ಕರ್ನಾಟಕ

karnataka

ಐಪಿಎಲ್​ ಅದ್ಭುತ ಪ್ರದರ್ಶನ ಮಧ್ಯಮ ಕ್ರಮಾಂಕಕ್ಕೆ ರಹಾನೆಗೆ ಸ್ಥಾನ: ಸ್ಕೈಗೆ ಕೊಕ್​

By

Published : Apr 25, 2023, 5:12 PM IST

ಎರಡನೇ ಬಾರಿಗೆ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಅನ್ನು ಭಾರತ ಆಡುತ್ತಿದೆ. ಇದಕ್ಕೆ ಬಿಸಿಸಿಐ ತಂಡ ಪ್ರಕಟ ಮಾಡಿದ್ದು 15 ತಿಂಗಳ ಬಳಿಕ ರಹಾನೆಗೆ ತಂಡದಲ್ಲಿ ಮತ್ತೆ ಅವಕಾಶ ಸಿಕ್ಕಿದೆ.

ರಹಾನೆ
Ajinkya Rahane

ನವದೆಹಲಿ: ಐಪಿಎಲ್ 2023ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ ಡಬ್ಲ್ಯುಟಿಸಿ ಫೈನಲ್ ಟಿಕೆಟ್ ಪಡೆದುಕೊಂಡಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಐಪಿಎಲ್‌ನಲ್ಲಿ ಅಜಿಂಕ್ಯ ರಹಾನೆ ಉತ್ತಮ ಲಯದಲ್ಲಿ ಬ್ಯಾಟ್​ ಬೀಸುತ್ತಿದ್ದಾರೆ. ಈ ಕಾರಣದಿಂದಾಗಿ, ಅನುಭವಿ ರಹಾನೆಗೆ ಡಬ್ಲ್ಯುಟಿಸಿ ಫೈನಲ್‌ಗಾಗಿ ಟೀಮ್ ಇಂಡಿಯಾದಲ್ಲಿ ಸೇರಿಸಲಾಗಿದೆ.

ರಹಾನೆ ಕೆಲಕಾಲ ಭಾರತ ತಂಡದಿಂದ ಹೊರಗುಳಿದಿದ್ದರು. ಆದರೆ ಇದೀಗ ಮತ್ತೊಮ್ಮೆ ತನ್ನನ್ನು ತಾನು ಸಾಬೀತುಪಡಿಸಲು ಮತ್ತೊಂದು ಅವಕಾಶ ಸಿಕ್ಕಿದೆ. 2023ರ ಜೂನ್ 7 ರಿಂದ 11 ರವರೆಗೆ, ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸ್ಪರ್ಧಿಸಲಿದೆ.

ಅವರು ಇದುವರೆಗೆ ಈ ಲೀಗ್‌ನಲ್ಲಿ ಐದು ಪಂದ್ಯಗಳಲ್ಲಿ 52.25 ಸರಾಸರಿ ಮತ್ತು 199.04 ಸ್ಟ್ರೈಕ್ ರೇಟ್‌ನಲ್ಲಿ 209 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಗಾಯಗೊಂಡಿರುವ ಕಾರಣ, ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಅಜಿಂಕ್ಯಾ ರಹಾನೆಗೆ ಅವಕಾಶ ಸಿಕ್ಕಿದೆ. ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಅಯ್ಯರ್​ ಜಾಗದಲ್ಲಿ ಪಾದಾರ್ಪಣೆ ಮಾಡಿದ ಸೂರ್ಯ ಕುಮಾರ್​ ಯಾದವ್​ಗೆ ಮಧ್ಯಮ ಕ್ರಮಾಂಕದಲ್ಲಿ ಮಣೆಹಾಕಲಾಗಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸೂರ್ಯ ಅವರು ಹ್ಯಾಟ್ರಿಕ್​ ಬಾರಿ ಶೂನ್ಯಕ್ಕೆ ಔಟ್ ಆಗಿದ್ದರು. ಇದೇ ಕಾರಣದಿಂದ ಅವರಿಗೆ 15ರ ಪಟ್ಟಿಯಲ್ಲಿ ಜಾಗ ಸಿಕ್ಕಿಲ್ಲ.

ಅಜಿಂಕ್ಯ ರಹಾನೆ ಅವರ ಕ್ರಿಕೆಟ್ ವೃತ್ತಿಜೀವನ: ಮುಂಬೈನ ಅಗ್ರ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅವರು ತಮ್ಮ ಎರಡನೇ ರಣಜಿ ಋತುವಿನಲ್ಲಿ ಮುಂಬೈ ತಂಡ 38ನೇ ಬಾರಿಗೆ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಟೂರ್ನಿಯಲ್ಲಿ ರಹಾನೆ 1089 ರನ್ ಗಳಿಸಿದ್ದರು. 2009-10 ಮತ್ತು 2010-11ರ ರಣಜಿ ಟೂರ್ನಿಯಲ್ಲಿ ರಹಾನೆ 3-3 ಶತಕಗಳನ್ನು ಬಾರಿಸಿದ್ದರು.

ಆಸ್ಟ್ರೇಲಿಯಾದಲ್ಲಿ ನಡೆದ ಉದಯೋನ್ಮುಖ ಆಟಗಾರರ ಟೂರ್ನಮೆಂಟ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನದಿಂದಾಗಿ, ಅವರು ಇಂಗ್ಲೆಂಡ್ ಪ್ರವಾಸಕ್ಕಾಗಿ ಏಕದಿನ ತಂಡದಲ್ಲಿ ಸ್ಥಾನ ಪಡೆದರು. ರಹಾನೆ ಇದುವರೆಗೆ 82 ಟೆಸ್ಟ್ ಪಂದ್ಯಗಳ 140 ಇನ್ನಿಂಗ್ಸ್‌ಗಳಲ್ಲಿ 4931 ರನ್ ಗಳಿಸಿದ್ದಾರೆ. ಆದರೆ 2021-22ರ ಟೆಸ್ಟ್ ಕ್ರಿಕೆಟ್‌ನಲ್ಲಿ ರಹಾನೆ ಕಳಪೆ ಫಾರ್ಮ್‌ನ್ನು ಎದುರಿಸಿದರು. ಆ ಸಮಯದಲ್ಲಿ, ರಹಾನೆ 15 ಟೆಸ್ಟ್ ಪಂದ್ಯಗಳಲ್ಲಿ ಕೇವಲ 20.25ರ ಸರಾಸರಿಯಲ್ಲಿ ರನ್ ಗಳಿಸಿದರು. ಈ 15 ಟೆಸ್ಟ್‌ಗಳಲ್ಲಿ 27 ಇನ್ನಿಂಗ್ಸ್‌ಗಳಲ್ಲಿ ಅವರು ಗಳಿಸಿದ್ದು ಕೇವಲ 3 ಅರ್ಧಶತಕ ದಾಖಲಿಸಿದ್ದರು.

ರಹಾನೆ ತಮ್ಮ ವೃತ್ತಿಜೀವನದಲ್ಲಿ 90 ಏಕದಿನ ಪಂದ್ಯಗಳ 87 ಇನ್ನಿಂಗ್ಸ್‌ಗಳಲ್ಲಿ 2,962 ರನ್ ಗಳಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ಅವರು 20 ಪಂದ್ಯಗಳ 20 ಇನ್ನಿಂಗ್ಸ್‌ಗಳಲ್ಲಿ 375 ರನ್ ಗಳಿಸಿದ್ದಾರೆ. ಇದರಲ್ಲಿ ರಹಾನೆ ಅವರ ಗರಿಷ್ಠ ಸ್ಕೋರ್ 61 ರನ್ ಆಗಿದೆ.

ರಹಾನೆ ನಾಯಕತ್ವ:29 ಡಿಸೆಂಬರ್ 2020 ರಂದು ಮೆಲ್ಬೋರ್ನ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿತ್ತು. ಆ ಸಮಯದಲ್ಲಿ ಭಾರತ ತಂಡದ ನಾಯಕತ್ವವನ್ನು ಅಜಿಂಕ್ಯ ರಹಾನೆ ನಿಭಾಯಿಸಿದ್ದರು. ಈ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರಹಾನೆ ಶತಕ ಸಿಡಿಸಿದ್ದರು. ಅವರು 223 ಎಸೆತಗಳಲ್ಲಿ 112 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳನ್ನು ಹೊಡೆದರು.

WTC ಫೈನಲ್‌ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊ. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್.

ಇದನ್ನೂ ಓದಿ:ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೆ ಭಾರತ ತಂಡ ಪ್ರಕಟ: 15 ತಿಂಗಳ ಬಳಿಕ ರಹಾನೆ ವಾಪಸ್​

ABOUT THE AUTHOR

...view details