ಕರ್ನಾಟಕ

karnataka

ಭಾರತ-ಬಾಂಗ್ಲಾ ಮೊದಲ ಏಕದಿನ ಇಂದು: ಮುಂದಿನ ವಿಶ್ವಕಪ್‌ಗೆ ರೋಹಿತ್‌ ಟೀಂ ತಾಲೀಮು

By

Published : Dec 4, 2022, 10:09 AM IST

ಇಂದಿನಿಂದ ಶುರುವಾಗಲಿರುವ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶವನ್ನು ಭಾರತ ಎದುರಿಸಲಿದೆ. ವಿರಾಟ್​ ಕೊಹ್ಲಿ, ನಾಯಕ ರೋಹಿತ್​ ಶರ್ಮಾ ತಂಡ ಸೇರಿದ್ದು, ಮುಂದಿನ ವರ್ಷದ ಏಕದಿನ ವಿಶ್ವಕಪ್​ಗೆ ತಂಡ ಸಿದ್ಧತೆ ನಡೆಸಲು ಸರಣಿ ನೆರವಾಗಲಿದೆ.

first-odi-between-india-and-bangladesh
ಮೊದಲ ಏಕದಿನ ಪಂದ್ಯ

ಢಾಕಾ(ಬಾಂಗ್ಲಾದೇಶ):ಮಳೆ ಕಾಟದ ಕ್ರಿಕೆಟ್‌ ಸರಣಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋಲಿನ ಬಳಿಕ ಇಂದಿನಿಂದ ಆರಂಭವಾಗುವ 3 ಪಂದ್ಯಗಳ ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ-ಬಾಂಗ್ಲಾದೇಶ ಪರಸ್ಪರ ಸೆಣಸಾಡಲಿವೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​ ತಂಡಕ್ಕೆ ವಾಪಸ್​ ಆಗಿದ್ದು, ಬಲ ಹೆಚ್ಚಿಸಿದೆ.

ಮುಂದಿನ ವರ್ಷ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​ಗೆ ಪೂರ್ವಭಾವಿಯಾಗಿ ಆಟಗಾರರಿಗೆ ಹೊಣೆಗಾರಿಕೆ ಮತ್ತು ಆಯಾ ಕ್ರಮಾಂಕಕ್ಕೆ ಬಲ ನೀಡಲು ಸಜ್ಜು ಮಾಡಲಾಗುತ್ತಿದೆ. ಬ್ಯಾಟಿಂಗ್​ಗೆ ನೆರವಾಗಲಿರುವ ಢಾಕಾದ ಶೇರ್​ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ರನ್​ ಮಳೆ ಸುರಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ತಂಡದ ಸಂಯೋಜನೆಗೆ ಸರಣಿ ನೆರವು:ಭಾರತ ಕ್ರಿಕೆಟ್​ ತಂಡ ನಿರಂತರ ಕ್ರಿಕೆಟ್​ ಆಡುತ್ತಿದ್ದರೂ ತಂಡದ ಸಂಯೋಜನೆ ಇನ್ನೂ ಅಂತಿಮಗೊಂಡಿಲ್ಲ. ಈ ವರ್ಷ ಆಡಿರುವ 27 ಏಕದಿನ ಪಂದ್ಯದಲ್ಲಿ ಶಿಖರ್ ಧವನ್ 25 ಪಂದ್ಯಗಳನ್ನಾಡಿದರೆ, ಉಳಿದವರು 10 ಪಂದ್ಯಗಳಲ್ಲಿ ಮಾತ್ರ ಭಾಗಿಯಾಗಿದ್ದಾರೆ. ಫಾರ್ಮ್​ಗೆ ಬಂದಿರುವ ವಿರಾಟ್​ ಕೊಹ್ಲಿ, ನಾಯಕ ರೋಹಿತ್ ಶರ್ಮಾ ತಮ್ಮ ಖದರ್​ ತೋರಿಸಬೇಕಿದೆ.

ನ್ಯೂಜಿಲ್ಯಾಂಡ್​ ಸರಣಿಯಲ್ಲಿ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಅದ್ಭುತ ಪ್ರದರ್ಶನ ನೀಡಿದ್ದರು. ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬುದು ಈ ಸರಣಿಯಲ್ಲೇ ನಿರ್ಣಯಿಸಬೇಕಿದೆ. ಶಿಖರ್ ಧವನ್​​ ಆರಂಭಿಕರಾಗಿ ಕಣಕ್ಕಿಳಿಯುವ ಕಾರಣ ರಾಹುಲ್​ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕಿದೆ.

ಬೌಲಿಂಗ್​ ವಿಭಾಗಕ್ಕೆ ಬೇಕಿದೆ ಸರ್ಜರಿ:ತಂಡದ ಮುಂಚೂಣಿ ಬೌಲರ್​ ಜಸ್ಪ್ರೀತ್​ ಬೂಮ್ರಾ ಗಾಯದಿಂದ ಚೇತರಿಸಿಕೊಳ್ಳದಿರುವುದು ಬೌಲಿಂಗ್​ ಪಡೆ ಸತ್ವ ಕಳೆದುಕೊಂಡಿದೆ. ಈ ಹಿರಿಯ ವೇಗಿ ಸರಣಿ ಆರಂಭಕ್ಕೂ ಮೊದಲು ಗಾಯಗೊಂಡು ಹೊರಬಿದ್ದಿದ್ದಾರೆ. ಮೊಹಮ್ಮದ್​ ಸಿರಾಜ್​, ಶಾರ್ದೂಲ್ ಠಾಕೂರ್, ದೀಪಕ್​ ಚಹರ್​ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕಿದೆ. ಇನ್ನುಳಿದಂತೆ ವೇಗಿ ಉಮ್ರಾನ್​ ಮಲಿಕ್​, ಮೊಹಮ್ಮದ್ ಶಮಿ ಬದಲಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರೂ ಆಡುವ ಹನ್ನೊಂದರಲ್ಲಿ ಅವಕಾಶ ಪಡೆಯುವುದು ಡೌಟ್​.

ಬಾಂಗ್ಲಾಗೆ ಸರಣಿ ಗೆಲ್ಲುವ ತವಕ:ವಿಶ್ವಕಪ್​ಗೆ ನೇರ ಅರ್ಹತೆ ಪಡೆದಿರುವ ಬಾಂಗ್ಲಾದೇಶ ತವರಿನಲ್ಲಿ ತನ್ನ ಪರಾಕ್ರಮ ಮುಂದುವರಿಸುವ ಉತ್ಸುಕದಲ್ಲಿದೆ. ಈ ವರ್ಷ ಆಡಿರುವ 8 ಸರಣಿಗಳಲ್ಲಿ 6 ಗೆದ್ದು 2 ರಲ್ಲಿ ಸೋತಿದೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್​ ಇಂಡೀಸ್​ ವಿರುದ್ಧದ ಗೆಲುವು ತಂಡದ ಮನೋಬಲ ಹೆಚ್ಚಿಸಿದೆ.

ತಮೀಮ್ ಇಕ್ಬಾಲ್ ಮತ್ತು ಟಸ್ಕಿನ್ ಅಹ್ಮದ್ ಗಾಯಗೊಂಡಿರುವುದು ತಂಡದ ಬಲ ಕುಗ್ಗಿಸುವ ಸಾಧ್ಯತೆ ಇದೆ. ನಾಯಕತ್ವದ ಜವಾಬ್ದಾರಿ ಹೊತ್ತಿರುವ ಲಿಟ್ಟನ್ ದಾಸ್ ನೇತೃತ್ವದಲ್ಲಿ ಆಟಗಾರರು ಹೇಗೆ ಸಹಕರಿಸಲಿದ್ದಾರೆ ಎಂಬುದು ಪರೀಕ್ಷೆಗೆ ಒಳಪಡಲಿದೆ. ಎಬಾಡೋತ್ ಹೊಸೈನ್ ಮತ್ತು ಮುಸ್ತಾಫಿಜುರ್ ರೆಹಮಾನ್ ವೇಗದ ನೇತೃತ್ವದ ವಹಿಸಿಕೊಳ್ಳಲಿದ್ದಾರೆ.

ತಂಡಗಳು ಹೀಗಿವೆ..: ಭಾರತ-ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್​ ಕೀಪರ್​), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಕುಲದೀಪ್ ಸೇನ್, ಶಹಬಾಜ್ ಅಹ್ಮದ್, ಉಮ್ರಾನ್ ಮಲಿಕ್.

ಬಾಂಗ್ಲಾದೇಶ:ಲಿಟ್ಟನ್ ದಾಸ್ (ನಾಯಕ), ನೂರುಲ್ ಹಸನ್ (ವಿಕೆಟ್​ ಕೀಪರ್​), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫೀಕರ್ ರಹೀಮ್, ಅಫೀಫ್ ಹೊಸೈನ್, ಮಹಮದುಲ್ಲಾ, ಮೆಹದಿ ಹಸನ್ ಮಿರಾಜ್, ಮುಸ್ತಾಫಿಜರ್ ರೆಹಮಾನ್, ಹಸನ್ ಮಹಮೂದ್, ಎಬಾಡೋತ್ ಹೊಸೈನ್, ಯಾಸಿರ್ ಅಲಿ, ನಜ್ಮುಲ್ ಹೊಸ್, ನಸುಮ್ ಅಹಮದ್.

ಪಂದ್ಯ: ಢಾಕಾದ ಶೇರ್​ ಎ ಬಾಂಗ್ಲಾ ಮೈದಾನ, ಸಮಯ:11.30ಕ್ಕೆ

ಇದನ್ನೂ ಓದಿ:ಮೆಸ್ಸಿ ದಾಖಲೆ! ಆಸ್ಟ್ರೇಲಿಯಾ ಮಣಿಸಿ ಕ್ವಾರ್ಟರ್​ಫೈನಲ್​ ತಲುಪಿದ ಅರ್ಜೆಂಟೀನಾ

ABOUT THE AUTHOR

...view details