ಕರ್ನಾಟಕ

karnataka

20-30 ರನ್ ಹೆಚ್ಚು​ ಗಳಿಸುತ್ತಿದ್ದರೆ ಚೆನ್ನಾಗಿರುತ್ತಿತ್ತು, ತಂಡದ ಬಗ್ಗೆ ಹೆಮ್ಮೆ ಇದೆ: ರೋಹಿತ್ ಶರ್ಮಾ

By PTI

Published : Nov 20, 2023, 8:10 AM IST

Rohit Sharma on World Cup loss: ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಪ್ ಕನಸು ನುಚ್ಚುನೂರಾಯಿತು. ಆಸ್ಟ್ರೇಲಿಯಾ ಗೆಲುವಿನ ಕೇಕೆ ಹಾಕುತ್ತಿದ್ದಂತೆ ಭಾರತೀಯ ಆಟಗಾರರು ಭಾವುಕರಾಗಿ ಭಾರ ಹೆಜ್ಜೆಗಳೊಂದಿಗೆ ಕ್ರೀಡಾಂಗಣದಿಂದ ಡ್ರೆಸ್ಸಿಂಗ್‌ ರೂಂನೆಡೆಗೆ ತೆರಳಿದರು. ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ ಹೇಳಿದ್ದಿಷ್ಟು..

Rohit Sharma
20ರಿಂದ 30 ರನ್​ ಗಳಿಸಿದ್ದರೆ ಚೆನ್ನಾಗಿರುತ್ತಿತ್ತು, ತಂಡದ ಬಗ್ಗೆ ನನಗೆ ಹೆಮ್ಮೆಯಿದೆ: ರೋಹಿತ್ ಶರ್ಮಾ

ಅಹಮದಾಬಾದ್:ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಬೇಕೆನ್ನುವ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹರಕೆ, ಹಾರೈಕೆ ಕೈಗೂಡಲಿಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದರೊಂದಿಗೆ ಭಾರತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಅವಕಾಶ ಕೈತಪ್ಪಿತು. ಪಂದ್ಯದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಿರಾಸೆ ಅನುಭವವಿಸಿ, ಭಾವುಕರಾದರು. ಕಣ್ಣೀರಿನೊಂದಿಗೆ ಮೈದಾನದಿಂದ ಡ್ರೆಸ್ಸಿಂಗ್ ರೂಂಗೆ ತೆರಳಿದ ದೃಶ್ಯ ಕಂಡುಬಂತು.

ಬಳಿಕ ಮಾತನಾಡಿದ ರೋಹಿತ್ ಶರ್ಮಾ, ''ಫೈನಲ್‌ ಪಂದ್ಯದಲ್ಲಿ ನಮ್ಮ ತಂಡದ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ. ಇದರಿಂದ ಫಲಿತಾಂಶ ನಮ್ಮ ಪರವಾಗಿ ಮೂಡಿಬರಲಿಲ್ಲ. ಆದರೆ, ಇಡೀ ತಂಡದ ಸಾಧನೆಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ'' ಎಂದರು.

"ಅಂದುಕೊಂಡಂತೆ ಫಲಿತಾಂಶ ದಾಖಲಿಸಲು ಸರಿಯಾದ ದಾರಿಯಲ್ಲಿ ನಾವು ಸಾಗಲಿಲ್ಲ. 20ರಿಂದ 30 ರನ್​ ಹೆಚ್ಚು ಗಳಿಸಿದ್ದರೆ ಚೆನ್ನಾಗಿರುತ್ತಿತ್ತು. ನಾವು ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ಎಡವಿದೆವು'' ಎಂದ ಅವರು, ''ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಬ್ಯಾಟಿಂಗ್ ಮಾಡುವಾಗ ತಂಡವು 280ರ ಆಸುಪಾಸಿನಲ್ಲಿ ಸ್ಕೋರ್ ಮಾಡಲಿದೆ ಅಂದುಕೊಂಡಿದ್ದೆವು. ಆರಂಭಿಕ ಹೊಡೆತಗಳಿಂದ ಚೇತರಿಸಿಕೊಳ್ಳಲು ಹಾಗೂ ತಂಡವನ್ನು ಸುಸ್ಥಿರಗೊಳಿಸಲು ಕೊಹ್ಲಿ ಮತ್ತು ರಾಹುಲ್ ಜೊತೆಯಾಟವಾಡಿದರು. ಬಳಿಕ ನಾವು ವಿಕೆಟ್ ಕಳೆದುಕೊಳ್ಳುತ್ತಲೇ ಹೋದೆವು'' ಎಂದು ಹೇಳಿದರು.

''ಫೈನಲ್​ನಲ್ಲಿ ಶತಕ ದಾಖಲಿಸಿದ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಾಬುಶೇನ್ ಬ್ಯಾಟಿಂಗ್ ಆಸೀಸ್‌ ತಂಡವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಈ ಇಬ್ಬರು ಗೆಲುವಿಗಾಗಿ 192 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದರು. ಆಸ್ಟ್ರೇಲಿಯಾ ಮೂರು ವಿಕೆಟ್ ಕಳೆದುಕೊಂಡ ನಂತರ ದೊಡ್ಡ ಜೊತೆಯಾಟ ಮುಂದುವರಿಸಿತು. ನಾವು ಆರಂಭಿಕ ಹಂತದಲ್ಲಿ ವಿಕೆಟ್‌ಗಳನ್ನು ಬಯಸಿದ್ದೆವು. ಆದರೆ, ಟ್ರಾವಿಸ್ ಹೆಡ್ ಮತ್ತು ಮಾರ್ನಸ್‌ ಅವರು ಪರಿಪೂರ್ಣ ಪ್ರದರ್ಶನ ನೀಡಿದರು'' ಎಂದು ತಿಳಿಸಿದರು.

''ಬೆಳಕಿನಲ್ಲಿ ಬ್ಯಾಟಿಂಗ್ ಮಾಡಲು ವಿಕೆಟ್ ಉತ್ತಮ ಎಂದು ನಾನು ಭಾವಿಸಿದ್ದೆ. ಆದರೆ, ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ದೊಡ್ಡ ಜೊತೆಯಾಟ ಮಾಡಿದ ಕೀರ್ತಿ ಆಸೀಸ್ ತಂಡದ ಇಬ್ಬರು ಆಟಗಾರರಿಗೆ ಸಲ್ಲುತ್ತದೆ'' ಎಂದು ರೋಹಿತ್​ ಶರ್ಮಾ ಹೇಳಿದರು.

ಇದನ್ನೂ ಓದಿ:ಅಂದು ಆಟಗಾರನಾಗಿ ಇಂದು ಕೋಚ್‌ ಆಗಿ ನನಸಾಗದೇ ಉಳಿದ ವಿಶ್ವಕಪ್‌! ಫೈನಲ್‌ ಸೋಲಿನ ನಂತರ ದ್ರಾವಿಡ್ ಹೇಳಿದ್ದೇನು?

ABOUT THE AUTHOR

...view details