ ಇಂದು ಮರು ನಡೆಯಲಿದ್ದು, ಇದಕ್ಕಾಗಿ ಟಿಕೆಟ್​ ಕಡ್ಡಾಯ ಮಾಡಲಾಗಿದೆ. 'ಕ್ರೀಡಾಂಗಣ ಪ್ರವೇಶ ಬಯಸಿರುವವರು ಟಿಕೆಟ್​ ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ನಿನ್ನೆಯ ಟಿಕೆಟ್​ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಿ' ಎಂದು ಬಿಸಿಸಿಐ ಹೇಳಿದೆ.

ಇಂದೂ ಕೂಡ ಮಳೆ ಬಂದಲ್ಲಿ ರಾತ್ರಿ 12 ಗಂಟೆಯವರೆಗೆ ಕಾದು ಬಳಿಕ 5 ಓವರ್​ ಆಟ ನಡೆಸಲಾಗುವುದು. ಇದಾಗದಿದ್ದಲ್ಲಿ ಸೂಪರ್​ ಓವರ್​ ನಡೆಸಲಾಗುತ್ತದೆ. ಇದು ಕೂಡ ಸಾಧ್ಯವಾಗದಿದ್ದಲ್ಲಿ, ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಲ್ಲಿರುವ ಗುಜರಾತ್​ ಟೈಟಾನ್ಸ್​ ಅನ್ನು ಚಾಂಪಿಯನ್​ ಆಗಿ ಘೋಷಿಸಲಾಗುತ್ತದೆ.

ಇದನ್ನೂ ಓದಿ:'ಸಿಎಸ್​ಕೆ ಐಪಿಎಲ್ ​ರನ್ನರ್​ ಅಪ್​': ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ 'ಆ ಚಿತ್ರ'

ABOUT THE AUTHOR

...view details